Mysuru News: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಚಾಮರಾಜನಗರ ತಹಶೀಲ್ದಾರ್ ಇವರುಗಳಿಗೆ ತಮ್ಮ ಅರ್ಜಿ ನೀಡಿ ಒತ್ತಾಯಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿನ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಅಂತ ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರಂತೆ ಅಟ್ಟಗೂಳಿಪುರದಲ್ಲಿ 4,445 ಎಕರೆ 33 ಗುಂಟೆ, ಹರದನಹಳ್ಳಿಯ ಸರ್ವೆ ನಂಬರ್ 125,124,134,135,133,463,169 ಹಾಗೂ 184ರಲ್ಲಿ 130 ಎಕರೆ 3 ಗುಂಟೆ ಜಮೀನಿದೆ. ಇನ್ನೂ ಬೂದಿತಿಟ್ಟು ಸರ್ವೆ ನಂಬರ್ 117ರಲ್ಲಿ 63 ಎಕರೆ 39 ಗುಂಟೆ, ಕರಡಿಹಳ್ಳದ ಸರ್ವೆ ನಂಬರ್ 1,2,3 ರಲ್ಲಿ 76 ಎಕರೆ 23 ಗುಂಟೆ, ಕನ್ನಿಕೆರೆ ಗ್ರಾಮದ ಸರ್ವೆ ನಂಬರ್ 1,2,3 ರಲ್ಲಿ 190 ಎಕರೆ 4 ಗುಂಟೆ. ಅಲ್ಲದೆ ಉಮ್ಮತ್ತೂರು ಸರ್ವೆ ನಂಬರ್ 563 ರಲ್ಲಿ 199 ಎಕರೆ 27 ಗುಂಟೆ ಇಷ್ಟೂ ಸ್ವತ್ತಿನ ಷರಾ ಮಹಾರಾಣಿಯವರ ಆಸ್ತಿಯಾಗಿದೆ ಎಂದು ಪತ್ರದಲ್ಲಿ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 5,119 ಎಕರೆ 9 ಗುಂಟೆ ರಾಜ ಮನೆತನದ ಆಸ್ತಿ ಇದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಹೆಸರಿಗೆ ಖಾತೆ ಮಾಡಿಕೊಡಿ..
ಕಸಬಾ, ಚಾಮರಾಜನಗರ ಜನನ ಮಂಟಪ ಮತ್ತು ಗಾರ್ಡನ್, ಬಸವಪುರ ಸರ್ವೆ ನಂಬರ್ 143ರಲ್ಲಿ13 ಎಕರೆ ಈ ಎಲ್ಲ ಸ್ವತ್ತುಗಳು 1950 ಜನವರಿ 26ರ ಒಪ್ಪಂದದ ಪ್ರಕಾರ ಮಹಾರಾಜರ ಖಾಸಗಿ ಸ್ವತ್ತಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಸ್ವತ್ತುಗಳಲ್ಲಿ ಯಾವುದೇ ರೀತಿಯ ಖಾತೆ, ದುರಸ್ತಿ ಮತ್ತು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸದಂತೆ ಈ ಮನವಿಯನ್ನೇ ತಕರಾರು ಮನವಿ ಎಂದು ಪರಿಗಣಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜಮಾತೆ ಕೋರಿದ್ದಾರೆ.
ಮಹಾರಾಜರ ಖಾಸಗಿ ಸ್ವತ್ತು..
ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ 1950ರ ಜನವರಿ 6ರಲ್ಲಿ ನಡೆದಿದ್ದ ಒಪ್ಪಂದದ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿನ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚಿನ ಮಾಹಿತಿಯಂತೆ ಈ ಗ್ರಾಮಗಳಲ್ಲಿ ಕಂದಾಯ ಗ್ರಾಮಗಳಾಗಿ ರಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಸ್ವತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದಂತೆಯೂ ಸಹ ಈ ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದು, ಈ ಮನವಿಯನ್ನು ಪರಿಗಣಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರಿದ್ದಾರೆ.
ಪತ್ರ ತಲುಪಿದೆ, ಪೂರಕ ದಾಖಲೆ ಇಲ್ಲ..
ಇನ್ನೂ ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಈಗಾಗಲೇ ಜಂಟಿ ಸರ್ವೇಗಳನ್ನು ಪೂರ್ಣಗೊಳಿಸಿ ಖಾತೆ ಮಾಡಿಕೊಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ತಕರಾರು ಪತ್ರವನ್ನು ಪ್ರಮೋದಾದೇವಿ ಒಡೆಯರ್ ನೀಡಿದ್ದು, ಅದನ್ನು ಪರಿಶೀಲಿಸಲು ಕೊಳ್ಳೇಗಾಲ ಉಪ ವಿಭಾಧಿಕಾರಿ ಮತ್ತು ಚಾಮರಾಜನಗರ ತಹಸಿಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ತಕರಾರು ಪತ್ರದಲ್ಲಿ ನ್ಯಾಯಾಲಯದ ಯಾವುದೇ ಆದೇಶ, ಪೂರಕ ದಾಖಲೆಗಳನ್ನು ತಕರಾರು ಪತ್ರದ ಜೊತೆ ಅವರು ಲಗತ್ತಿಸಿಲ್ಲ ಎಂದು ತಿಳಿಸಿದ್ದಾರೆ..