Mangaluru: RSS​ ಮುಖಂಡನಿಗೆ ಬಿಗ್ ರಿಲೀಫ್.. ಹೈಕೋರ್ಟ್ ಆದೇಶದಲ್ಲಿ ಏನಿದೆ.?

Mangaluru: ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದಡಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್​ ಆದೇಶಿಸಿದೆ.

ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು..

ನನ್ನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಎಫ್​​ಐಆರ್​ ಮತ್ತು ಬಂಟ್ವಾಳ ಜೆಎಂಎಫ್​​ಸಿ ಕೋರ್ಟ್​​ನಲ್ಲಿರುವ ಈ ಕುರಿತ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಪ್ರಭಾಕರ್ ಭಟ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಆರ್. ಕೃಷ್ಣಮೂರ್ತಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸುವುದರ ಮೂಲಕ ಆದೇಶಿಸಿದೆ.

ಇದೊಂದು ದುರುದ್ದೇಶದಿಂದ ಕೂಡಿರುವ ದೂರು..

ಇನ್ನೂ ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಇದೊಂದು ದುರುದ್ದೇಶದ ದೂರು. ಭಾಷಣ ಮಾಡಿದ 20 ದಿನಗಳ ನಂತರ ಈ ಎಫ್​ಐಆರ್​ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇವರ ಭಾಷಣದಿಂದ ಯಾರೂ ಪ್ರಚೋದನೆಗೆ ಒಳಗಾಗಿಲ್ಲ ಅಥವಾ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರಭಾಕರ್ ಭಟ್ ವಿರುದ್ಧ ದಾಖಲಿಸಲಾಗಿರುವ ಈ ದೂರು ಪೊಲೀಸರು ಪದೇ ಪದೇ ಕಾನೂನು ಪ್ರಕ್ರಿಯೆ ದುರುಪಯೋಗ ಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದ್ದು, ಪ್ರಕರಣವನ್ನು ರದ್ದುಗೊಳಿಸಬೇಕೆಂದು ನ್ಯಾಯ ಪೀಠಕ್ಕೆ ಮನವಿ ಮಾಡಿದ್ದಾರೆ.

ವಾದವನ್ನು ಆಲಿಸಿದ ಕೋರ್ಟ್​ನಿಂದ ವಿಚಾರಣೆ ಮುಂದೂಡಿಕೆ..

ಅಲ್ಲದೆ ಈ ವಾದವನ್ನು ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪ್ರಾಸಿಕ್ಯೂಷನ್​ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್ ಅವರಿಗೆ ನಿರ್ದೇಶಿಸಿತು. ಅಂತೆಯೇ ಪ್ರಾಸಿಕ್ಯೂಷನ್ ತನ್ನ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಕಲ್ಲಡ್ಕ ವಿರುದ್ದದ ಪ್ರಕರಣವೇನು..?

ಇನ್ನೂ ಪ್ರಮುಖವಾಗಿ ಕಳೆದ ಕೆಲ ತಿಂಗಳಷ್ಟೇ ಹತ್ಯೆಯಾಗಿದ್ದ ಸುಹಾಸ್ ಶೆಟ್ಟಿ ಅವರಿಗೆ ಮೇ 12 ರಂದು ಶ್ರದ್ದಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ಸಮಾಜದ ಸ್ವಾಸ್ಥ್ಯ ಕದಡುವಂತಹ , ಮತೀಯ ಗುಂಪುಗಳ ನಡುವೆ ವೈಮನಸ್ಸು ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 353,2ರ ಅಡಿಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

About The Author