ಮಂಡ್ಯ ಸೋಲು ನೆನೆದು ನಿಖಿಲ್ ಭಾವುಕ! ಅವತ್ತಿನ ನಿಖಿಲ್ ಈಗ ಬದಲಾಗಿದ್ದಾರೆ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅನುಭವಿಸಿದ ಸೋಲನ್ನು ನೆನೆದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ʼಆ ಸೋಲೇ ನನ್ನ ರಾಜಕೀಯ ಪಕ್ವತೆಗೆ ಟರ್ನಿಂಗ್ ಪಾಯಿಂಟ್ʼ ಎಂದು ಹೆಮ್ಮೆಯಿಂದ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜೆಡಿಎಸ್ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ನಿಖಿಲ್, ಮಂಡ್ಯ ಜನರ ಪ್ರೀತಿ ಮತ್ತು ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಊರಿಗೆ ಹೋದರೂ ಜನ ನೀಡುವ ಆತ್ಮೀಯತೆ ತಮ್ಮನ್ನು ಸದಾ ಸ್ಪರ್ಶಿಸುತ್ತದೆ ಭಾವುಕರಾಗಿದ್ದಾರೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಆ ಅನುಭವವೇ ತಮ್ಮ ರಾಜಕೀಯ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅವತ್ತಿನ ನಿಖಿಲ್ ಮತ್ತು ಇವತ್ತಿನ ನಿಖಿಲ್ ನಡುವೆ ದೊಡ್ಡ ಬದಲಾವಣೆ ಇದೆ. ಸೋಲು ನನಗೆ ಪಾಠ ಕಲಿಸಿದೆ ಎಂದು ಅವರು ಹೇಳಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡಿದ ಅವರು, ದೇವೇಗೌಡರ ಹೋರಾಟದಿಂದ ಹುಟ್ಟಿದ ಪಕ್ಷ ಇದು. ಕನ್ನಡ ನಾಡು, ನುಡಿ, ರೈತರು ಮತ್ತು ನೆಲ-ಜಲದ ಪರವಾಗಿ ನಿಲ್ಲುತ್ತಿರುವ ಏಕೈಕ ಪ್ರಾದೇಶಿಕ ಶಕ್ತಿ ಜೆಡಿಎಸ್ ಎಂದು ಹೇಳಿದರು. ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟ ಇಂದಿಗೂ ಸ್ಪೂರ್ತಿಯಾಗಿದೆ ಎಂದು ಹೇಳಿದ ನಿಖಿಲ್, ರಾಜ್ಯ ರಾಜಕಾರಣದಲ್ಲಿ ಅವರ ಪಾತ್ರ ಇನ್ನೂ ಪ್ರಮುಖವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೈತರ ಸಂಕಷ್ಟ ಹೆಚ್ಚಾಗಿದೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು. 2028ರ ಚುನಾವಣೆಯಲ್ಲಿ NDA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಪಾಂಡವಪುರದಲ್ಲಿ ಭಾರೀ ಜನಸಾಗರ ಸೇರುವ ಮೂಲಕ ನಿಖಿಲ್‌ಗೆ ಅದ್ದೂರಿ ಸ್ವಾಗತ ನೀಡಲಾಯಿತು. ಹೂಮಳೆ, ಪಟಾಕಿ ಮತ್ತು ಕ್ರೇನ್ ಮೂಲಕ ಹಾರ ಹಾಕಿ ಕಾರ್ಯಕರ್ತರು ತಮ್ಮ ಬೆಂಬಲ ತೋರಿದರು.

About The Author