National Political News: ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಕಳೆದ 10 ವರ್ಷಗಳಲ್ಲಿ ಆರ್ಥಿಕ ಕ್ರಾಂತಿಯಾಗಿದೆ. ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ವೇಗವಾಗಿಯೇ ಭಾರತವು ಆರ್ಥಿಕತೆಯಲ್ಲಿ ಬೆಳವಣಿಗೆ ಹೊಂದಿರುವ ರಾಷ್ಟ್ರವಾಗಿ ಎದ್ದು ನಿಲ್ಲುವಂತಾಗಿದೆ. ಅಲ್ಲದೆ ಪ್ರಮಖವಾಗಿ ಭಾರತದ ಜಿಡಿಪಿಯು ಈ 10 ವರ್ಷಗಳಲ್ಲಿ ಡಬಲ್ ಆಗಿರುವುದಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್ ಪ್ರಶಂಸೆ ವ್ಯಕ್ತಪಡಿಸಿದೆ. ಈ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯ ಸ್ಪಷ್ಟ ಚಿತ್ರಣ ನೀಡಿದೆ. ಭಾರತದ ಜಿಡಿಪಿಯು ಶೇಕಡಾ 105ರಷ್ಟು ಹೆಚ್ಚಾಗಿದೆ. ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಭಾರತ ಇನ್ನೂ ಮೂರೇ ತಿಂಗಳಲ್ಲಿ ಜಪಾನ್ ದೇಶವನ್ನು ಹಿಂದೆ ಹಾಕಲಿದೆ ಎಂಬ ಅಂಶವನ್ನು ಐಎಂಎಫ್ ವರದಿಯು ತಿಳಿಸಿದೆ.
2027ರ ವೇಳೆಗೆ ಭಾರತ 3ನೇ ಅತೀದೊಡ್ಡ ಆರ್ಥಿಕ ರಾಷ್ಟ್ರ..!
ಇನ್ನೂ ಸದ್ಯ ಭಾರತದ ಜಿಡಿಪಿ 4.3 ಟ್ರಿಲಿಯನ್ ಅಮೆರಿಕನ್ ಡಾಲರ್ ಇದ್ದು ಈ ವರ್ಷದ ಅಂತ್ಯದಲ್ಲಿ ಅದು 4.27 ಲಕ್ಷ ಕೋಟಿ ಡಾಲರ್ ಅಂದರೆ 365 ಲಕ್ಷ ಕೋಟಿ ರೂಪಾಯಿಗಳಷ್ಟು ತಲುಪಲಿದೆ. ಈ ಮೂಲಕ ಅಮೆರಿಕ, ಚೀನಾ, ಜರ್ಮನಿ ಹಾಗೂ ಜಪಾನ್ ನಂತರದ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಹೆಚ್ಚಳವಾಗಲಿದೆ ಎಂದು ಐಎಂಎಫ್ ವಿಶ್ವಾಸ ಹೊರಹಾಕಿದೆ. ಅಲ್ಲದೆ 2027ರ ವೇಳೆಗೆ ಭಾರತವು ಸದ್ಯ 3ನೇ ಸ್ಥಾನದಲ್ಲಿರುವ ಜರ್ಮನಿಯನ್ನು ಹಿಂದಿಕ್ಕಲಿದೆ. ಅಮೆರಿಕ, ಚೀನಾ, ಜರ್ಮನಿ ಹಾಗೂ ಜಪಾನ್ ದೇಶಗಳ ಜಿಡಿಪಿ ಬೆಳವಣಿಗೆಯಾಗುತ್ತಿದೆ. ಆದರೆ ಭಾರತದ ಜಿಡಿಪಿ ಬೆಳವಣಿಗೆ ಈ ನಾಲ್ಕು ರಾಷ್ಟ್ರಗಳಿಗಿಂತ ವೇಗವಾಗಿ ಪ್ರಗತಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ 2027ರ ವೇಳೆಗೆ ಭಾರತ ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಐಎಂಎಫ್ ತನ್ನ ನಿರೀಕ್ಷೆ ಹೊರಹಾಕಿದೆ.
ಶೇಕಡಾ 105ರಷ್ಟು ಏರಿಕೆಯಾದ ಜಿಡಿಪಿ ದರ..
ಅಲ್ಲದೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ಭಾರತದ ಜಿಡಿಪಿಯ ಮಟ್ಟವು ಗಣನೀಯವಾಗಿ ಹೆಚ್ಚಳವಾಗಿದ್ದು, ಕಳೆದ 10 ವರ್ಷದಲ್ಲಿ ಭಾರತದಲ್ಲಿ ಶೇಕಡಾ 105ರಷ್ಟು ಏರಿಕೆಯಾಗಿದೆ. ಅಂದಹಾಗೆ ಅಮೆರಿಕದ ಜಿಡಿಪಿ ಶೇಕಡಾ 66, ಚೀನಾ ಜಿಡಿಪಿ ಶೇಕಡಾ 44 ರಷ್ಟು ಏರಿಕೆಯಾಗಿದೆ. ಇಷ್ಟೇ ಅಲ್ಲದೆ ಜರ್ಮನಿ, ಜಪಾನ್, ಫ್ರಾನ್ಸ್ ಹಾಗೂ ಬ್ರಿಟನ್ ಒಳಗೊಂಡಂತೆ ವಿವಿಧ ರಾಷ್ಟ್ರಗಳ ಜಿಡಿಪಿ ಪ್ರಗತಿ ಶೇಕಡಾ 30ಕ್ಕಿಂತ ಕಡಿಮೆ ಇದೆ ಎಂಬ ಮಾಹಿತಿಯನ್ನು ವರದಿಯು ಬಿಚ್ಚಿಟ್ಟಿದೆ.
2025ರಲ್ಲಿ ವಿಶ್ವದ ಅತಿದೊಡ್ಡ ಬಲಿಷ್ಠ ಆರ್ಥಿಕ ದೇಶಗಳು..
ಅಮೆರಿಕ 30.3 ಟ್ರಿಲಿಯನ್ ಡಾಲರ್, ಚೀನಾ: 19.5 ಟ್ರಿಲಿಯನ್ ಡಾಲರ್, ಜರ್ಮನಿ: 4.9 ಟ್ರಿಲಿಯನ್ ಡಾಲರ್, ಜಪಾನ್: 4.4 ಟ್ರಿಲಿಯನ್ ಡಾಲರ್, ಭಾರತ: 4.3 ಟ್ರಿಲಿಯನ್ ಡಾಲರ್, ಬ್ರಿಟನ್: 3.7 ಟ್ರಿಲಿಯನ್ ಡಾಲರ್, ಫ್ರಾನ್ಸ್: 3.3 ಟ್ರಿಲಿಯನ್ ಡಾಲರ್, ಇಟಲಿ: 2.5 ಟ್ರಿಲಿಯನ್ ಡಾಲರ್, ಕೆನಡಾ: 2.3 ಟ್ರಿಲಿಯನ್ ಡಾಲರ್, ಬ್ರೆಜಿಲ್: 2.3 ಟ್ರಿಲಿಯನ್ ಡಾಲರ್‌ಗಳಷ್ಟಾಗಿದೆ. ಇನ್ನೂ ಭಾರತ 1 ಟ್ರಿಲಿಯನ್ ಜಿಡಿಪಿ ತಲಪಲು ಬರೋಬ್ಬರಿ 60 ವರ್ಷಗಳ ಕಾಲ ಸಮಯ ಬೇಕಾಗಿ ಬಂತು. ಅಲ್ಲದೆ ಕಳೆದ 2007ರಲ್ಲಿ ಭಾರತ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿ ತಲುಪಿತ್ತು.
ಇನ್ನೂ ಆರಂಭಿಕ 60 ವರ್ಷಗಳ ಕಾಲ ಭಾರತವು ಹಲವು ಸವಾಲು ಎದುರಿಸಿತ್ತು. ಸ್ವಾತಂತ್ರ್ಯ, ಬಡತನ, ಸಾಂಕ್ರಾಮಿಕ ರೋಗ, ಮೂಲಭೂತ ಸೌಲಭ್ಯ ಕೊರತೆ ಸೇರಿದಂತೆ ಹಲವು ಸಂಕಷ್ಟಗಳ ನಡುವೆ ದೇಶದ ಜಿಡಿಪಿಯು ಆಮೆಗತಿಯಲ್ಲಿತ್ತು. ಬಳಿಕ 2007ರಿಂದ 2014ರ ವೇಳೆಗೆ ಭಾರತ 2 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಗೆ ತಲುಪಿತ್ತು. ಆದರೆ 2014ರಿಂದ 2025ರ ನಡುವೆ ಇಡೀ ವಿಶ್ವವೇ ಕೋವಿಡ್ ಸುಳಿಗೆ ಸಿಲುಕಿತ್ತು. ಈ ವೇಳೆ ಇತರ ಎಲ್ಲಾ ದೇಶದ ಆರ್ಥಿಕತೆ ಕುಂಠಿತವಾಗಿತ್ತು. ಆದರೆ ಭಾರತ 2021ರ ವೇಳೆ 3 ಟ್ರಿಲಿಯನ್ ಆರ್ಥಿಕತೆಯನ್ನು ಮುಟ್ಟಿತ್ತು. ಇನ್ನೂ 3 ರಿಂದ 4 ಟ್ರಿಲಿಯನ್ ಡಾಲರ್ ಗುರಿಯನ್ನು ಮುಟ್ಟಲು ಭಾರತ ಕೇವಲ 4 ವರ್ಷ ಮಾತ್ರ ತೆಗೆದುಕೊಂಡಿದೆ. ಇದೇ ವೇಗದಲ್ಲಿ ಸಾಗಿದರೆ ಮತ್ತೆ ಭಾರತ 1.5 ವರ್ಷದಲ್ಲಿ 1 ಟ್ರಿಲಿಯನ್ ಪ್ರಗತಿ ಸಾಧಿಸಲಿದೆ ಐಎಂಎಫ್ ತನ್ನ ವರದಿಯಲ್ಲಿ ತಿಳಿಸಿದೆ.