Hubballi News: ಹುಬ್ಬಳ್ಳಿ : ಮಾನವನ ಜೀವ ಅತ್ಯಮೂಲ್ಯವಾದುದ್ದು. ಸಣ್ಣ ಪುಟ್ಟ ತಪ್ಪುಗಳಿಂದ ಅಪಘಾತಗಳು ಸಂಭವಿಸಬಹುದು. ನಮ್ಮವರಿಗಾಗಿ ನಾವು ಅತಿ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಅತೀ ಅವಶ್ಯಕವಾಗಿದೆ ಎಂದು ಡಿಸಿಪಿಗಳಾದ ರವೀಶ್ ಸಿ.ಆರ್ ಹೇಳಿದರು.
ಇಂದು ಕಿಮ್ಸ್ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಇವುಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ-ನಮ್ಮ ಮೊದಲ ಆದ್ಯತೆ ಎಂಬ ಧೇಯವಾಕ್ಯದಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಕಳೆದ ವರ್ಷದಲ್ಲಿ 109 ಜನರು ಅಪಘಾತಗಳಲ್ಲಿ ಮರಣ ಹೊಂದಿದ್ದಾರೆ. ನಮ್ಮ ಜವಾಬ್ದಾರಿ ಅರಿತುಕೊಂಡು ಜೀವನ ನಡೆಸಬೇಕು. ನಮ್ಮನ್ನು ನಂಬಿದವರಿಗೆ ದುಃಖ ತರುವ ಕೆಲಸ ಕಾರ್ಯಗಳಿಗೆ ಮುಂದಾಗಬಾರದು. ಹೆತ್ತ ತಂದೆ ತಾಯಿ, ಗುರುಗಳಿಗೆ ಗೌರವವನ್ನು ತರುವ ಕೆಲಸಗಳನ್ನು ಮಾಡಲು ಅಣಿಯಾಗಬೇಕು ಎಂದರು.
ಕಿಮ್ಸ್ ಪ್ರಾಚಾರ್ಯರಾದ ಡಾ.ಈಶ್ವರ ಹೊಸಮನಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ. ಪ್ರತಿ ವರ್ಷ ಕಿಮ್ಸ್ ನ ಎರಡು ಮೂರು ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಾರೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಮಾನವನ ಜೀವ ಅತ್ಯಮೂಲ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅಪರ ಸಾರಿಗೆ ಆಯುಕ್ತರಾದ ಮಾರುತಿ ಸಾಂಬ್ರಾಣಿ ಮಾತನಾಡಿ, ಪ್ರತಿ ವರ್ಷ ಜನೇವರಿ ತಿಂಗಳಲ್ಲಿ ರಸ್ತೆ ಸುರಕ್ಷತಾ ಮಾಸವನ್ನು ಹಮ್ಮಿಕೊಳ್ಳಲಾಗುತ್ತದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಸಹ ಹೆಚ್ಚಳವಾಗುತ್ತಿವೆ. ಬೇರೆ ದೇಶಕ್ಕೆ ಹೋಲಿಸಿದರೆ ದೇಶದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಅಪಘಾತಗಳನ್ನು ತಡೆಗಟ್ಟಲು ಎಲ್ಲರೂ ಮುಂದಾಗಬೇಕಿದೆ. ನಿಮ್ಮ ಬಗ್ಗೆ ನಿಮಗೆ ಅರಿವು ಇರಬೇಕು, ಬೇರೆ ವಾಹನಗಳ ಬಗ್ಗೆ ಸಹ ಅರಿತುಕೊಳ್ಳಬೇಕು ಹಾಗೂ ನಿಮ್ಮ ವಾಹನದ ಸ್ಥಿತಿಗತಿ ಬಗ್ಗೆ ಮಾಹಿತಿ ಹೊಂದುವುದು ಎಂಬ ಮೂರು ಅಂಶಗಳನ್ನು ಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ತಾಳ್ಮೆ, ಸಂಯಮ ಹಾಗೂ ಶಿಸ್ತಿನಿಂದ ವಾಹನವನ್ನು ಮುನ್ನೆಡಸಬೇಕು. ಅಪಘಾತಗಳು ಸಂಭವಿಸಿದಾಗ ಗಾಯಾಳುಗಳಿಗೆ ವೈದ್ಯಕೀಯ ಉಪಚಾರ ಹಾಗೂ ಸಮೀಪದ ಆಸ್ಪತ್ರೆಗೆ ಸೇರಿಸಬೇಕು. ಗಾಯಾಳುಗಳಿಗೆ ಸಹಾಯ ಮಾಡಿದರೆ ಮೊದಲಿನ ಹಾಗೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗುವುದಿಲ್ಲ. ಅತ್ಯಮೂಲ್ಯವಾದ ಜೀವವನ್ನು ಕಾಪಾಡಲು ಸಾರ್ವಜನಿಕರು ಮುಂದಾಗಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ದೊಡ್ಡ ವಾಹನಗಳನ್ನು ಚಲಾಯಿಸುವುದು ಅವಶ್ಯವಾಗಿದೆ ಎಂದು ಬಣ್ಣಿಸಿದರು.
ಜಂಟಿ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಎಂ. ಪಿ. ಮಾತನಾಡಿ, ಎಜುಕೇಶನ್, ಎನಪೋರ್ಸಮೆಂಟ್ ಹಾಗೂ ಇಂಜಿನಿಯರಿಂಗ್ ಮತ್ತು ಡೈರೆಕ್ಷನ್, ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲಿನ್ ಹಾಗೂ ಡೆಡ್ ಲೈನ್ ಎಂಬ 3 ಇ ಹಾಗೂ 5 ಡಿ ಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಇಂದಿನಿಂದ ಒಂದು ವಾರದವರೆಗೆ ಹಮ್ಮಿಕೊಳ್ಳಲಾಗಿರುತ್ತದೆ. ಅಪಘಾತಗಳನ್ನು ತಡೆಗಟ್ಟುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. 2022ರ ಅಂಕಿ ಅಂಶಗಳಂತೆ 4,61,312 ರಸ್ತೆ ಅಪಘಾತಗಳಾಗಿದ್ದು, 1,68,491 ಜನರು ರಸ್ತೆ ಅಪಘಾತದಿಂದ ಮರಣ ಹೊಂದಿರುತ್ತಾರೆ ಮತ್ತು 4,43,366 ಜನರು ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಕರ್ನಾಟಕದಲ್ಲಿ ಪ್ರತಿ ಗಂಟೆಗೆ ಇಬ್ಬರು ವ್ಯಕ್ತಿಗಳು ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. 2022ರಲ್ಲಿ ಕರ್ನಾಟಕದಲ್ಲಿ 39,762 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 11,702 ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದು, 48,154 ಜನರು ಗಂಭೀರವಾಗಿ ಗಾಯಗೊಂಡಿರುತ್ತಾರೆ. ಒಟ್ಟಾರೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನ ಸವಾರರ ಪಾಲು ಅತ್ಯಧಿಕವಿದ್ದು, 17,933 ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ಮರಣ ಹೊಂದಿದವರ ಪೈಕಿ ಕರ್ನಾಟಕದಲ್ಲಿ 18-25 ವಯೋಮಾನದ 2,267, 25-35 ವಯೋಮಾನದ 3,346 ಜನರು ಮರಣ ಹೊಂದಿರುತ್ತಾರೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟಾರೆ 518 ಅಪಘಾತಗಳು ಸಂಭವಿಸಿದ್ದು, 111 ಜನ ಮೃತಪಟ್ಟಿದ್ದು, 499 ಜನ ಗಂಭೀರ ಗಾಯಕ್ಕೆ ತುತ್ತಾಗಿರುತ್ತಾರೆ. ಅತಿ ವೇಗ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಒತ್ತಡ ಹಾಗೂ ಸಂಚಾರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಸೇರಿದಂತೆ ಇತರೆ ಕಾರ್ಯಗಳಿಂದ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ರಕ್ಷಣಾತ್ಮಕವಾದ ಚಾಲನೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಅಳವಡಿಸಿಕೊಳ್ಳಬೇಕಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಬಾರದು.
ಸಂಚಾರ ನಿಯಮಗಳನ್ನು ಅರಿತುಕೊಂಡು ವಾಹನ ಚಲಾಯಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಸ್ತೆ ಸುರಕ್ಷತೆಯ ಕರಪತ್ರ ಹಾಗೂ ಸ್ಟಿಕರ್ ಗಳನ್ನು ಬಿಡುಗಡೆ ಮಾಡಲಾಯಿತು.
ಕಿಮ್ಸ್ ನ ಮುಖ್ಯ ಆಡಳಿತಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಐ.ಎಂ.ಎ ಅಧ್ಯಕ್ಷರಾದ ಡಾ.ವೆಂಕಟೇಶ ಮೂಲಿಮನಿ, ಐ.ಎಂ.ಎ ಮಹಿಳಾ ವೈದ್ಯರ ಶಾಖೆಯ ಅಧ್ಯಕ್ಷೆ ಡಾ.ಭಾರತಿ ಭಾವಿಕಟ್ಟಿ, ಕಾರ್ಯದರ್ಶಿಗಳಾದ ಡಾ.ಆನಂದ ವರ್ಮಾ, ಡಾ.ಆಶಾ ಪಾಟೀಲ, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭೀಮನಗೌಡ ಪಾಟೀಲ ಸೇರಿದಂತೆ ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಶ್ರೇಯಾ ಪ್ರಾರ್ಥಿಸಿದರು. ದಿನಾಮನಿ ಜಿ.ವಿ. ಸ್ವಾಗತಿಸಿದರು. ಅಶೋಕ ವಾಲ್ಮೀಕಿ ವಂದಿಸಿದರು.
ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’




