ಮಲಯಾಳಂನಲ್ಲಿ ಮೊದಲ ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಿರ್ದೇಶಕನನ್ನು ಪೊಲೀಸರು, ಸಿನಿಮಾ ಸೆಟ್ಟಿನಿಂದಲೇ ಬಂಧಿಸಿ ಕರೆದೊಯ್ದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಲಯಾಳಂನ ಪ್ರೇಮಂ ಖ್ಯಾತಿಯ ನಟ ನಿವಿನ್ ಪೌಲಿ ಮತ್ತು ಮಂಜು ವಾರಿಯರ್ ನಟನೆಯ ಪಡುವೆಟ್ಟು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ, ಡೈರೆಕ್ಟರ್ ಕೃಷ್ಣರನ್ನ, ಈ ಸಿನಿಮಾ ಸೆಟ್‌ಗೆ ಬಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಿಳೆಯೊಬ್ಬರು ಕೃಷ್ಣ ಎರಡು ವರ್ಷದಿಂದ ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೃಷ್ಣ ನನ್ನ ಅನುಮತಿ ಇಲ್ಲದೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದ ನಾನು ಪ್ರೆಗ್ನೆಂಟ್ ಆಗಿದ್ದೆ. ಆದ್ರೆ ನನ್ನ ಗರ್ಭಪಾತ ಮಾಡಿಸಲಾಯಿತು. ಬರೀ ದೈಹಿಕ ಹಿಂಸೆ ಮಾತ್ರವಲ್ಲದೇ, ಮಾನಸಿಕ ಹಿಂಸೆಯನ್ನೂ ನೀಡಲಾಗಿದೆ ಎಂದು ಸಂತ್ರಸ್ತೆ, ಡೈರೆಕ್ಟರ್ ಕೃಷ್ಣ ವಿರುದ್ಧ ಆರೋಪ ಮಾಡಿದ್ದಾರೆ.
ಈ ಬಗ್ಗೆ ಯಾರಲ್ಲಿಯೂ ಹೇಳಬಾರದೆಂದು ಬೆದರಿಕೆ ಹಾಕಲಾಗಿತ್ತು. ಇಂದು ನನಗೆ ದೂರು ನೀಡಲು ಸಾಧ್ಯವಾಯಿತು. ವಿಚಾರಣೆ ಮುಗಿಯುವವರೆಗೂ ಶೂಟಿಂಗ್ ಸ್ಥಗಿತಗೊಳಿಸಬೇಕು ಎಂದು ಮಹಿಳೆ ವಿನಂತಿಸಿದ್ದಾರೆ. ಈ ಕಾರಣಕ್ಕೆ ಪಡುವೆಟ್ಟು ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಇನ್ನು ಪೊಲೀಸರು ಕೃಷ್ಣನನ್ನು ಬಂಧಿಸಿ, ಕೋರ್ಟ್‌ನಲ್ಲಿ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.