Spiritual: ಮಂಗಳೂರಿನಲ್ಲಿ ಹಲವು ಪ್ರಸಿದ್ಧ ದೇವಸ್ಥಾನಗಳಿದೆ. ಅದರಲ್ಲಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಕೂಡ ಒಂದು. ಇಂದು ನವರಾತ್ರಿ ವಿಶೇಷವಾಗಿ ನಾವು ಪೊಳಲಿ ರಾಜರಾಜೇಶ್ವರಿ ದೇವಿ ದೇವಸ್ಥಾನದ ವಿಶೇಷತೆ ತಿಳಿಯೋಣ.
ಬಂಟ್ವಾಳದ ಪೊಳಲಿ ಎಂಬಲ್ಲಿ ಈ ರಾಜರಾಜೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ರಾಜರಾಜೇಶ್ವರಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಈ ರಾಜರಾಜೇಶ್ವರಿ ಮೂರ್ತಿಯ ವಿಶೇಷತೆ ಅಂದ್ರೆ, ಈ ಮೂರ್ತಿಯನ್ನು ವಿಶಿಷ್ಟವಾದ ಮಣ್ಣಿನಿಂದ ತಯಾರಿಸಲ್ಪಟ್ಟಿದೆ. ಹಾಗಾಗಿ ಈ ಮೂರ್ತಿಗೆ ಅಭಿಷೇಕಗಳನ್ನು ಮಾಡಲಾಗುವುದಿಲ್ಲ.
ಈ ದೇವಸ್ಥಾನದಲ್ಲಿ ರಾಜರಾಜೇಶ್ವರಿಯ ಜೊತೆಗೆ, ಕಾಳಿ, ದುರ್ಗೆ, ಮಹಾಗಣಪತಿ ಮತ್ತು ಕ್ಷೇತ್ರ ಪಾಲಕನನ್ನು ಪೂಜಿಸಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ,1 ತಿಂಗಳು ಪೊಳಲಿ ಜಾತ್ರೆ ಇರುತ್ತದೆ. ಕೊನೆಯ ಹತ್ತು ದಿನಗಳು ವಿಶೇಷವಾಗಿದ್ದು, 10 ರಥದ ಮೇಲೆ ರಾಜರಾಜೇಶ್ವರಿಯ ಮೆರವಣಿಗೆ ನಡೆಯುತ್ತದೆ.
ಈ ವೇಳೆ ದೇವಿ ರಕ್ಕಸರ ರುಂಡ ಚೆಂಡಾಡಿದಂತೆ, ಮೈದಾನದಲ್ಲಿ ಚೆಂಡಿನಾಟವಿರುತ್ತದೆ. ಕೊನೆಯ ದಿನ ರಥಯಾತ್ರೆ ವೇಳೆ ವಿಜೃಂಭಣೆಯಿಂದ ಪಟಾಕಿ ಸಿಡಿಸಿ, ದೇವಿಯ ರಥಯಾತ್ರೆ ಮಾಡಲಾಗುತ್ತದೆ.
ಇನ್ನು ಈ ದೇವಸ್ಥಾನದ ಇತಿಹಾಸದ ಬಗ್ಗೆ ತಿಳಿಯುವುದಾದರೆ, ಸುರಥನೆಂಬ ಮಹಾರಾಜನು ತನ್ನ ಶತ್ರುಗಳೊಂದಿಗೆ ಯುದ್ಧ ಮಾಡಿ, ಎಲ್ಲವನ್ನೂ ಕಳೆದುಕೊಂಡಾಗ, ಸುಮೇಧ ಎಂಬ ಋಷಿಗಳು, ರಾಜನನ್ನು ಭೇಟಿಯಾಗುತ್ತಾರೆ. ಋಷಿಗಳು ರಾಜನ ಕಷ್ಟವನ್ನು ಕೇಳಿ, ಶ್ರೀ ರಾಜರಾಜೇಶ್ವರಿ ಮಂತ್ರವನ್ನು ಪಠಿಸುವಂತೆ ಹೇಳುತ್ತಾರೆ.
ರಾಜ ಆ ಮಂತ್ರ ಪಠಿಸುತ್ತಾ ನಿದ್ರೆಗೆ ಜಾರುತ್ತಾನೆ. ಆಗ ಕನಸಿನಲ್ಲಿ ಶ್ರೀ ರಾಜರಾಜೇಶ್ವರಿಯು ದರ್ಶನವಾಗುತ್ತದೆ. ಆಗ ಸುಮೇಧ ಋಷಿಗಳು, ನೀನು ಕನಸಿನಲ್ಲಿ ಕಂಡಂತೆ ದೇವಿಯನ್ನು ಪ್ರತಿಷ್ಠಾಪಿಸಿ, ಪೂಜಿಸು ಎಂದು ಹೇಳುತ್ತಾರೆ. ಋಷಿಗಳ ಮಾತಿನಂತೆ, ದೇವಿಯ ಮೂರ್ತಿಯೊಂದಿಗೆ, ಹಲವು ದೇವರ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುತ್ತಾನೆ. ಪೂಜೆಯ ಫಲವಾಗಿ, ರಾಜ ಮೊದಲಿನಂತೆ, ತನ್ನೆಲ್ಲ ಸಂಪತ್ತನ್ನು ಮರಳಿ ಪಡೆಯುತ್ತಾನೆ.
ಬಳಿಕ ದೇವಸ್ಥಾನ ಕಟ್ಟುತ್ತಾರೆ. ತನ್ನ ವಜ್ರದ ಕಿರೀಟವನ್ನು ಶ್ರೀ ರಾಜರಾಜೇಶ್ವರಿಗೆ ಅರ್ಪಿಸುತ್ತಾನೆ. ಹೀಗೆ ಶ್ರೀ ರಾಜರಾಜೇಶ್ವರಿಯ ದೇವಸ್ಥಾನ ನಿರ್ಮಾಣವಾಗುತ್ತದೆ. ಬಳಿಕ ಬಂದ ರಾಜರು, ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತಾರೆ. ಈ ದೇವಿಯನ್ನು ಭಕ್ತಿಯಿಂದ ಆರಾಧಿಸುವವರನ್ನು ದೇವಿ ಸದಾ ಕಾಪಾಡಿದ ಹಲವು ಉದಾಹರಣೆಗಳಿದೆ.