ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ್ದ, ಮಾಜಿ ಕಾಂಗ್ರೆಸ್ಸಿಗ, ಎಡಪಂಥಿಯ ಮತ್ತು ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಇದೀಗ ಗೋಪೂಜೆ ಮಾಡುವ ಮೂಲಕ ಬಿಜೆಪಿ ಸೇರಿದ್ದಾರೆ. ಅಲ್ಲದೇ, ಮುಂಬರುವ ಗುಜರಾತ್ ಚುನಾವಣೆಗೆ ಭರದಿಂದ ಸಿದ್ಧತೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದ ಹಾರ್ದಿಕ್, ನನ್ನ ಕೆಲಸದ ಬಗ್ಗೆ ಕಾಂಗ್ರೆಸ್‌ನ ಕೆಲವರು ಚಕಾರ ಎತ್ತಿದ್ದರು. ಈ ಕಾರಣಕ್ಕಾಗಿ ನಾನು ಕಾಂಗ್ರೆಸ್ ತೊರೆದಿದ್ದೇನೆ ಎಂದಿದ್ದರು.
ಅಲ್ಲದೇ, ಕಾಂಗ್ರೆಸ್‌ನಲ್ಲಿ ತನಗೆ ಉತ್ತಮ ಅಧಿಕಾರ ಕೊಟ್ಟಿದ್ದರೂ ಕೂಡ, ಅದನ್ನ ನಿಭಾಯಿಸುವ ಹಕ್ಕು ನೀಡಿರಲಿಲ್ಲ. ನನ್ನ ಪ್ರತೀ ಕೆಲಸದ ಬಗ್ಗೆಯೂ ಚಕಾರ ಎತ್ತುತ್ತಿದ್ದರು. ಅದರ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಿದ್ದರು. ಅಲ್ಲಿ ನನ್ನ ಅನಿಸಿಕೆ ಹೇಳಲು ಮತ್ತು ಕಾಂಗ್ರೆಸ್ ಪರ ಕೆಲಸ ಮಾಡುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಕೂಡ ಹಾರ್ದಿಕ್ ಆರೋಪಿಸಿದ್ದರು.
ಹಾಗಾಗಿ ಬಿಜೆಪಿ ಸೇರಲು ನಿರ್ಧರಿಸಿದ್ದ ಹಾರ್ದಿಕ್ ಇಂದು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ಥಳೀಯ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಸೇರುವ ಮುನ್ನ ಹಾರ್ದಿಕ್ ಪಟೇಲ್ ದುರ್ಗಾ ಪೂಜೆ, ಸ್ವಾಮಿನಾರಾಯಣ ಮಂದಿರದಲ್ಲಿ ಪೂಜೆ ಮತ್ತು ಗೋಪೂಜೆ ಮಾಡಿದರು. ಅಲ್ಲದೇ ರಾಷ್ಟ್ರಹಿತ, ಪ್ರದೇಶಹಿತ, ಜನಹಿತ ಮತ್ತು ಸಮಾಜ ಹಿತದ ಭಾವನೆಯೊಂದಿಗೆ ಇಂದು ಹೊಸ ಅಧ್ಯಾಯದ ಆರಂಭ ಮಾಡುತ್ತಿದ್ದೇನೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟರ ಸೇವೆಯ ಗುಂಪಿನಲ್ಲಿ, ನಾನೋರ್ವ ಸಣ್ಣ ಸೈನಿಕನಾಗಿ ಕೆಲಸ ನಿರ್ವಹಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.