Dharwad news: ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಗೆ ಇಡೀ ರಾಜ್ಯವೇ ಮಮ್ಮಲ ಮರುಗುತ್ತಿದೆ. ಹಂತಕ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಗಳು, ಒತ್ತಾಯಗಳು ಕೇಳಿ ಬರುತ್ತಿವೆ. ಫಯಾಜ್‌ನಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಮುಸ್ಲಿಂ ಸಮುದಾಯ ಕೂಡ ಆಗ್ರಹಪಡಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಧಾರವಾಡ ಅಂಜುಮನ್ ಸಂಸ್ಥೆ ಇಂದು ಧಾರವಾಡದಲ್ಲಿ ಅರ್ಧ ದಿನ ವ್ಯಾಪಾರ ವಹಿವಾಟು ಬಂದ್ ಮಾಡಿಸಿ, ದೊಡ್ಡಮಟ್ಟದಲ್ಲೇ ಹೋರಾಟ ನಡೆಸಿದೆ.
ಅಂಜುಮನ್ ಸಂಸ್ಥೆ ಕರೆ ಕೊಟ್ಟಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಮಾಡಿದ ಅಂಗಡಿ, ಮುಂಗಟ್ಟುಗಳ ಮುಂದೆ ನೇಹಾ ಫೋಟೋ ಹಾಕಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ. ಈ ಹಂತದ ಬಂದ್ ಒಂದೆಡೆಯಾದರೆ ಇನ್ನೊಂದೆಡೆ ಧಾರವಾಡ ಮುಸ್ಲಿಂ ಸಮುದಾಯದವರು ಹಾಗೂ ಅಂಜುಮನ್ ಸಂಸ್ಥೆ ಸದಸ್ಯರು ದೊಡ್ಡ ಮಟ್ಟದಲ್ಲೇ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹೆಣ್ಣು ನಮ್ಮ ಅಕ್ಕ, ಹೆಣ್ಣು ನಮ್ಮ ತಾಯಿ, ಹೆಣ್ಣು ನಮ್ಮ ತಂಗಿ, ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು. ಹಂತಕ ಫಯಾಜ್‌ನಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಫಲಕಗಳನ್ನು ಹಿಡಿದು ಸಾಗಿದ ಮುಸ್ಲಿಂ ಬಾಂಧವರು, ಧಾರವಾಡದ ಅಂಜುಮನ್ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಹಂತಕ ಫಯಾಜ್‌ನ ಪರ ಯಾವ ಮುಸ್ಲಿಂ ವಕೀಲರೂ ವಕಾಲತ್ತು ವಹಿಸಬಾರದು ಎಂದು ಒತ್ತಾಯಿಸಿದ ಅವರು, ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹಿರೇಮಠ ಅವರ ಹೆಸರಿಡುವುದಾಗಿ ಅಂಜುಮನ್ ಸಂಸ್ಥೆ ಸದಸ್ಯರು ಇದೇ ಸಂದರ್ಭದಲ್ಲಿ ತಿಳಿಸಿದರು. ಒಟ್ಟಾರೆ ಸೋಮವಾರ ಅಂಜುಮನ್ ಸಂಸ್ಥೆ ಕರೆ ನೀಡಿದ್ದ ಅರ್ಧ ದಿನದ ಅಂಗಡಿ, ಮುಂಗಟ್ಟು ಬಂದ್‌ಗೆ ಬೆಂಬಲ ವ್ಯಕ್ತವಾಯಿತಲ್ಲದೇ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಪಾಲ್ಗೊಂಡು ನೇಹಾ ಕುಟುಂಬದ ಬೆನ್ನಿಗೆ ನಿಂತಿದ್ದಂತೂ ಸುಳ್ಳಲ್ಲ.
ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!
ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್ನಿಂದಲೇ ಆರೋಪ
ನೇಹಾ ಹತ್ಯೆ ಖಂಡಿಸಿ ಬಿಜೆಪಿ Protest: ಸಿದ್ರಾಮುಲ್ಲಾಖಾನ್‌ಗೆ ಧಿಕ್ಕಾರ ಅಂದ ಪ್ರತಿಭಟನಾಕಾರರು..