Mythological story: ಸಂಕಷ್ಟ ಚತುರ್ಥಿ ಆಚರಿಸಲು ಕಾರಣವೇನು..? ಇದರ ಮಹತ್ವವೇನು..?

Spiritual: ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಬರುತ್ತದೆ. ಈ ದಿನ ಕೆಲವರು ಗಣಪನ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಮನೆಯಲ್ಲೂ ಪೂಜೆ ಮಾಡುತ್ತಾರೆ, ಉಪವಾಸ ಮಾಡುತ್ತಾರೆ. ಹಾಗಾದ್ರೆ ಸಂಕಷ್ಟಿ ಮಾಡುವುದಾದರೂ ಏಕೆ..? ಇದರ ಹಿಂದಿರುವ ಪೌರಾಣಿಕ ಕಥೆ ಏನು ಅಂತಾ ತಿಳಿಯೋಣ ಬನ್ನಿ.

ಸ್ಕಂದ ಪುರಾಣ ಮತ್ತು ನಾರದ ಪುರಾಣದಲ್ಲಿ ಸಂಕಷ್ಟ ಚತುರ್ಥಿಯ ಬಗ್ಗೆ ಹೇಳಲಾಗಿದೆ. ಶ್ರೀವಿಷ್ಣುವಿನ ವಿವಾಹದ ವೇಳೆ ಎಲ್ಲ ದೇವ ದೇವತೆಗಳು ಉಪಸ್ಥಿತರಿದ್ದರು. ಆದರೆ ಗಣೇಶ ಮಾತ್ರ ಬಂದಿರಲಿಲ್ಲ. ಏಕೆಂದರೆ, ಗಣೇಶನಿಗೆ ಆಮಂತ್ರಣ ಸಿಕ್ಕಿರಲಿಲ್ಲ. ಆದರೂ ಗಣೇಶ ಮದುವೆ ಮನೆಗೆ ಬಂದಾಗ, ಆತನನ್ನು ಮನೆ ಕಾಯಲು ಇರಿಸಲಾಗಿತ್ತು.

ಈ ವೇಳೆ ದ್ವಾರಪಾಲಕನಾಗಿ ಕುಳಿತಿದ್ದ ಗಣೇಶನನ್ನು ಮಾತನಾಡಿಸಲು ನಾರದ ಮುನಿಗಳು ಅಲ್ಲಿ ಬರುತ್ತಾರೆ. ಬೇಸರದಲ್ಲಿದ್ದ ಗಣೇಶನ ಬಳಿ ಕಾರಣ ಕೇಳಿದಾಗ, ವಿಷ್ಣು ತನ್ನನ್ನು ಅಪಮಾನಿಸಿದ್ದಾರೆಂದು ಗಣೇಶ ನಾರದನ ಬಳಿ ದೂರು ಹೇಳುತ್ತಾರೆ.

ಆಗ ನಾರದರು, ಹಾಗಾದ್ರೆ ಈ ಅವಮಾನಕ್ಕೆ ಪ್ರತೀಕಾರವಾಗಿ ನೀವು, ನಿಮ್ಮ ಮೂಷಕ ಗಣವನ್ನು ದಿಬ್ಬಣ್ಣ ಹೋಗುತ್ತಿರುವ ದಾರಿ ಅಗೆಯಲು ಕಳಿಸಿಬಿಡಿ. ನಿಮ್ಮ ಮೂಷಕ ಗಣ ಅಗೆದ ದಾರಿಯಲ್ಲಿ ದಿಬ್ಬಣದಲ್ಲಿದ್ದವರೆಲ್ಲ ಬಿದ್ದು ಬಿಡಲಿ ಎಂದು ಬೇಡದ ಸಲಹೆ ನೀಡುತ್ತಾರೆ.

ಅದೇ ರೀತಿ ಗಣೇಶ ನನ್ನ ಮೂಷಕ ವೃಂದವನ್ನು ದಾರಿ ಅಗೆಯಲು ಕಳುಹಿಸಿಯೇ ಬಿಟ್ಟ. ನಾರದರು ಹೇಳಿದ ಹಾಗೆ, ದಿಬ್ಬಣಕ್ಕೆ ಹೋಗುತ್ತಿದ್ದವರೆಲ್ಲ, ರಸ್ತೆ ಗುಂಡಿಯಲ್ಲಿ ಬಿದ್ದುಬಿಟ್ಟರು. ಆಗ ನಾರದರು ಅಲ್ಲಿ ಬಂದು ಶಿವನ ಬಳಿ ಗಣೇಶನಿಗಾದ ಅವಮಾನದ ಬಗ್ಗೆ ಮಾತನಾಡಿದರು.

ಬಳಿಕ ಗಣೇಶನನ್ನು ಕೂಡ ದಿಬ್ಬಣಕ್ಕೆ ಕರೆಸಲಾಯಿತು. ಗಣೇಶ ಬಂದಾಗ, ಎಲ್ಲರೂ ಭಕ್ತಿ ಭಾವದಿಂದ ಶ್ಲೋಕಗಳನ್ನು ಹೇಳುತ್ತ, ಅವನ ಪೂಜೆ ಮಾಡಿದರು. ಪೂಜೆಯಾಗುತ್ತಿದ್ದಂತೆ, ಮುರಿದಿದ್ದ ಕುದುರೆ ಗಾಡಿಗಳೆಲ್ಲ ಸರಿಯಾದವು. ಎಲ್ಲರೂ ಸಾವರಿಸಿ ಎದ್ದು ನಿಂತರು. ಹೀಗೆ ದಿಬ್ಬಣ ಮುಂದುವರೆದು, ಮದುವೆಯೂ ನಡೆಯಿತು.

ಹಾಗಾಗಿಯೇ ಬಂದ ಸಂಕಟವನ್ನು ದೂರ ಮಾಡಲು ಮತ್ತು ಯಾವುದೇ ಕಾರ್ಯದಲ್ಲಿ ವಿಘ್ನ ಬಾರದಿರಲು, ವಿಘ್ನ ನಿವಾರಕನ ಪೂಜೆ ಪ್ರಥಮವಾಗಿ ಮಾಡಲಾಗುತ್ತದೆ. ಅದೇ ರೀತಿ ಸಂಕಷ್ಟಿ ಆಚರಿಸಲಾಗುತ್ತದೆ.

About The Author