ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ನಿರ್ದೇಶಕರಲ್ಲಿ ಕೋಡ್ಲು ರಾಮಕೃಷ್ಣ ಸಹ ಒಬ್ಬರು. “ಮಕ್ಕಳ ತಂಟೆಗೆ ಬಂದ್ರೆ ಹುಷಾರ್” ಎಂಬ ಮಕ್ಕಳ ಚಿತ್ರವನ್ನು ಕೋಡ್ಲು ರಾಮಕೃಷ್ಣ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಚಿತ್ರ ಏಪ್ರಿಲ್ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ. ಇದು ಕೋಡ್ಲು ರಾಮಕೃಷ್ಣ ಅವರು ನಿರ್ದೇಶಿಸಿರುವ ಐದನೇ ಮಕ್ಕಳ ಚಿತ್ರ. ಕನ್ನಡದಲ್ಲಿ ಹೆಚ್ಚು ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರೆಂದರೆ ಕೋಡ್ಲು ರಾಮಕೃಷ್ಣ ಅವರೆ ಎನ್ನಬಹುದು.
ಯಾರ ತಂಟೆಗೆ ಹೋದ್ರು ಪರವಾಗಿಲ್ಲ. ಮಕ್ಕಳ ತಂಟೆಗೆ ಹೋದ್ರೆ ಏನಲ್ಲಾ ಆಗುತ್ತದೆ ಎಂಬ ಅಂಶ ಈ ಚಿತ್ರದಲ್ಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ನಾರಾಯಣ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕ್ರಿಷ್ ಜೋಶಿ ಕಥೆ, ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ನಿರ್ದೇಶಕ ಕೋಡ್ಲು ರಾಮಕೃಷ್ಣ ಬರೆದಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ವಸಂತಕುಮಾರ್ ಈ ಚಿತ್ರದ ಸಂಕಲನಕಾರರು.
ವಿನಯ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಶಿವಧ್ವಜ್, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಭವಾನಿ ಪ್ರಕಾಶ್, ಸ್ನೇಹಭಟ್, ಕುಮಾರಿ ಗಗನ, ಐಶ್ವರ್ಯ, ರಶಿಕಾ, ಬೇಬಿಶ್ರೀ, ಪ್ರತಿಷ್ಟ, ಸರ್ವಜ್ಞ, ತರುಣ್, ವಿಷ್ಣು, ಸಂಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.