ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನ ಸಿಗ್ತಿಲ್ಲ. ಇದು ಬಿಜೆಪಿ, ಜೆಡಿಎಸ್ ಶಾಸಕರ ಮಾತಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳಿಂದ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಎನ್.ವೈ. ಗೋಪಾಲಸ್ವಾಮಿ, ಅನುದಾನ ಸಿಕ್ತಿಲ್ಲ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶಾಸಕರಾಗಿದ್ದುಕೊಂಡು ಚರಂಡಿಯನ್ನೂ ಮಾಡಿಸೋಕೆ ಆಗ್ತಿಲ್ಲ ಅಂತಾ, ವೇದಿಕೆ ಕಾರ್ಯಕ್ರಮಗಳಲ್ಲೇ ಅಸಹಾಯಕತೆ ವ್ಯಕ್ತಪಡಿಸಿದ್ರು. ಹೀಗೆ ಆದ್ರೆ ರಾಜೀನಾಮೆ ಕೊಡ್ತೇವೆ ಅಂತಾ ರಾಜಾರೋಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಇದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದೆ. ಇಂಥಾ ಹೊತ್ತಲ್ಲಿ, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆ, ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರ ಆಶೀರ್ವಾದದಿಂದ, ನನ್ನ ಕ್ಷೇತ್ರಕ್ಕೆ ಅನುದಾನ ಸಿಗುತ್ತಿದೆ ಅನ್ನೋ ಹೇಳಿಕೆ, ಕಾಂಗ್ರೆಸ್ ಅಸಮಾಧಾನಿತರನ್ನು ಕೆರಳಿಸಿದೆ. ಜೊತೆಗೆ ಅವರವರೇ ಆಶೀರ್ವಾದ ಪಡೆದುಕೊಳ್ಳಬೇಕು ಅನ್ನೋ ಸಲಹೆಗೆ ರೊಚ್ಚಿಗೆದ್ದಿದ್ದಾರೆ. ಡಿಕೆ ಬ್ರದರ್ಸ್ ಆಶೀರ್ವಾದ ಇದ್ದರೆ ಮಾತ್ರ ಅನುದಾನ ಸಿಗುತ್ತಾ ಅಂತಾ ಪ್ರಶ್ನಿಸಿದ್ದಾರೆ.
ಇದಿಷ್ಟೇ ಅಲ್ಲ.. ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡುತ್ತಾ, ಬಿ.ಆರ್. ಪಾಟೀಲ್ ಹಿರಿಯ ಶಾಸಕರು. ಅವರಲ್ಲಿ ಮನವಿ ಮಾಡ್ತೇನೆ. ಆ ರೀತಿಯ ವಿಚಾರಗಳನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪ ಮಾಡ್ಬೇಕು. ಕೇಂದ್ರದವರು ಕೊಡಬೇಕಾಗಿರೋದನ್ನು ಕೊಡ್ತಿಲ್ಲ. ಆ ಹಣವನ್ನೂ ಕೊಟ್ರೆ ಇನ್ನು ಹೆಚ್ಚಿನ ಅಭಿವೃದ್ಧಿ ಆಗುತ್ತೆ. ಇದು ಪರಮೇಶ್ವರ್ ಮಾತಿನ ಅರ್ಥ.
ಕೆಲವೊಮ್ಮೆ ಏರುಪೇರುಗಳಾದಾಗ ಮನಸ್ಸಿಗೆ ಬೇಸರವಾಗುತ್ತೆ. ಬೇಸರ ಆದಾಗ ಸಮಸ್ಯೆ ಬಗೆಹರಿಯುವುದಿಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಬಂಧಪಟ್ಟವರ ಬಳಿ ಮಾತನಾಡಿ ಬಗೆಹರಿಸಿಕೊಳ್ಳಬೇಕು. ನಾವು ರಾಜೀನಾಮೆ ಕೊಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇನ್ನೊಮ್ಮೆ ಎಲೆಕ್ಷನ್ ನಡೆಯುತ್ತೆ. ಇನ್ನೊಬ್ಬ ಎಂಎಲ್ ಎ ಆಗ್ತಾನೆ. ಇದರಿಂದ ಸಮಸ್ಯೆ ಬಗೆಹರಿಯುತ್ತಾ?. ಜನ ಆಶೀರ್ವಾದ ಮಾಡಿದ್ದಾರೆ. ನಾವು ಕೆಲಸ ಮಾಡ್ಬೇಕು ಅಂತಾ ಕಿವಿಮಾತು ಹೇಳಿದ್ದಾರೆ.
ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ, ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಜೊತೆಗೆ ಡಿಕೆ ಬ್ರದರ್ಸ್ ಹೇಳಿದವರಿಗೆ ಅನುದಾನ ಸಿಗುತ್ತೆ ಅನ್ನೋ ಮಾತು ಮತ್ತೊಂದು ತಿರುವು ಪಡೆಯುವ ಸಾಧ್ಯತೆ ಇದೆ.