ಮೈಸೂರು: ಆರ್ಥಿಕ ಇಲಾಖೆಯ ಅನುಮೋದನೆ ಲಭ್ಯವಾಗದ ಹಿನ್ನೆಲೆಯಲ್ಲಿ, ಮೈಸೂರು ಮಹಾನಗರ ಪಾಲಿಕೆಯನ್ನು ಈ ವರ್ಷ ಗ್ರೇಡ್–1 ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ಯೋಜನೆ ಕೈಬಿಡಲಾಗಿದೆ.
ಮೈಸೂರನ್ನು ಬೆಂಗಳೂರಿನ ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಈ ಯೋಜನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ, ನಗರ ಪಾಲಿಕೆ ವ್ಯಾಪ್ತಿಗೆ ಐದು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಏಳು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಗ್ರೇಡ್–1 ಮೈಸೂರು ಮಹಾನಗರ ಪಾಲಿಕೆ ರಚಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಯಿತು. ಆದರೆ, ಇದೀಗ ಆ ಪ್ರಸ್ತಾವನೆ ಮುಂದೂಡಲ್ಪಟ್ಟಿದೆ.
ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ, ಅದನ್ನು ಬೃಹತ್ ಪಾಲಿಕೆಯಾಗಿಸುವ ಕನಸು ಹಲವು ವರ್ಷಗಳಿಂದ ಜೀವಂತವಾಗಿತ್ತು. ಮೈಸೂರು–ಬೆಂಗಳೂರು ಪೆರಿಫೆರಲ್ ರಸ್ತೆ, ಅಂತಾರಾಷ್ಟ್ರೀಯ ಕ್ರಿಡಾಂಗಣ ಸೇರಿದಂತೆ ಅನೇಕ ಯೋಜನೆಗಳ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಬಲ ಪಡೆದಿತ್ತು.
ಮೈಸೂರಿನ ಹೊರವಲಯದ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ, ಕಡಕೊಳ ಪಟ್ಟಣ ಪಂಚಾಯಿತಿ ಹಾಗೂ ಎಂಟು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಬೃಹತ್ ಪಾಲಿಕೆ ರಚಿಸುವ ಪ್ರಸ್ತಾವನೆ ತಯಾರಿಸಲಾಗಿತ್ತು. ಆದರೆ, ಮೈಸೂರು ನಗರದಲ್ಲಿ 20 ಲಕ್ಷ ಜನಸಂಖ್ಯೆ ಪೂರ್ಣವಾಗದಿರುವುದು ಈ ಯೋಜನೆ ಅಡಚಣೆಗೆ ಕಾರಣವಾಗಿದೆ. ಫಲವಾಗಿ, ಈಗ ಮೈಸೂರು ಗ್ರೇಡ್–1 ಪಾಲಿಕೆಯಾಗಿಸುವ ಸರ್ಕಾರದ ಯೋಜನೆ ತಾತ್ಕಾಲಿಕವಾಗಿ ಕೈಗೂಡದಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ