Hubli News: ಹುಬ್ಬಳ್ಳಿ: ದೇಶದಲ್ಲಿ ಮತಾಂಧತೆ ಮತ್ತು ಭಯೋತ್ಪಾದನೆಯಿಂದ ಜೀವ ಉಳಿಸುವ ಗ್ಯಾರೆಂಟಿ ಕೊಟ್ಟ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಇಂದು ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಭಯೋತ್ಪಾದನೆಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ. ಪಾಕಿಸ್ತಾನ ಇಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದಾಗಲೆಲ್ಲ ಮೋದಿ ಸರ್ಕಾರ ನಮ್ಮ ಸೈನಿಕರ ಮೂಲಕ ದಿಟ್ಟ ಉತ್ತರ ಕೊಟ್ಟಿದೆ ಎಂದು ಪ್ರತಿಪಾದಿಸಿದರು.
ಉಗ್ರರು, ಭಯೋತ್ಪಾದಕರನ್ನು ಸೆದೆಬಡಿದು ಪಾಕಿಸ್ತಾನವನ್ನು ಬಗ್ಗು ಬಡಿಯುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಆದರೆ, ಇಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭಯೋತ್ಪಾದನಾ ಘಟನೆಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಜೋಶಿ ಹರಿಹಾಯ್ದರು.
ಜೀವರಕ್ಷಣೆ ಮೋದಿ ಗ್ಯಾರೆಂಟಿ: ದೇಶದಲ್ಲಿ ಭಯೋತ್ಪಾದನೆ ಮತ್ತು ಮತಾಂಧ ಶಕ್ತಿಗಳಿಂದ ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಜೀವಕ್ಕೆ, ಜೀವನಕ್ಕೆ ರಕ್ಷಣೆಯ ಗ್ಯಾರೆಂಟಿ ಕೊಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.
ಮತಾಂಧ ಶಕ್ತಿಗಳಿಗೆ ಧೈರ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ನೀತಿಯಿಂದಾಗಿ ಮತಾಂಧ, ಮತೀಯ ಶಕ್ತಿಗಳಿಗೆ ಮತ್ತೆ ಧೈರ್ಯ ಬಂದು ಬಿಟ್ಟಿದೆ. ಅದರ ಪರಿಣಾಮವೇ ರಾಮೇಶ್ವರ ಕೆಫೆ ಸ್ಫೋಟ, ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ, ಮತಾಂತರ ಯತ್ನ, ಯಾದಗಿರಿ ದಲಿತ ಯುವಕನ ಮೇಲೆ ಹಲ್ಲೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಘಟನೆಗಳು ಎಂದು ಜೋಶಿ ವಾಗ್ದಾಳಿ ನಡೆಸಿದರು.
ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ತಮ್ಮದೇ ಪಕ್ಷದ ದಲಿತ ಶಾಸಕನ ಮನೆ ಸುಟ್ಟರೂ ಕಾಂಗ್ರೆಸ್ ಸರ್ಕಾರ 150 ಗಲಭೆಕೋರರನ್ನು ಬೇಲ್ ಮೇಲೆ ಬಿಡುಗಡೆ ಮಾಡಿತು. ಹುಬ್ಬಳ್ಳಿ ಪೊಲೀಸ್ ಠಾಣೆ ಧ್ವಂಸ ಪ್ರಕರಣದಲ್ಲಿ ಸಹ ಆರೋಪಿಗಳಿಗೆ ಬೇಲ್ ಕೊಡಿಸಿತು. ತಮ್ಮದೇ ಪಕ್ಷದ ಕಾರ್ಪೊರೇಟರ್ ಮಗಳು ನೇಹಾ ಹತ್ಯೆ ಪ್ರಕರಣದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಮತ್ತು ಅಂಬೇಡ್ಕರ್ ಗೆ ಅತ್ಯುನ್ನತ ಗೌರವ ನೀಡಿದ್ದೇ ಬಿಜೆಪಿ: ದೇಶದಲ್ಲಿ ಸಂವಿಧಾನ ಮತ್ತು ಅದರ ರಚನೆಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅತ್ಯುನ್ನತ ಗೌರವ ನೀಡಿರುವುದೇ ಬಿಜೆಪಿ. ಮೋದಿ ಪ್ರಧಾನಿಯಾದ ಮೇಲೆ ರಾಷ್ಟ್ರದ ಗೌರವಾನ್ವಿತ ಮತ್ತು ಸಂವಿಧಾನಿಕವಾದಂತಹ ರಾಷ್ಟ್ರಪತಿ ಹುದ್ದೆಗೆ ದಲಿತ ವ್ಯಕ್ತಿ ರಾಮನಾಥ ಕೋವಿಅಂದ್ ಅವರನ್ನು ಅನುಮೋದಿಸಿದರು ಎಂದು ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಬಿಜೆಪಿ, ದೇಶದಲ್ಲಿ ಪ್ರವರ್ಧಮಾನಕ್ಕೆ ಬಂದಾಗಲೆಲ್ಲ ಸಂವಿಧಾನ ಬದಲಿಸುತ್ತಾರೆ, ಮೀಸಲಾತಿ ತೆಗೆಯುತ್ತಾರೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಯಾವತ್ತೂ ಹಾಗೆ ನಡೆದುಕೊಂಡಿಲ್ಲ. ಯಾರೂ ಇದಕ್ಕೆಲ್ಲ ಕಿವಿಗೊಡಬೇಡಿ ಎಂದು ಕರೆ ನೀಡಿದರು.
ಪಂಚತೀರ್ಥಗಳ ಅಭಿವೃದ್ಧಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಮೂಲಕ ಅಂಬೇಡ್ಕರ್ ಗೆ ಅತ್ಯಂತ ಗೌರವ ಸಮರ್ಪಿಸಿದ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಅವರೆಂದು ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಮೋದಿ ಅವರ ಕಾಲದಲ್ಲಿಭಾರತ ಜಾಗತಿಕವಾಗಿ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇನ್ನು, ಜಗತ್ತಿನಲ್ಲಿ 3ನೇ ಬಲಿಷ್ಠ ರಾಷ್ಟ್ರವಾಗಿಸುವ ಗುರಿ ನಮ್ಮ ಮುಂದಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಪ್ರಲ್ಹಾದ ಜೋಶಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಅಧಿದೇವತೆ ಶ್ರೀ ಮಾರಿಕಾಂಬೆ ಪ್ರತಿಮೆ ನೀಡಿ ಸತ್ಕರಿಸಿದರು.
ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ




