ನವದೆಹಲಿ,: ಭಾರತದ ಸಂವಿಧಾನ ರಚಿಸಿದ ದಿನವನ್ನು ಸ್ಮರಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ದಿನ ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನಾವಿಂದು ಜ್ಞಾಪಿಸಿಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನಮಗೆ ಸಂವಿಧಾನ ರಚನೆ ಮಾಡುವುದಾಗಿದ್ದರೆ ಹೇಗಿರುತ್ತಿತ್ತು ಎಂದು ಎಲ್ಲರೂ ಆಲೋಚಿಸಬೇಕಿದೆ. ಎಲ್ಲರ ಹೃದಯದಲ್ಲಿ ಒಂದೇ ಮಂತ್ರವಾಗಿತ್ತು. ವಿವಿಧತೆಯಿಂದ ತುಂಬಿದ ದೇಶ ಇದಾಗಿತ್ತು, ಇದರ ನಡುವೆ ಸಂವಿಧಾನ ಎಂಬ ಮಾಧ್ಯಮದಿಂದ ಎಲ್ಲರನ್ನೂ ಒಂದು ಬಂಧನದಲ್ಲಿ ಇಟ್ಟುಕೊಂಡು ಸಾಗುವುದು ಸುಲಭದ ಮಾತಾಗಿರಲಿಲ್ಲ ಎಂದು ಮೋದಿ ಹೇಳಿದರು.
ಆಜಾದಿ ಕಾ ಅಮೃತ್ ಮಹೋತ್ಸವ’ದ ಸಮಯದಲ್ಲಿ, ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾವು ಕರ್ತವ್ಯದ ಹಾದಿಯಲ್ಲಿ ಮುನ್ನಡೆಯುವುದು ಅವಶ್ಯಕವಾಗಿದೆ.1950 ರ ನಂತರ ಸಂವಿಧಾನದ ರಚನೆಯಲ್ಲಿ ಏನಾಯಿತು ಎಂಬುದರ ಕುರಿತು ಶಿಕ್ಷಣ ನೀಡಲು ಪ್ರತಿವರ್ಷ ಸಂವಿಧಾನ ದಿನವನ್ನು ಆಚರಿಸಬೇಕು. ಆದರೆ ಕೆಲವರು ಹಾಗೆ ಮಾಡಲಿಲ್ಲ. ನಾವು ಮಾಡುವುದು ಸರಿಯೋ ಇಲ್ಲವೋ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳುವುದಕ್ಕಾಗಿ ಈ ದಿನವನ್ನು ಆಚರಿಸಬೇಕಿದೆ. ನಮ್ಮ ಸಂವಿಧಾನವು ನಮ್ಮ ವೈವಿಧ್ಯಮಯ ದೇಶವನ್ನು ಬಂಧಿಸುತ್ತದೆ. ಇದನ್ನು ಹಲವು ಅಡೆತಡೆಗಳ ನಂತರ ರಚಿಸಲಾಯಿತು ಮತ್ತು ದೇಶದಲ್ಲಿ ರಾಜ ಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿತು. ಸಂವಿಧಾನ ದಿನವು ಈ ಸದನಕ್ಕೆ ವಂದಿಸುವ ದಿನವಾಗಿದೆ, ಮಹಾತ್ಮ ಗಾಂಧಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಡಿದ ಎಲ್ಲರಿಗೂ ನಾವು ಗೌರವ ಸಲ್ಲಿಸುತ್ತೇವೆ. ಇಂದು ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಲ್ಲಿ, ಭಯೋತ್ಪಾದಕರ ವಿರುದ್ಧ ಹೋರಾಡುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶದ ಎಲ್ಲಾ ವೀರ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ. ದೇಶದ ಸಂವಿಧಾನ ದಿನ ಆಚರಿಸುವುದಕ್ಕಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಪ್ರಮುಖರು ಹಾಜರಾಗಿದ್ದರು.