ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿಗಳು, ಕಸದ ವಿಲೇವಾರಿ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಈ ಟೀಕೆಗೆ ಪ್ರತಿಕ್ರಿಯೆಯಾಗಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ದಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವು ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಕಿರಣ್ ಮಜುಂದಾರ್ ಶಾ ಅವರ ಟೀಕೆ ವೈಯಕ್ತಿಕ ಅಜೆಂಡಾದಿಂದ ಪ್ರೇರಿತವಾಗಿದೆ, ಹಿಂದಿನ ಬಿಜೆಪಿ ಸರ್ಕಾರದ ಕಾಲದಲ್ಲಿ ಅವರು ಏಕೆ ಮೌನವಾಗಿದ್ದರು ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕಿರಣ್ ಮಜುಂದಾರ್ ಶಾ, ತಮಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲವೆಂದು ಸ್ಪಷ್ಟಪಡಿಸಿದರು. ಹಿಂದಿನ ಸರ್ಕಾರಗಳನ್ನೂ ಟೀಕಿಸಿದ್ದೇನೆ. ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುವುದು ಹಾಗೂ ಜನರ ಹಿತಕ್ಕಾಗಿ ಕೆಲಸ ಮಾಡುವುದೇ ನನ್ನ ಉದ್ದೇಶ ಎಂದು ಅವರು ಹೇಳಿದರು. ಜೊತೆಗೆ, ಬೆಂಗಳೂರಿನ 10–15 ರಸ್ತೆಗಳನ್ನು ನಾವು ಸ್ವತಃ ದುರಸ್ತಿ ಮಾಡಲಿದ್ದೇವೆ ಎಂದೂ ತಿಳಿಸಿದರು.
ಈ ವಿವಾದದ ಬಳಿಕ, ಕಿರಣ್ ಮಜುಂದಾರ್ ಶಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸಿಹಿತಿಂಡಿ ಹಂಚಿಕೊಂಡು, ನಗರದಲ್ಲಿನ ರಸ್ತೆಗುಂಡಿ ದುರಸ್ತಿ ಹಾಗೂ ಮೂಲಸೌಕರ್ಯ ವೃದ್ಧಿ ಕುರಿತು ಚರ್ಚೆ ನಡೆದಿರುವುದು ತಿಳಿದುಬಂದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

