News: ರಾಜ್ಯದ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿ ಪರಿಶೀಲನೆಯ ಕುರಿತು ನಡೆದ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿರುವ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದ್ದು, ಈ ಮೂಲಕ ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ಇದೀಗ ಕಂಟಕ ಎದುರಾಗಿದೆ. ಈ ಕುರಿತು ಸ್ವತಃ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿಯೇ ಈ ರೀತಿಯ ತೀರ್ಮಾನ ಮಾಡಲಾಗಿದೆ. ಮುಖ್ಯವಾಗಿ ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ವಿಶ್ವ ವಿದ್ಯಾಲಯಗಳಿಗೆ ಸರ್ಕಾರದ ಈ ನಿರ್ಧಾರದಿಂದ ತೂಗುಗತ್ತಿಯ ಆತಂಕ ಎದುರಾಗಿದೆ.
ತನ್ನ ಆರ್ಥಿಕ ಮುಗ್ಗಟ್ಟಿನಿಂದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಹಾಗೂ ನಗರದ ನೃಪತುಂಗ ಸೇರಿದಂತೆ ಹಲವು ವಿಶ್ವ ವಿದ್ಯಾಲಯಗಳಿಗೆ ಬೀಗ ಬೀಳುವ ಮುನ್ಸೂಚನೆಯನ್ನು ಸರ್ಕಾರ ನೀಡಿದೆ. ಈ ಮೊದಲು ನೂತನ ವಿಶ್ವ ವಿದ್ಯಾಲಯಗಳನ್ನು ಮುನ್ನಡೆಸಲು ಆರಂಭದ 5 ವರ್ಷಗಳಿಗೆ ಬೇಕಾಗುವ ಆರ್ಥಿಕ ಮೊತ್ತದ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿತ್ತು. ಅಲ್ಲದೆ ನೂತನ ವಿಶ್ವ ವಿದ್ಯಾಲಯಗಳ ನಿರ್ಮಾಣಕ್ಕೆ ಹಾಗೂ ಅವುಗಳನ್ನು ಯಶಸ್ವಿಯಾಗಿ ಮುನ್ನಡೆಸುವುದಕ್ಕಾಗಿ 342 ಕೋಟಿ ರೂಪಾಯಿಗಳ ಅವಶ್ಯಕತೆ ಇರುವ ಕುರಿತು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು.
ಇನ್ನೂ ಈ ವೆಚ್ಚವು ನೂತನ ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಬೇಕಾಗುವ 100 ರಿಂದ 200 ಎಕರೆಗಳಷ್ಟು ಜಮೀನಿನ ವೆಚ್ಚವನ್ನು ಹೊರತುಪಡಿಸಿತ್ತು. ಈ ಮೊತ್ತವು ಕೇವಲ ಉಪನ್ಯಾಸಕರು, ಇನ್ನಿತರ ಸಿಬ್ಬಂದಿಗಳ ಸಂಬಳ, ಸಲ ಕರಣೆಗಳು, ಮೂಲ ಸೌಕರ್ಯಗಳು, ಪೀಠೋಪಕರಣ, ವಾಹನಗಳು ಸೇರಿದಂತೆ ಹಲವು ಸಾಮಗ್ರಿಗಳ ಖರೀದಿಗೆ ಸರಿಹೊಂದುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಮುಖವಾಗಿ ಹಾಸನ, ಚಾಮರಾಜನಗರ, ಹಾವೇರಿ, ಕೊಪ್ಪಳ, ಕೊಡಗು, ಬಾಗಲಕೋಟೆ ಹಾಗೂ ಮಂಡ್ಯ ಈ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಒಟ್ಟು 10 ವಿಶ್ವ ವಿದ್ಯಾಲಗಳನ್ನು ಬಿಜೆಪಿ ಸರ್ಕಾರ ತೆರೆದಿತ್ತು. ಅವುಗಳಲ್ಲಿ ಬೀದರ್ ವಿಶ್ವ ವಿದ್ಯಾಲಯವು ತನ್ನ ಉತ್ತಮ ಕಾರ್ಯನಿರ್ವಹಣೆಯಿಂದ ಮುಚ್ಚುವ ಭೀತಿಯಿಂದ ತಪ್ಪಿಸಿಕೊಂಡಿದೆ. ಈ ವಿಶ್ವ ವಿದ್ಯಾಲಯವು 150 ಸಂಯೋಜಿತ ಕಾಲೇಜುಗಳನ್ನು ತನ್ನ ಅಡಿಯಲ್ಲಿಟ್ಟುಕೊಂಡು ಒಳ್ಳೆಯ ಕಾರ್ಯನಿರ್ವಹಣೆ ಮಾಡುತ್ತಿದೆ. ಅಲ್ಲದೆ ತನ್ನ ಎಲ್ಲ ಕಾಲೇಜುಗಳಿಂದಲೂ ಸಹ ನಿಗದಿತ ಶುಲ್ಕ ವಸೂಲಿಯಲ್ಲಿಯೂ ಉತ್ತಮವಾಗಿದ್ದು, ಉಳಿದೆಲ್ಲವುಗಳಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ಚರ್ಚಿಸಿದ ಸಭೆಯ ಪ್ರಮುಖರು ಇದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಸಮರ್ಪಕ ನಿರ್ವಹಣೆಯ ಕೊರತೆಯ ಕಾರಣದಿಂದ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ವಾಹನ ಖರೀದಿಸಲು ಸಾಧ್ಯವಾಗಿಲ್ಲ. ಅಲ್ಲದೆ ಮಂಡ್ಯದ ವಿಶ್ವ ವಿದ್ಯಾಲಯವನ್ನು ಮುಚ್ಚಬೇಕು ಎಂದು ಸರ್ಕಾರಕ್ಕೆ ಅಲ್ಲಿನ ಪರಿಷತ್ ಸದಸ್ಯರೊಬ್ಬರು ಮನವಿ ನೀಡಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ವಿಶ್ವ ವಿದ್ಯಾಲಯಕ್ಕೂ ಗಂಡಾಂತರ ಎದುರಾಗಿದೆ. ಇನ್ನೂ ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಣ ಪ್ರೇಮಿಗಳು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.