ಬೆಂಗಳೂರು : ಒಂದು ಸಮುದಾಯ ಅಥವಾ ಒಂದು ಧರ್ಮದ ನೀತಿಗಳನ್ನೇ ರಾಷ್ಟ್ರೀಯತೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಏಕರೂಪದ ಈ ರಾಷ್ಟ್ರೀಯತೆ ನಮ್ಮ ಸಂವಿಧಾನದ ಭದ್ರ ಬುನಾದಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂಬ ಹೆಮ್ಮೆಯನ್ನು ನಮಗೆ ತಂದುಕೊಟ್ಟಿರುವುದು ನಮ್ಮ ಸಂವಿಧಾನ. ಧರ್ಮನಿರಪೇಕ್ಷತೆ, ಪ್ರಜಾಸತ್ತಾತ್ಮಕ ಮತ್ತು ಗಣತಂತ್ರ ಎಂಬ ಮಂತ್ರಗಳು ನಮ್ಮ ಸಂವಿಧಾನದ ಆಧಾರ ಸ್ತಂಭಗಳಾಗಿವೆ ಎಂದಿದ್ದಾರೆ.
ಭಾರತ ಸಂವಿಧಾನ ಸಮಾನತೆಯನ್ನು ಸಾರಿ ಹೇಳಿದೆ. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಿಂತ ಮೇಲೂ ಅಲ್ಲ ಕೀಳೂ ಅಲ್ಲ. ಹಾಗಾಗಿಯೇ ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯ ತತ್ವವನ್ನು ಅಳವಡಿಸಲಾಗಿದೆ. ಸಂವಿಧಾನದ ಇಂತಹ ಎಲ್ಲ ಆಶಯಗಳನ್ನು ಎತ್ತಿ ಹಿಡಿಯುವುದು ಇಂದು ನಮ್ಮೆಲ್ಲರ ಮುಂದಿರುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ ಎಂದಿದ್ದಾರೆ.
ಅಂಬೇಡ್ಕರ್ ಅವರು ತಾವೇ ರಚಿಸಿರುವ ಸಂವಿಧಾನದ ಬುನಾದಿ ಮೇಲೆ ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಲು ಬಯಸಿದ್ದರು. ಆದರೆ ಸಂವಿಧಾನವನ್ನು ಮನಃಪೂರ್ವಕವಾಗಿ ಒಪ್ಪದೆ ಇದ್ದ ಹಿಂದೂ ಧರ್ಮದೊಳಗಿದ್ದ ಒಂದು ವರ್ಗ ಮನಸ್ಥಿತಿ ಆಧಾರದಲ್ಲಿ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವುದು ಅಂಬೇಡ್ಕರ್ ಅವರಿಗೆ ತಿಳಿದಿತ್ತು.
ಈ ಹಿನ್ನೆಲೆಯಲ್ಲಿಯೇ ಅವರು ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಈಗಲೂ ಹಿಂದೂ ಧರ್ಮದೊಳಗಿರುವ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನಸ್ಥಿತಿಯೇ ಹೆಚ್ಚು ಪ್ರಿಯವೆನಿಸಿದೆ. ಅದು ಸಾರಿರುವ ಜಾತಿ ವ್ಯವಸ್ಥೆಯ ಬುಡ ಭದ್ರಪಡಿಸುವ ಕೆಲಸವನ್ನು ಈ ವರ್ಗ ಗುಟ್ಟಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.