ಗದಗ ಪೊಲೀಸರು ಅಂತರ್ ಜಿಲ್ಲಾ ಕಳ್ಳರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಹಲವು ಜಿಲ್ಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಈ 11 ಆರೋಪಿಗಳ ಭಾಗವಹಿಸಿದ್ದರು ಎನ್ನುವ ನಿಜಾಂಶ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹1,07,87,080 ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 587 ಗ್ರಾಂ ಬಂಗಾರದ ಆಭರಣ, 3,822 ಗ್ರಾಂ ಬೆಳ್ಳಿಯ ಆಭರಣ, 2 ಮೋಟಾರ್ ಸೈಕಲ್ಗಳು, ಒಂದು ಗೂಡ್ಸ್ ವಾಹನ ಹಾಗೂ ಒಂದು ಕಾರು ಸೇರಿವೆ. ಬಂಧಿತರು ಮನೆಗಳು ಖಾಲಿ ಇರುವ ಸಮಯವನ್ನು ಗುರಿಯಾಗಿಸಿಕೊಂಡು ಪೂರ್ವ ಯೋಜಿತವಾಗಿ ಕಳ್ಳತನ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕಾರ್ಯಚಟುವಟಿಕೆಗಳು ಹಲವು ಜಿಲ್ಲೆಗಳಲ್ಲಿಯೂ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣವು ಗದಗ ನಗರದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಡಿಎಸ್ಪಿ ಮುರ್ತುಜಾ ಖಾದ್ರಿ ಭಂಡಾರು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಬುಧವಾರ ಈ ಪ್ರಕರಣ ಬಹಿರಂಗವಾಗಿದ್ದು, ಕಳ್ಳರ ಬಂಧನಕ್ಕೆ ಗದಗ ಪೊಲೀಸರ ತಕ್ಷಣದ ಕ್ರಮ ಹಾಗೂ ಕಾರ್ಯಕ್ಷಮತೆಯನ್ನು ಜನಸಾಮಾನ್ಯರು ಪ್ರಶಂಸಿಸಿದ್ದಾರೆ.




