Navaratri Special: Temple: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಕೂಡ ಒಂದು. ದೇವಿ ಮೂಕಾಸುರನನ್ನು ಕೊಂದ ಕಾರಣಕ್ಕೆ, ಮೂಕಾಂಬಿಕೆಯಾಗಿ ಲೋಕ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ ಬನ್ನಿ..
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಸೌಪರ್ಣಿಕ ನದಿ ತೀರದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವಿದೆ. ಇಲ್ಲಿ ಕೋಲ ಮಹರ್ಷಿಗಳು ದೇವಿಗಾಗಿ ತಪಸ್ಸು ಮಾಡಿದ ಕಾರಣಕ್ಕೆ, ಈ ಸ್ಥಳಕ್ಕೆ ಕೋಲಪುರವೆಂದು ಹೆಸರು ಬಂದು, ಕಾಲಾನಂತರದಲ್ಲಿ ಕೊಲ್ಲೂರೆಂದು ಕರೆಯಲು ಶುರು ಮಾಡಿದರು.
ಕೋಲ ಮಹರ್ಷಿಗಳು ಈ ಸ್ಥಳದಲ್ಲಿ ಹಸುವೊಂದು ತಾನಾಗಿಯೇ ಶಿವಲಿಂಗಕ್ಕೆ ಹಾಲು ಕೊಡುವುದನ್ನು ಕಂಡು, ಆ ಶಿವಲಿಂಗವನ್ನು ಪೂಜಿಸಲು ಪ್ರಾರಂಭಿಸಿದರು. ಕೋಲ ಮಹರ್ಷಿಗಳ ತಪಸ್ಸಿಗೆ, ಪೂಜೆಗೆ ಮೆಚ್ಚಿದ ಶಿವನಿಂದ, ಮುಂದೊಂದು ದಿನ ಇದೇ ಲಿಂಗದಲ್ಲಿ ದೇವಿ ಬಂದು ನೆಲೆ ನಿಂತು, ಲೋಕಕಲ್ಯಾಣ ಮಾಡುತ್ತಾಳೆಂದು ಆಕಾಶವಾಣಿ ಬರುತ್ತದೆ.
ಇದೇ ರೀತಿ ನಡೆಯುತ್ತಿರುವಾಗ, ಕೌಮಾಸುರ ಎಂಬ ರಾಕ್ಷಸ, ತಮ್ಮ ಗುರುವಾಗ ಶುಕ್ರಾಚಾರ್ಯರಲ್ಲಿ ದೀಕ್ಷೆ ಪಡೆದು, ದೇವರನ್ನು ತಪಸ್ಸು ಮಾಡಿ, ಯಾವ ಪುರುಷನಿಂದಲೂ ತನಗೆ ಸಾವು ಬರಬಾರದು ಎಂದು ವರ ಪಡೆಯುತ್ತಾನೆ. ಏಕೆಂದರೆ, ಅವನ ದೃಷ್ಟಿಯಲ್ಲಿ ಹೆಣ್ಣೆಂದರೆ, ಯಕಶ್ಚಿತ್ ಎಂದಾಗಿತ್ತು.
ಕೌಮಾಸುರನ ಉಪಟಳ ಹೆಚ್ಚಾಗುತ್ತಿದ್ದಂತೆ, ದೇವತೆಗಳು ಆದಿಶಕ್ತಿಯನ್ನು ಕಾಪಾಡೆಂದು ಬೇಡುತ್ತಾರೆ. ಇದನ್ನು ಅರಿತ ,ಶುಕ್ರಾಚಾರ್ಯರು, ನೀನು ಬರೀ ಪುರುಷರಿಂದ ಸಾವು ಬರಬಾರದೆಂದು ಬೇಡಿಕೊಂಡಿದ್ದಿ. ಆದರೆ ನಿನಗೆ ಓರ್ವ ಹೆಣ್ಣಿನಿಂದ ತೊಂದರೆಯಾಗಲಿದೆ. ಹಾಗಾಗಿ ನಿನಗೆ ಯಾರಿಂದಲೂ ಸಾವು ಬರಬಾರದು ಎಂದು ಶಿವನಲ್ಲಿ ತಪಸ್ಸು ಮಾಡಿ, ವರ ಪಡೆದುಕೋ ಎನ್ನುತ್ತಾರೆ.
ಗುರುಗಳ ಮಾತಿನಂತೆ, ಕೌಮಾಸುರ ಶಿವನಲ್ಲಿ ತಪಸ್ಸು ಮಾಡುತ್ತಾನೆ. ಶಿವ ಪ್ರತ್ಯಕ್ಷನಾಗಿ, ಇನ್ನೇನು ವರ ಕೇಳಬೇಕು ಅನ್ನುವಷ್ಟರಲ್ಲಿ ಸರಸ್ವತಿ ದೇವಿ, ಕೌಮಾಸುರನ ನಾಲಿಗೆಯ ಮೇಲೆ ಕುಳಿತು, ಆತ ಮಾತನಾಡದಂತೆ ಮಾಡುತ್ತಾಳೆ. ಅಲ್ಲಿ ವರ ಕೇಳದೇ ಹಾಾಗೆ ಉಳಿಯುತ್ತದೆ. ಅಲ್ಲಿಗೆ ದೇವಿ ಕೌಮಾಸುರನೊಂದಿಗೆ ಯುದ್ಧ ಮಾಡಿ, ಆತನ ಸಂಹಾರ ಮಾಡುತ್ತಾಳೆ. ಶಿವನ ಮುಂದೆ ಮಾತನಾಡದೇ, ಮೂಕನಂತಿದ್ದ ಕಾರಣ, ಕೌಮಾಸುರನನ್ನು ಮೂಕಾಸುರನೆಂದು ಹೇಳಲಾಗುತ್ತದೆ. ಮತ್ತು ಮೂಕಾಸುರನನ್ನು ಕೊಂದ ದೇವಿಯನ್ನು ಮೂಕಾಂಬಿಕೆ ಎಂದು ಹೇಳಲಾಗುತ್ತದೆ.
ಇನ್ನು ಬರೀ ಕೊಲ್ಲೂರು ಮೂಕಾಂಬಿಕೆಯಷ್ಟೇ ಅಲ್ಲದೇ, ಇಲ್ಲಿ ಹರಿಯುವ ಸೌಪರ್ಣಿಕೆಯೂ ಶಕ್ತಿವಂತಳು. ರೋಗ ರುಜಿನಗಳಿಂದ ಬಳಲುತ್ತಿದ್ದವರು, ಚರ್ಮ ರೋಗದಿಂದ ಬಳಲುವವರು, ಸೌಪರ್ಣಿಕ ನದಿಯಲ್ಲಿ ಮಿಂದೆದ್ದರೆ, ಅವರ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.