Political News: ತಮಗೆ ಘೋಷಣೆಯಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಿರಾಕರಿಸಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವಯ ಅವರಿಗೆ ಗೌರವ ಡಾಕ್ಟರೇಟ್ ಡಿ.ಲಿಟ್ ಪದವಿ ಅನ್ನು ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ಸತೀಶ್ ನಯವಾಗಿಯೇ ತಿರಸ್ಕರಿಸಿದ್ದಾರೆ.
ನನ್ನ ತೀರ್ಮಾನವನ್ನು ಸ್ವಾಗತಿಸುತ್ತೀರೆಂದು ಭಾವಿಸುವೆ..
ಈ ಸಂಬಂಧ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸಚಿವ ಸತೀಶ್ ಪತ್ರ ಬರೆದಿದ್ದು, ವಿವಿ ವತಿಯಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್ ಪದವಿಯನ್ನು ಹಿಂಪಡೆಯಲು ಕೋರುತ್ತೇನೆ. ನನ್ನ ಈ ನಿರ್ಧಾರವನ್ನು ಅನ್ಯಥಾ ಭಾವಿಸದೆ ನಾನು ಸಂಪೂರ್ಣ ಮನಸ್ಸಿನಿಂದ ಕೈಗೊಂಡ ನಿರ್ಧಾರವಾಗಿದ್ದು, ಈ ತೀರ್ಮಾನವನ್ನು ಸ್ವಾಗತಿಸುತ್ತೀರೆಂದು ಭಾವಿಸುವುದಾಗಿ ಹೇಳಿದ್ದಾರೆ.
ನನ್ನ ಯೋಜನೆಗಳನ್ನ ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ನನ್ನ ಮೇಲಿದೆ..
ಗೌರವ ಡಾಕ್ಟರೇಟ್ ಪದವಿಯನ್ನು ನನಗೆ ನೀಡುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುತ್ತೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರುವಂತಹ ಗುರುತರವಾದ ಹೊಣೆಗಾರಿಕೆ ನನ್ನ ಮೇಲಿದೆ. ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇರುತ್ತದೆ ಎಂದಿದ್ದಾರೆ.
ಸನ್ಮಾನಿಸಿದ ವ್ಯವಸ್ಥಾಪನ ಮಂಡಳಿಗೆ ನಾನು ಹುತ್ಪೂರ್ತಕ ಅಭಾರಿ..
ರಾಜ್ಯ ಮುಕ್ತ ವಿವಿ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ಮಾರ್ಚ್ 27ರಂದು ವಿವಿಯ ಗೌರವ ಡಾಕ್ಟರೇಟ್ ಡಿ.ಲಿಟ್ ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ ವ್ಯವಸ್ಥಾಪನ ಮಂಡಳಿಗೆ ನಾನು ಹುತ್ಪೂರ್ತಕ ಅಭಾರಿಯಾಗಿದ್ದೇನೆ ಎನ್ನುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನಿರಾಕರಣೆ ಮಾಡುವ ತಮ್ಮದೇ ಆದ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಚಿವ ಸತೀಶ್..
ಇನ್ನೂ ಆರಂಭದ ದಿನಗಳಿಂದಲೂ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಆದ ಮಾರ್ಗದಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಬೇರೂರಿರುವ ಮೌಢ್ಯತೆಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಹಲವು ವರ್ಷಗಳಿಂದಲೂ ಸತೀಶ್ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಮಾಡುತ್ತ ಬರುತ್ತಿದ್ದಾರೆ. ಆದರೆ ಇದೀಗ ಈ ಎಲ್ಲ ಕಾರ್ಯಗಳಿಗಾಗಿ ಅವರನ್ನು ಅರಸಿ ಬಂದ ಪದವಿಯನ್ನು ಒಪ್ಪಿಕೊಳ್ಳದೇ ಅತ್ಯಂತ ವಿನಯ ಪೂರ್ವಕವಾಗಿಯೇ ದೂರ ತಳ್ಳಿದ್ದಾರೆ.