Political News: ಮೈಕ್ರೋ ಫೈನಾಾನ್ಸ್ ಹಾವಳಿಯಿಂದ ಹಲವರು ಜೀವ ಕಳೆದುಕೊಂಡಿದ್ದಲ್ಲದೇ, ಮನೆ, ಚಿನ್ನಾಭರಣವೆಲ್ಲ ಅಡವಿಟ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಮಾಧ್ಯಮಗಳು ವರದಿಯಾದ ಬಳಿಕ, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮೈಕ್ರೋ ಫೈನಾನ್ಸ್ ಗಳ ನಿಯಮ ಬಾಹಿರ ಸಾಲ ವಸೂಲಿಗೆ ಅಂಕುಶ ಬಿದ್ದಿದೆ. ಸಾರ್ವಜನಿಕರ ಹಿತಕ್ಕಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ. ಬಲವಂತದ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು. ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ತೀರ್ಮಾನ ಮಾಡಲಾಗಿದ್ದು, ಸಾಲ ಪಡೆದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೊಂದವರ ಪರ ನಮ್ಮ ಸರ್ಕಾರ ನಿಂತಿದೆ ಎಂದು ಸಿಎಂ ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುವವರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಲಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಆದಷ್ಟು ಬೇಗನೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಹೊಸ ಕಾನೂನು ರಚನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.