Pakistan: ಪಾಕಿಸ್ತಾನದಲ್ಲಿ ಅಪ್ರಾಪ್ತೆಯೊಬ್ಬಳು, ತಾನನು ಪ್ರೀತಿಸಿದ ಯುವಕನೊಂದಿಗೆ ತನ್ನ ಮದುವೆ ಮಾಡಿಕೊಡಲು ಒಪ್ಪದ ತಂದೆ ತಾಯಿ ಸೇರಿ 13 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾಳೆ. ಊಟದಲ್ಲಿ ವಿಷ ಹಾಕಿ, ಎಲ್ಲರಿಗೂ ನೀಡಿದ್ದು, ವಿಷಪೂರಿತ ಊಟ ಮಾಡಿ, ಕುಟುಂಬಸ್ಥರೆಲ್ಲ ಸಾವನ್ನಪ್ಪಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಯುವತಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಲು, ತಂದೆ ತಾಯಿಗೆ ಹಲವು ರೀತಿಯಲ್ಲಿ ಒಪ್ಪಿಸುವ ಪ್ರಯತ್ನ ಮಾಡಿದ್ದಾಳೆ. ಕೊನೆಗೆ ತನ್ನ ಪ್ರೀತಿಯನ್ನು ಪಡೆಯಲು, ಮನೆಯವರನ್‌ನೇ ಬಲಿ ಪಡೆಯಲು ನಿರ್ಧರಿಸಿದ್ದಾಳೆ.
ಚಪಾತಿ ಮಾಡುವ ಹಿಟ್ಟಿನಲ್ಲಿ ವಿಷ ಬೆರೆಸಿ, ಅದರಿಂದ ಚಪಾತಿ ತಯಾರಿಸಿ, ಮನೆಯವರಿಗೆಲ್ಲ ತಿನ್ನಿಸಿದ್ದಾಳೆ. ಊಟ ಮಾಡಿದ ಮನೆಮಂದಿ, ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಎಲ್ಲರಿಗೂ ಚಿಕಿತ್ಸೆ ಕೊಡಿಸುವ ಪ್ರಯತ್ನ ಪಟ್ಟರೂ, ಯಾರೂ ಬದುಕುಳಿದಿಲ್ಲ. ಬಳಿಕ ಒಂದೇ ಕುಟುಂಬದ 13 ಮಂದಿ ಈ ರೀತಿ ಸಾವನ್ನಪ್ಪಲು ವಿಷಪೂರಿತ ಆಹಾರ ಸೇವನೆಯೇ ಕಾರಣವೆಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿ, ಯುವತಿಯ ವಿಚಾರಣೆ ನಡೆಸಿದ್ದಾರೆ. ಆಗ ಆಕೆ ಅದೇ ಊರಿನ ಯುವಕನನ್ನು ಪ್ರೀತಿಸುತ್ತಿರುವುದಾಗಿಯೂ, ಆತನನ್ನು ವಿವಾಹವಾಗಬೇಕು ಎಂದು ಮನೆಯವರಲ್ಲಿ ಕೇಳಿಕೊಂಡಿದ್ದು, ಮತ್ತು ಆಕೆಯ ಕೋರಿಕೆಯನ್ನು ಮನೆಜನ ಧಿಕ್ಕರಿಸಿದ್ದು, ಆ ದ್ವೇಷಕ್ಕೆ ಪ್ರಿಯಕರನ ಜೊತೆ ಸೇರಿ, ಮನೆಮಂದಿಗೆ ಊಟದಲ್ಲಿ ವಿಷ ಬೆರೆಸಿ ಕೊಟ್ಟಿದ್ದು, ಎಲ್ಲ ಸತ್ಯವೂ ಬಯಲಾಗಿದೆ. ಸದ್ಯ ಈ ಜೋಡಿ ಪೊಲೀಸ ವಶದಲ್ಲಿದೆ.