National News: ದೇಶದಲ್ಲಿ ನಕ್ಸಲ್ ವಿರೋಧಿ ಮಹತ್ವಾಕಾಂಕ್ಷಿ ಕಾರ್ಯಾಚರಣೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರವು ಮುಂಬರುವ 2026ರ ವೇಳೆಯಷ್ಟರಲ್ಲಿಗೆ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿಸುವ ಸಂಕಲ್ಪವನ್ನು ತೊಟ್ಟಿದೆ. ಇದರ ಆರಂಭದ ದಿನಗಳಿಂದಲೂ ಹಂತ ಹಂತವಾಗಿ ದೇಶದ ಭದ್ರತಾ ಪಡೆಗಳು ಅಭೂತಪೂರ್ವ ಜಯ ಸಾಧಿಸುವ ಮೂಲಕ ನಕ್ಸಲ್ರನ್ನು ಮಟ್ಟಹಾಕುತ್ತಿವೆ.
ಐವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು..
ಕಳೆದ ತಿಂಗಳು ಕೂಡ ಛತ್ತೀಸ್ಗಢದಲ್ಲಿ ಬೃಹತ್ ಎನ್ಕೌಂಟರ್ ನಡೆದು ನಕ್ಸಲರು ಹತರಾಗಿದ್ದರು. ಅಲ್ಲದೆ ಹೀಗೆ ಮುಂದುವರೆದಿರುವ ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯು ದಿನ ಕಳೆದಂತೆಲ್ಲ ಕೇಂದ್ರ ಸರ್ಕಾರದ ಗುರಿಯನ್ನು ತಲುಪುವಲ್ಲಿ ಸಹಕಾರಿಯಾಗುತ್ತಿದೆ. ಇನ್ನೂ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿನ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಏಳು ಶವಗಳನ್ನು ವಶ ಪಡಿಸಿಕೊಂಡ ಭದ್ರತಾ ಪಡೆಗಳು..!
ಇತ್ತೀಚಿನ ಸಾವುನೋವುಗಳೊಂದಿಗೆ, ಕಳೆದ ಮೂರು ದಿನಗಳಲ್ಲಿ ಉನ್ನತ ನಕ್ಸಲ್ ನಾಯಕರಾದ ಸುಧಾಕರ್ ಮತ್ತು ಭಾಸ್ಕರ್ ಸೇರಿದಂತೆ ಏಳು ನಕ್ಸಲರನ್ನು ಬೇಟೆಯಾಡಲಾಗಿದೆ. ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಪಡೆಗಳು ಏಳು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಮೂರು ಶವಗಳ ಪತ್ತೆ..
ಅಲ್ಲದೆ ಶನಿವಾರದ ಗುಂಡಿನ ಚಕಮಕಿಯ ನಂತರ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಶುಕ್ರವಾರ ಮಧ್ಯರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಮೂರು ಶವಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಉದ್ಯಾನದಲ್ಲಿ ಹಿರಿಯ ನಕ್ಸಲ್ ನಾಯಕರೊಬ್ಬರು ಅಡಗಿರುವ ಮಾಹಿತಿ ಪಡೆದುಕೊಂಡ ಬಳಿಕ ಜಿಲ್ಲಾ ಮೀಸಲು ಪಡೆ ಕೋಬ್ರಾ ಕಮಾಂಡೋ ಬೆಟಾಲಿಯನ್ ಮತ್ತು ವಿಶೇಷ ಕಾರ್ಯಪಡೆಗಳನ್ನು ಒಳಗೊಂಡ ಜಂಟಿ ತಂಡ ಗುರುವಾರದಿಂದ ಶೋಧ ಕಾರ್ಯಾಚರಣೆ ಮುಂದುವರೆಸಿತ್ತು.
45 ಲಕ್ಷ ರೂಪಾಯಿ ಒಂದು ಸುಳಿವು, ಸರ್ಕಾರಗಳ ಘೋಷಣೆಯಾಗಿತ್ತು..
ಇನ್ನೂ ಪ್ರಮುಖವಾಗಿ ಉನ್ನತ ನಕ್ಸಲ್ ನಾಯಕನಾಗಿದ್ದ ಸುಧಾಕರ್ ಸುಳಿವು ನೀಡಿದವರಿಗೆ 45 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತೆಲಂಗಾಣ ಹಾಗೂ ಛತ್ತೀಸ್ಗಢ ಸರ್ಕಾರಗಳು ಘೋಷಿಸಿದ್ದವು. ಅಲ್ಲದೆ ಇನ್ನೋರ್ವ ನಕ್ಸಲ್ ನಾಯಕ ಭಾಸ್ಕರ್ ಮಾಹಿತಿ ನೀಡಿದವರಿಗೆ ಛತ್ತೀಸ್ಗಢ ಸರ್ಕಾರ 40 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿತ್ತು. ಕಾರ್ಯಾರಣೆ ನಡೆದ ಸ್ಥಳದಲ್ಲಿ ಎರಡು ಎಕೆ-74 ರೈಫಲ್ ಹಾಗೂ ಅಪಾರ ಪ್ರಮಾಣದ ಮದ್ದು, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತ ನಕ್ಸಲರಲ್ಲಿ ಗುರುತು ಪತ್ತೆಯಾಗದ ಇಬ್ಬರು ಮಹಿಳೆಯರ ಶವ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳ ಎನ್ಕೌಂಟರ್ನಿಂದ ತಪ್ಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಕೆಲವು ನಕ್ಸಲರು ಮನಸ್ಸು ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹವಾಗಿದೆ.