ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ನಸ್ತಾರ್ ಕಡಲತೀರದಲ್ಲಿ ಭಾನುವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಸಮುದ್ರಕ್ಕೆ ಇಳಿದಿದ್ದ ಇಬ್ಬರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ಮಹಮ್ಮದ್ ಅಪ್ರೋಜ್ (34) ಹಾಗೂ ರಿಜ್ವಾನ್ ಸಾಕಿರ್ (27) ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಖಾಸಗಿ ಗಾರ್ಮೆಂಟ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಏಳು ಜನರ ತಂಡದೊಂದಿಗೆ ಕಡಲತೀರಕ್ಕೆ ತೆರಳಿದ್ದ ಯುವಕರು ಸಮುದ್ರಕ್ಕೆ ಇಳಿದ ವೇಳೆ ಏಕಾಏಕಿ ಭಾರೀ ಅಲೆಗಳು ಅಪ್ಪಳಿಸಿವೆ. ಈ ವೇಳೆ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸ್ಥಳೀಯರಾದ ಸೌದ್ ಗವಾಯಿ ಹಾಗೂ ಸಾಜಪ್ ಸಾಹಸ ಮೆರೆದು ಉಳಿದ ಐವರು ಯುವಕರನ್ನು ರಕ್ಷಿಸಿದ್ದಾರೆ. ಆದರೆ ಇಬ್ಬರನ್ನು ಉಳಿಸಲು ಸಾಧ್ಯವಾಗಿಲ್ಲ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಮುದ್ರ ತೀರದಲ್ಲಿ ಎಚ್ಚರಿಕೆ ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.




