ಹಬ್ಬದ ಹೊತ್ತಲ್ಲಿ ದಿಢೀರ್ ಶಾಕ್- ಮತ್ತೆ ಗಗನಕ್ಕೇರಿದ ಈರುಳ್ಳಿ!

ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲೇ, ಅಡುಗೆ ಮನೆಯ ಪ್ರಮುಖ ಪರಿಕರವಾದ ಈರುಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವುದು ಜನಸಾಮಾನ್ಯರ ಕಣ್ಣಲ್ಲಿ ನೀರು ತರಿಸಿದೆ. ದೇಶದಾದ್ಯಂತ ಈರುಳ್ಳಿ ಬೆಲೆಯಲ್ಲಿ ಶೇಕಡಾ 40ರಿಂದ 45ರವರೆಗೆ ಜಿಗಿತ ಕಂಡುಬಂದಿದ್ದು, ಕೆಲ ದಿನಗಳ ಹಿಂದೆ ಮೂವತ್ತೈದು ರೂಪಾಯಿಗೆ ಸಿಗುತ್ತಿದ್ದ ಕೆ.ಜಿ ಈರುಳ್ಳಿ ಈಗ ಐವತ್ತರಿಂದ ಎಪ್ಪತ್ತು ರೂಪಾಯಿಗೆ ತಲುಪಿದೆ ಅಂತ ಕೇಳಿ ಬರ್ತಾ ಇದೆ.

ಹಾಗಾದರೆ ಈ ಬೆಲೆ ಏರಿಕೆಗೆ ಕಾರಣವೇನು ಅಂತ ನೋಡೋದಾದ್ರೆ ‘ಬೇಡಿಕೆ ಹೆಚ್ಚಾಗಿರುವುದಕ್ಕಿಂತ ಹೆಚ್ಚಾಗಿ, ದಾಸ್ತಾನಿನಲ್ಲಿ ಉಂಟಾಗಿರುವ ಕುಸಿತ ಮತ್ತು ಹೊಸ ಫಸಲಿನ ಆಗಮನದ ವಿಳಂಬವೇ ಇದಕ್ಕೆ ಮುಖ್ಯ ಕಾರಣ ಅಂತ ಹೇಳಲಾಗ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಟಾವಾಗುವ ಹಿಂಗಾರು ಬೆಳೆಯೇ ಅಕ್ಟೋಬರ್‌ವರೆಗೆ ಪ್ರಮುಖ ಪೂರೈಕೆಯ ಮೂಲವಾಗಿದೆ. ಆದರೆ ‘ಶೀತಲೀಕರಣ ಗೃಹಗಳಲ್ಲಿ’ ಸಂಗ್ರಹಿಸಿದ್ದ ಹಳೆಯ ದಾಸ್ತಾನು ಈಗ ಖಾಲಿಯಾಗುತ್ತಿದ್ದು, ಶೇಕಡಾವಾರು ಲೆಕ್ಕದಲ್ಲಿ ಬೆಲೆ ಗಗನಕ್ಕೇರಿದೆ.

ಮಹಾರಾಷ್ಟ್ರದ ನಾಸಿಕ್ ಹಾಗೂ ದಕ್ಷಿಣದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಂಗಾರು ಮಳೆಯ ವ್ಯತ್ಯಯದಿಂದಾಗಿ ಬಿತ್ತನೆ ಹಾಗೂ ಫಸಲಿನ ಆಗಮನ ತಡವಾಗಿದೆ. ಇದರೊಂದಿಗೆ ದಾಸ್ತಾನು ಮಾಡಿದ್ದ ಈರುಳ್ಳಿಯ ಗುಣಮಟ್ಟವೂ ಹದಗೆಟ್ಟಿರುವುದು ಕೊರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಮಾರುಕಟ್ಟೆಗೆ ಹೊಸ ಫಸಲು ಬರುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಈ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಮಧ್ಯಪ್ರವೇಶಿಸಿದ್ದು, ‘ಕಾಂದಾ ಎಕ್ಸ್‌ಪ್ರೆಸ್’ ರೈಲುಗಳ ಮೂಲಕ ದೇಶದ ವಿವಿಧೆಡೆಗೆ ಕಾಪು ದಾಸ್ತಾನಿನ ಈರುಳ್ಳಿಯನ್ನು ಸರಬರಾಜು ಮಾಡುತ್ತಿದೆ. ಸಾರ್ವಜನಿಕರಿಗೆ ನೆರವಾಗಲು ಕೇಂದ್ರ ಸರ್ಕಾರವು ಪ್ರತಿ ಕೆ.ಜಿಗೆ 35 ರೂಪಾಯಿಯ ರಿಯಾಯಿತಿ ದರದಲ್ಲಿಯೇ ಈರುಳ್ಳಿ ಪೂರೈಸಲು ಮುಂದಾಗಿದೆ.

ಹಾಗಾದರೆ ಸದ್ಯಕ್ಕೆ ಬೆಲೆ ಇಳಿಯುತ್ತದೆಯಾ? ತಜ್ಞರ ಪ್ರಕಾರ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಉತ್ತುಂಗಕ್ಕೇರುವ ಸಾಧ್ಯತೆಯಿದೆ ಅಂತ ಹೇಳಲಾಗ್ತಿದೆ. ಮುಂಬರುವ ಸೆಪ್ಟೆಂಬರ್ ತಿಂಗಳ ಹವಾಮಾನ ಹಾಗೂ ಮುಂಗಾರು ಫಸಲಿನ ಗಾತ್ರ ಮತ್ತು ಗುಣಮಟ್ಟದ ಮೇಲೆಯೇ ಈರುಳ್ಳಿಯ ಮುಂದಿನ ಬೆಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಅಂತ ತಿಳಿದುಬಂದಿದೆ.

About The Author