ನವದೆಹಲಿ: ಮಂಡ್ಯದ ಕೇಂದ್ರೀಯ ವಿದ್ಯಾಲಯದಲ್ಲಿನ ಹಲವಾರು ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿಕೊಡುವಂತೆ ಇಂದು ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ತಾಲೂಕಿನ ಬಿ.ಹೊಸೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಲವು ಸಮಸ್ಯೆಗಳಿರುವ ಬಗ್ಗೆ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಸುಮಲತಾ ಕಳೆದ ತಿಂಗಳು ಶಾಲೆಗೆ ಭೇಟಿ ನೀಡಿದ್ದರು. ಶಾಲೆಯ ಕಟ್ಟಡವೇ ಸರಿಯಿಲ್ಲದೆ ಮಳೆ ಬಂದರೆ ನೀರು ತರಗತಿಯೊಳಗೆ ಸೋರಿಕೆಯಾಗುವುದು. ಕಿಟಕಿ ಬಾಗಿಲುಗಳಿಲ್ಲದೆ ಇರುವುದು ಜೊತೆಗೆ ಇನ್ನೂ ಹಲವು ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರೋ ಕುರಿತು ಸುಮಲತಾ ಪರಿಶೀಲನೆ ನಡೆಸಿದ್ರು.
ಇನ್ನು ಶಾಲೆಯ ಸಮಸ್ಯೆ ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನ ಮಾಡೋದಾಗಿ ಭರವಸೆ ನೀಡಿದ್ದ ಸುಮಲತಾ ಇಂದು ಮಾನವ ಸಂಪನ್ಮೂಲ ಸಚಿವರ ರಮೇಶ್ ಪೋಖ್ರಿಯಾಲ್ ರನ್ನು ಭೇಟಿ ಮಾಡಿ ಮಂಡ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯದ ಬಾಕಿ ಉಳಿದಿರುವ ಕಾಮಗಾರಿಗಳು ಮತ್ತು ಸಿಬ್ಬಂದಿಯ ಕ್ವಾರ್ಟರ್ಸ್ ಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸುಮಲತಾ ಮನವಿ ಮಾಡಿದ್ರು.