Movie News: ಸಿನಿಮಾ ಅಂದರೆ ಅದು ಹಾಗೇನೆ. ಚೆನ್ನಾಗಿದ್ದರೆ, ಗಲ್ಲಾಪೆಟ್ಟಿಗೆ ಭರ್ತಿ ಆಗೋದು ಗ್ಯಾರಂಟಿ. ಇದೀಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ2 ಸಿನಿಮಾದಲ್ಲೂ ಅದು ನಿಜ ಆಗಿದೆ. ಪುಷ್ಪ2 ರಿಲೀಸ್ ಆಗಿ ಮುನ್ನುಗ್ಗುತ್ತಿದೆ. ಗಳಿಕೆ ವಿಚಾರದಲ್ಲೂ ಚಿತ್ರ ದಾಖಲೆ ಬರೆದಿದೆ.
ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 829 ಕೋಟಿ ರೂಪಾಯಿಗಳನ್ನು ಬಾಚಿಕೊಂಡು ಬೀಗುತ್ತಿದೆ. ಇದು ಅಂತೆ-ಕಂತೆಯ ಸುದ್ದಿಯಂತೂ ಅಲ್ಲ. ಸ್ವತಃ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಗಳಿಕೆ ಬಗ್ಗೆ ಘೋಷಣೆ ಮಾಡಿಕೊಂಡಿದೆ. ರಿಲೀಸ್ ಆಗಿ ಮೂರು ದಿನಗಳ ಬಳಿಕ 500 ಕೋಟಿ ಕಲೆಕ್ಷನ್ ಆಗಿದೆ ಅಂತ ಅನೌನ್ಸ್ ಮಾಡಿದ್ದ ನಿರ್ಮಾಣ ಸಂಸ್ಥೆ, ಈಗ 829 ಕೋಟಿ ರೂ.ಕಲೆಕ್ಷನ್ ಆಗಿರುವ ಬಗ್ಗೆ ದೃಢಪಡಿಸಿದೆ.
ಇದು ವಿಶ್ವಾದ್ಯಂತ ಕಂಡ ಗಳಿಕೆಯ ಲೆಕ್ಕವಾಗಿದ್ದು, ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಂಡಿದೆ. ಸದ್ಯ ಎಲ್ಲಾ ಕಡೆಯ ಗಳಿಕೆಯನ್ನು ಲೆಕ್ಕ ಹಾಕಿ ಘೋಷಣೆ ಮಾಡಿರುವ ನಿರ್ಮಾಣ ಸಂಸ್ಥೆ, ಒಂದು ಸಾವಿರ ಕೋಟಿ ರೂ.ಗಳಿಕೆ ಕಾಣುತ್ತೆ ಎಂಬ ಭರವಸೆ ಹೊಂದಿದೆ. ಅದಕ್ಕೆ ಪೂರಕವಾಗಿ ಈಗ 829 ಕೋಟಿ ರೂ. ಕಲೆಕ್ಷನ್ ಆಗಿರುವ ಬಗ್ಗೆ ಹೇಳಿಕೊಂಡಿದೆ.
ಅಂದಹಾಗೆ, ಪುಷ್ಪ2 ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲೇ ಹಂಚಿಕೊಂಡಿರುವ ಸಂಸ್ಥೆ,ತಮ್ಮ ಚಿತ್ರತಂಡದ ಜೊತೆ ಆ ಸಕ್ಸಸ್ ಅನ್ನು ಸಂಭ್ರಮಿಸುತ್ತಿದೆ.
ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಅವರ ಅಭಿಮಾನಿಗಳಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅತ್ತ ರಶ್ಮಿಕಾ ಮಂದಣ್ಣ ಅವರ ಅಭಿನಯಕ್ಕೂ ಫ್ಯಾನ್ಸ್ ಜೈ ಎಂದಿದ್ದಾರೆ. ಇತ್ತ ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ಅವರ ಅಬ್ಬರದ ನಟನೆ ಇವೆಲ್ಲವೂ ಸಿನಿಮಾದ ಹೈಲೆಟ್ .
ಸದ್ಯ ಸುಕುಮಾರ್ ನಿರ್ದೇಶನದ ಈ ಚಿತ್ರ ಎಲ್ಲಾ ವರ್ಗಕ್ಕೂ ಇಷ್ಟವಾಗಿದೆ. ನಿರೀಕ್ಷೆಯಂತೆಯೇ ಸಿನಿಮಾ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ಗಳಿಕೆಯಲ್ಲೂ ಮುಂದಿನ ಒಂದೆರೆಡು ದಿನಗಳಲ್ಲಿ ದಾಖಲೆ ಬರೆಯುತ್ತೆ ಎಂದು ಅಲ್ಲು ಫ್ಯಾನ್ಸ್ ಬೀಗತೊಡಗಿದ್ದಾರೆ. ಅದೇನೆ ಇರಲಿ, ಒಂದೊಳ್ಳೆಯ ಕಮರ್ಷಿಯಲ್ ಸಿನಿಮಾ ಯಾವುದೇ ಇರಲಿ, ಚೆನ್ನಾಗಿದ್ದರೆ ಖಂಡಿತ ಜನರ ಒಪ್ಪಿ, ಅಪ್ಪುತ್ತಾರೆ ಅನ್ನುವುದಕ್ಕೆ ಈ ಸಿನಿಮಾ ಕಣ್ಣೆದುರಿಗಿನ ಸಾಕ್ಷಿಯಾಗಿದೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ