Movie News: ರಜನಿಕಾಂತ್ ಅಂದಾಕ್ಷಣ ನೆನಪಾಗೋದೇ ತರೇವಾರಿ ಸ್ಟೈಲ್. ಅವರ ಕಣ್ಣುಗಳು, ನಟನೆ, ಬಾಡಿಲಾಂಗ್ವೇಜ್, ಸಿಗರೇಟ್ ಸೇದೋ ಶೈಲಿ ಇತ್ಯಾದಿ… ನೆನಪಾಗುತ್ತವೆ. ಅವರೊಬ್ಬ ಇಂಡಿಯನ್ ಸೂಪರ್ ಸ್ಟಾರ್. ವಿಶ್ವಕ್ಕೇ ಗೊತ್ತಿರುವ ಸ್ಟೈಲಿಶ್ ಹೀರೋ. ಮೂಲತಃ ಕನ್ನಡದವರು. ಆದರೆ, ನೆಲೆಕಂಡಿದ್ದು ತಮಿಳುನಾಡಲ್ಲಿ. ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಭಾರತದ ಅದೆಷ್ಟೋ ನಗರಗಳಲ್ಲಿ ರಜನಿಕಾಂತ್ ಅವರ ಒಡೆತನದ ಆಸ್ತಿಗಳಿವೆ. ಜಗತ್ತಿನಲ್ಲೂ ಅಲ್ಲಲ್ಲಿ ರಜನಿ ಆಸ್ತಿಗಳಿವೆ. ಎಲ್ಲೆಲ್ಲಿ ಎಷ್ಟೆಷ್ಟಿದೆಯೋ ಅವರಿಗೇ ಲೆಕ್ಕವಿಲ್ಲ ಬಿಡಿ.
ಇಡೀ ವಿಶ್ವವೇ ಕೊಂಡಾಡುವ ಈ ನಟ ಮಾತ್ರ, ತಾನು ಹುಟ್ಟೂರಿನ ಪ್ರೀತಿ ಬಿಟ್ಟಿಲ್ಲ. ಬಿಗ್ ಸ್ಟಾರ್ ಆಗಿದ್ದರೂ, ಅವರು ಕಷ್ಟದ ದಿನಗಳಲ್ಲೂ ನೆಮ್ಮದಿ ಕಂಡುಕೊಂಡಿದ್ದ ಜಾಗದ ಕಡೆ ಮುಖ ಮಾಡುತ್ತಿರುತ್ತಾರೆ. ಅವರು ಅದೆಷ್ಟೋ ಸಲ ಮಾರುವೇಷದಲ್ಲಿ ಬೆಂಗಳೂರಿಗೆ ಬಂದು ಗಲ್ಲಿ ಗಲ್ಲಿಯಲ್ಲಿ ಸುತ್ತಾಡಿದ ಉದಾಹರಣೆ ಇದೆ. ಸಿನಿಮಾ ನೋಡಿದ ದಿನಗಳೂ ಇವೆ. ಅನೇಕ ಸಲ ಅವರು ಆ ದಿನಗಳಲ್ಲಿ ಓಡಾಡುತ್ತಿದ್ದ ಜಾಗದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ ಖುಷಿಗೊಂಡಿದ್ದೂ ಇದೆ. ಈಗ ಅದೇ ರಜನಿಕಾಂತ್ ತಾನು ಕಲಿತ ಶಾಲೆಯ ಕುರಿತು ತುಂಬಾ ಪ್ರೀತಿ ಮತ್ತು ಹೆಮ್ಮೆಯಿಂದ ಮಾತಾಡಿದ್ದಾರೆ.
ಸದ್ಯ ಸಿನಿಮಾವೊಂದರ ಚಿತ್ರೀಕರಣಕ್ಕೆ ದೂರದ ಬ್ಯಾಂಕಾಕ್‌ನಲ್ಲಿರುವ ಅವರು, ವಿಡಿಯೋವೊಂದನ್ನು ಮಾಡುವ ಮೂಲಕ ತಾವು ಓದಿದ ಎಪಿಎಸ್ ಶಾಲೆಯ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಕಲಿತ ಎಪಿಎಸ್ ಶಾಲೆಯ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ, ವಿಡಿಯೋ ಮೂಲಕ ಸಂದೇಶವನ್ನು ಕಳಿಸಿರುವ ರಜನಿಕಾಂತ್, ಬೆಂಗಳೂರಿನ ಎಪಿಎಸ್ ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಓದಿದ್ದಕ್ಕೆ ನನಗೆ ಇವತ್ತು ಕೂಡ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಗವಿಪುರದ ಗಂಗಾಧರೇಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೆ ಎಂದಿರುವ ರಜಿನಿ, ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಆಗೆಲ್ಲ ನಾನೇ ಕ್ಲಾಸ್‌ಗೆ ಫಸ್ಟ್ ಮತ್ತು ಶಾಲೆಯ ಬೆಸ್ಟ್ ಸ್ಟುಡೆಂಟ್ ಎಂದು ಹೇಳಿದ್ದಾರೆ. ಇನ್ನು ನಾನೇ ಕ್ಲಾಸ್‌ಗೆ ಮಾನಿಟರ್ ಕೂಡ ಆಗಿದ್ದೆ ಮಿಡ್ಲ್ ಸ್ಕೂಲ್‌ನಲ್ಲಿ 98 % ಮಾರ್ಕ್ಸ್ ಪಡೆದಿದ್ದೆ ಎಂದು ರಜನಿಕಾಂತ್ ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನಮ್ಮ ಅಣ್ಣ ನನ್ನನ್ನು ಎಪಿಎಸ್ ಹೈಸ್ಕೂಲ್‌ನಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸಿದರು. ಇದರಿಂದ ನಾನು ವಿಚಲಿತನಾದೆ, ಮೊದಲ ಬೆಂಚ್‌ನಲ್ಲಿದ್ದ ನಾನು ಆ ನಂತರ ಕೊನೆಯ ಬೆಂಚ್ ಸ್ಟೂಡೆಂಟ್ ಆದೆ. ಈ ಕಾರಣಕ್ಕೆ ಖಿನ್ನತೆಗೆ ಕೂಡ ಒಳಗಾಗಿದ್ದೆ. ಆದರೆ ಎಪಿಎಸ್ ಶಾಲೆಯ ಶಿಕ್ಷಕರು ನನ್ನ ಕಷ್ಟವನ್ನು ಅರ್ಥ ಮಾಡಿಕೊಂಡು, ನನಗೆ ಸಹಾಯ ಮಾಡಿದರು ತುಂಬಾನೇ ಕಾಳಜಿ ವಹಿಸಿ ನನಗೆ ಪಾಠ ಹೇಳಿ ಕೊಟ್ಟರು. ಈ ಕಾರಣಕ್ಕೆ ನಾನು 8,9 ನೇ ತರಗತಿಯಲ್ಲಿ ಪಾಸ್ ಆದೆ ಆದರೆ ಪಬ್ಲಿಕ್ ಎಕ್ಸಾಂ { ಹತ್ತನೇ ತರಗತಿ } ನಲ್ಲಿ ಪಿಸಿಎಂ ವಿಷಯದಲ್ಲಿ ನಾನು ತುಂಬಾ ವೀಕ್ ಇದ್ದ ಕಾರಣ ಫೇಲ್ ಆದೆ ಎಂದಿದ್ದಾರೆ.
ಆಗಲೂ ನಮ್ಮ ಕೆಮಿಸ್ಟ್ರೀ ಟೀಚರ್ ಮನೆಗೆ ಬಂದು ಆರು ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು, ಅವರು ಉಚಿತವಾಗಿ ನೀಡಿದ ಈ ಸ್ಪೆಷಲ್ ಕ್ಲಾಸ್‌ನಿಂದ ನಾನು ಹತ್ತನೇ ಕ್ಲಾಸ್ ಪಾಸ್ ಮಾಡಿದೆ . ಆ ನಂತರ ಅಲ್ಲೇ ಎಪಿಎಸ್ ಕಾಲೇಜ್‌ಗೆ ಸೇರಿಕೊಂಡೆ ಎಂದು ಹೇಳಿರುವ ರಜನಿಕಾಂತ್, ಆ ನಂತರ ಕೆಲ ಕಾರಣಗಳಿಂದ ಕಾಲೇಜ್ ಕಂಟಿನ್ಯೂ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇನ್ನು ನಾನು ಶಾಲೆಯಲ್ಲಿದ್ದಾಗ ಇಂಟರ್ ಸ್ಕೂಲ್ ಕಾಂಪಿಟೇಷನ್‌ನಲ್ಲಿ ಭಾಗವಹಿಸುತ್ತಿದ್ದೆ. ಅದಕ್ಕೂ ಮೊದಲು ನಾನು ಕ್ಲಾಸ್‌ನಲ್ಲಿ ಬಗೆಬಗೆಯ ಕಥೆ ಹೇಳುತ್ತಿದ್ದೆ ನೋಡಿದ ಸಿನಿಮಾಗಳನ್ನು ಗೆಳೆಯರ ಮುಂದೆ ನಟಿಸಿ ತೋರಿಸುತ್ತಿದ್ದೆ. ಅದು ನಮ್ಮ ಶಿಕ್ಷಕರಿಗೆ ಗೊತ್ತಾಗಿತ್ತು ಎಂದಿರುವ ರಜನಿಕಾಂತ್, ಆಗ ನನಗೆ ನಾಟಕಗಳಲ್ಲಿ ಅಭಿನಯಿಸಲು ಅವರು ಅವಕಾಶ ಮಾಡಿ ಕೊಟ್ಟರು. ಆದಿ ಶಂಕರ ಚಂಡಾಲನ ನಾಟಕದಲ್ಲಿ ನಾನು ಚಂಡಾಲನಂತೆ ಕಂಡಿದ್ದಕ್ಕೋ ಏನೋ ಚಂಡಾಲನ ಪಾತ್ರವನ್ನು ನನಗೆ ನೀಡಿದರು ಎಂದು ಹೇಳಿದ್ದಾರೆ.
ನಮ್ಮ ಈ ಡ್ರಾಮಾಗೆ ಪ್ರಶಸ್ತಿ ಬಂತು. ನನಗೆ ಬೆಸ್ಟ್ ಆಕ್ಟರ್ ಎಂದು ಕಪ್ ಕೂಡ ನೀಡಿದ್ದರು. ಎಂದು ಆ ದಿನಗಳನ್ನು ಮೆಲುಕು ಹಾಕಿರುವ ರಜನಿಕಾಂತ್, ಅಲ್ಲಿಂದ ಇದೇ ನನಗೆ ಫ್ರೊಫೆಷನ್ ಆಗಿ ಈಗ ಸಾಧ್ಯವಾದಷ್ಟು ನಟನೆ ಮಾಡಿ ಎಲ್ಲರನ್ನು ರಂಜಿಸುತ್ತಿದ್ದೇನೆ. ಇದಕ್ಕೆಲ್ಲ ಪ್ರಮುಖ ಕಾರಣ ಎಪಿಎಸ್ ಹೈಸ್ಕೂಲ್ ಎಂದಿದ್ದಾರೆ. ಆ ಶಾಲೆ, ಆ ಮೈದಾನ ಅಲ್ಲಿ ನಾವು ಆಡಿದ ಆಟ ಎಲ್ಲವನ್ನೂ ಮರೆಯಲು ಸಾಧ್ಯ ಇಲ್ಲ. ದೊಡ್ಡ ಗಣೇಶ, ಬಸವನಗುಡಿ ಮನೆಯಿಂದ ಶಾಲೆಗೆ ಹೋಗಬೇಕಾದರೆ ಅಲ್ಲಿ ಓಡಾಡಿದ್ದೆಲ್ಲ ನನ್ನ ಮನಸಿನಲ್ಲಿ ಈಗಲೂ ಹಸಿರಾಗಿದೆ ಎಂದಿರುವ ರಜಿನಿಕಾಂತ್, ಎಪಿಎಸ್ ಶಾಲೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ವಿಜಯ್ ಭರಮಸಾಗರ್, ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ