Devotional:
ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ, ಪರುಶುರಾಮ ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು.
ಜಮದಗ್ನಿ ಎಂಬ ಋಷಿಗಳು ತಮ್ಮ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರಿಗೆ ಕೊನೆಯ ಮಗನಾಗಿ ಪರಶುರಾಮ ಜನಿಸುತ್ತಾನೆ ಇವನು ಹುಟ್ಟಿನಿಂದಾಗಲೆ ಮಹಾ ವೀರನಾಗಿರುತ್ತಾನೆ. ಒಮ್ಮೆ ಪರಶುರಾಮನ ತಾಯಿ ರೇಣುಕಾ ನೀರು ತರಲು ನದಿಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಕಾಣಿಸುತ್ತಾನೆ. ನನಗೂ ಅಂತಹ ಅವಕಾಶ ಬಂದರೆ ಚನ್ನಾಗಿರುತ್ತದೆ ಎಂದು ಅವಳು ಅಂದು ಕೊಳ್ಳುತ್ತಾಳೆ ,ಆಕೆಯ ಪತಿಯಾದ ಜಮದಗ್ನಿಯು ತಮ್ಮ ಮಂತ್ರ ಶಕ್ತಿಯಿಂದ ಈ ವಿಷಯವನ್ನರಿತುಕೊಂಡು. ಪತ್ನಿಮೇಲೆ ಕೋಪಗೊಂಡು, ತಮ್ಮ ಮಕ್ಕಳಿಗೆ ನಿಮ್ಮ ತಾಯಿಯನ್ನು ಕೊಲ್ಲಿ ಎಂದು ಆದೇಶಿಸುತ್ತಾರೆ. ಮಾತೃ ಹತ್ಯೆ ಮಾಡುವುದೇ.. ? ಛೆ! ಅಂತಹ ಪಾಪ ಮಾಡಲಾರೆ ಎಂದು ಎಲ್ಲ ಮಕ್ಕಳೂ ಹೇಳುತ್ತಾರೆ. ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂಪ್ರೀತನಾಗಿ ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.
ರಾಜ ಕಾರ್ತವೀರ್ಯಾರ್ಜುನ ಅತ್ಯಂತ ಪರಾಕ್ರಮಿ. ಒಮ್ಮೆ ಅವನು ತನ್ನ ಪರಿವಾರದೊಂದಿಗೆ ಜಮದಗ್ನಿ ಆಶ್ರಮಕ್ಕೆ ಬರುತ್ತಾನೆ. ಜಮದಗ್ನಿ ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ. ಜಮದಗ್ನಿ ಬಳಿ ಒಂದು ಶಕ್ತಿಯುತವಾದ ಕಾಮಧೇನು ಇತ್ತು, ಆ ಕಾಮಧೇನು ಇದ್ದರೆ ಎಷ್ಟು ಜನರನ್ನಾದರೂ ಸತ್ಕರಿಸಬಹುದು ಎಂದು ಋಷಿಗೆ ಗೊತ್ತು. ಆದುದರಿಂದ ಅವರಿಗೆ ರಾಜನ ಪರಿವಾರ ನೋಡಿ ಗಾಬರಿಯಾಗಲಿಲ್ಲ. ಒಂದೇ ಒಂದು ಕಾಮಧೇನುವಿಗೆ ಇಷ್ಟು ಸಾಮರ್ಥ್ಯವೇ..? ಎಂದು ಕಾರ್ತವೀರ್ಯಾರ್ಜುನನಿಗೆ ಜಮದಗ್ನಿ ಬಗ್ಗೆ ಅಸೂಯೆ ಉಂಟಾಯಿತು. ರಾಜನಾದ ನನ್ನ ಬಳಿ ಕಾಮಧೇನು ಇರಬೇಕು ಎಂದು ಅವನು ಬಯಸಿದ, ಆಗ ದೊರೆ ಕಾಮಧೇನುವನ್ನು ತಕ್ಷಣ ಅಪಹರಿಸಿ, ಬಲವಂತದಿಂದ ಕಾಮಧೇನುವನ್ನು ಅವರ ಜೊತೆ ಕರೆದುಕೊಂಡು ಹೋಗುತ್ತಿರುವಾಗ ಅದು ಕಣ್ಣೀರಿಡುತ್ತದೆ. ನಂತರ ಈ ವಿಷಯ ಪರಶುರಾಮನಿಗೆ ತಿಳಿಯುತ್ತದೆ ,ಕಾಮಧೇನುವನ್ನು ರಕ್ಷಿಸುವ ಸಲುವಾಗಿ ಪರಶುರಾಮ ತನ್ನ ಕೊಡಲಿ, ಬಿಲ್ಲು ಬಾಣ ಹಿಡಿದು ರಾಜನ ಬೆನ್ನಟ್ಟುತ್ತಾನೆ ನಂತರ ರಾಜ ಮತ್ತು ಪರಶುರಾಮನ ಮಧ್ಯೆ ಭೀಕರ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ರಾಜ ಸಾವನ್ನಪುತ್ತಾನೆ, ಅನಂತರ ಪರಶುರಾಮ ಕಾಮಧೇನುವನ್ನು ಆಶ್ರಮಕ್ಕೆ ಕರೆದುಕೊಂಡು ಬರುತ್ತಾನೆ. ಹಾಗ ಪರಶುರಾಮನ ತಂದೆ ಜಮದಗ್ನಿಯು, ನೀನು ಅನುಸರಿಸುವ ಮಾರ್ಗ ಸರಿಯಿಲ್ಲ ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು. ಈ ನಿನ್ನ ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು ಎನ್ನುತ್ತಾರೆ ಜಮದಗ್ನಿ ತಂದೆಯ ಸೂಚನೆಯಂತೆ ಪರಶುರಾಮ ತೀರ್ಥಯಾತ್ರೆಗೆ ತೆರಳುತ್ತಾನೆ.
ಕಾರ್ತವೀರ್ಯಾರ್ಜುನನ ಮಕ್ಕಳು ನಮ್ಮ ತಂದೆಯನ್ನು ಕೊಲ್ಲಿದ ಪರಶುರಾಮನನ್ನು ಸುಮನ್ನೇ ಬಿಡುವುದಿಲ್ಲ ಎಂದು ಶಪಥಮಾಡಿ, ಎಲ್ಲರು ಜಮದಗ್ನಿ ಆಶ್ರಮಕ್ಕೆ ಬಂದು ಋಷಿಯನ್ನು ಕೊಂದು ಅವರ ಶಿರವನ್ನು ತೆಗೆದುಕೊಂಡು ಹೋಗುತ್ತಾರೆ ,ನಂತರ ಪರಶುರಾಮನಿಗೆ ಆ ರಾಜನ ಮಕ್ಕಳು ತನ್ನ ತಂದೆಯನ್ನು ಕೊಂದಿರುವುದು ತಿಳಿಯುತ್ತದೆ. ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ ಕ್ಷತ್ರಿಯರನ್ನೆಲ್ಲಾ ಕೊಲ್ಲುವೆ ಎಂದು ವೀರಾವೇಶದಿಂದ ಹೊರಡುತ್ತಾನೆ. ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಸಂಚರಿಸಿ ಕ್ಷತ್ರಿಯರನ್ನು ಸಂಹರಿಸಿ ಬಿಡುತ್ತಾನೆ, ನಂತರ ಪರಶುರಾಮನು ತಂದೆಯ ಶಿರ ತಂದು ಅವರ ದೇಹಕ್ಕೆ ಜೋಡಿಸುತ್ತಾನೆ ಇದರಿಂದ ಜಮದಗ್ನಿಗೆ ಪುನಃ ಜೀವ ಬರುತ್ತದೆ.
ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶ ಪಡಿಸುವುದು. ವಿಷ್ಣುವು ಪರಶುರಾಮನ ಅವತಾರದಲ್ಲಿ 21 ಬಾರಿ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಏಕೆಂದರೆ ಅವರೆಲ್ಲ ಬ್ರಾಹ್ಮಣ ಸಂಸ್ಕೃತಿಗೆ ಅವಿಧೇಯರಾಗಿರುತ್ತಾರೆ. ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗಿಕೊಳ್ಳುತ್ತಾನೆ ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.