Political News: ದಕ್ಷಿಣ ಭಾರತದ ವ್ಯಕ್ತಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ?

Political News: ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕೇಸರಿ ಬ್ರಿಗೇಡ್‌ನಲ್ಲಿ ಇದೀಗ ರಾಷ್ಟ್ರಾಧ್ಯಕ್ಷರ ಬದಲಾವಣೆಯ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಹಾಲಿ ಅಧ್ಯಕ್ಷರಾಗಿರುವ ಜಿ.ಪಿ.ನಡ್ಡಾ ಅವರು ಇದೇ ತಿಂಗಳಲ್ಲಿ ಆ ಸ್ಥಾನದಿಂದ ನಿರ್ಗಮಿಸಬೇಕಿರುವ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆಯ ಚಟುವಟಿಕೆಗಳು ಇನ್ನಷ್ಟು ವೇಗ ಪಡೆದುಕೊಂಡಿವೆ.

ಈಗಾಗಲೇ ಬಹುತೇಕ ಅಧ್ಯಕ್ಷಗಿರಿಯನ್ನು ಪುರುಷರೇ ನಿಭಾಯಿಸಿದ್ದಾರೆ. ಆದರೆ ಇತ್ತೀಚಿನ ಆಯ್ಕೆಗಳಲ್ಲಿ ಅಚ್ಚರಿಯ ಹೆಸರುಗಳನ್ನು ಮುನ್ನೆಲೆಗೆ ತಂದು ಅವರಿಗೆ ಉನ್ನತ ಹುದ್ದೆಯ ಜವಾಬ್ದಾರಿಗಳನ್ನು ನೀಡಿ ದೇಶದಲ್ಲಿಯೇ ಬಿಜೆಪಿ ಗಮನ ಸೆಳೆದಿರುವ ಪಕ್ಷವಾಗಿದೆ. ಆದರೆ ಇದೆ ಮಾದರಿಯಲ್ಲಿ ಇದೀಗ ಪಕ್ಷದ ಸಾರಥ್ಯವನ್ನು ಮಹಿಳೆಯ ಕೈಯಲ್ಲಿ ನೀಡಲು ಪಕ್ಷದ ನಾಯಕತ್ವದಲ್ಲಿ ಮಹತ್ವದ ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ಬಿಜೆಪಿಗೆ ಅಭೂತಪೂರ್ವ ಬೆಂಬಲವನ್ನು ನೀಡಿರುವ ದೇಶದ ಮಹಿಳೆಯರಿಗೆ ಪಕ್ಷದ ಮೇಲೆ ಭರವಸೆ ಮೂಡುವಂತೆ ಮಾಡಲು ಈ ರೀತಿಯ ತೀರ್ಮಾನಕ್ಕೆ ಬಿಜೆಪಿಯ ನಾಯಕತ್ವ ಬಂದಿದೆ ಎನ್ನಲಾಗುತ್ತಿದೆ.

ಅಲ್ಲದೆ ಉತ್ತರ ಭಾರತದ ಬದಲಾಗಿ ದಕ್ಷಿಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್‌ ನಾಯಕರು ಈ ಪ್ರದೇಶದಲ್ಲಿನವರೇ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರಾಗಬೇಕೆಂಬ ನಿಲುವಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಇನ್ನೂ ಹಲವು ದಿನಗಳು ಬಾಕಿ ಇರುವಾಗ ಈಗಿನಿಂದಲೇ ಅನೇಕರು ಹೆಸರುಗಳು ರೇಸ್‌ನಲ್ಲಿ ಮುಂದೆ ಓಡುತ್ತಿವೆ. ಅಂದಹಾಗೆ ಅಧ್ಯಕ್ಷ ಸ್ಥಾನಕ್ಕೆ ಆಂಧ್ರಪ್ರದೇಶದ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಅಥವಾ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರ ಹೆಸರುಗಳು ಬಲವಾಗಿ ಕೇಳಿ ಬರುತ್ತಿವೆ. ಅಲ್ಲದೆ ಮಹಿಳಾ ವಲಯದಲ್ಲಿ ಆಯ್ಕೆಗೆ ಕೇಂದ್ರ ನಾಯಕತ್ವ ಮುಂದಾದರೆ, ಇಬ್ಹರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ದಕ್ಷಿಣಕ್ಕೆ ಬೂಸ್ಟ್‌ ನೀಡಲು ಬಿಜೆಪಿ ಪ್ಲಾನ್..!

ಇನ್ನೂ ಬಿಜೆಪಿ ನಾಯಕಿ ಹಾಗೂ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರ ರೇಸ್‌ನಲ್ಲಿದ್ದಾರೆ. ಪ್ರಸ್ತುತ ತಮಿಳುನಾಡಿನ ಕೊಯಮತ್ತೂರ ಕ್ಷೇತ್ರದ ಶಾಸಕಿಯಾಗಿರುವ ಇವರು, ಬಿಜೆಪಿಯ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೇಂದ್ರದಲ್ಲಿ ಉತ್ತಮ ಹಿಡಿತವನ್ನು ಹೊಂದಿರುವ ಇವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಪಕ್ಷದ ಪ್ರಮುಖ ಮಹಿಳಾ ನಾಯಕರಲ್ಲಿ ಒಬ್ಬರಾಗಿರುವ ವನತಿ ಶ್ರೀನಿವಾಸನ್‌ ಅವರು ತಮ್ಮ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಶ್ರಮಿಸಿದ್ದಾರೆ.

ಆಂಧ್ರಕ್ಕೆ ಒಲಿಯುತ್ತಾ ಕೇಸರಿ ಸಾರಥ್ಯ..?

ಇನ್ನೂ ದಕ್ಷಿಣ ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆಗೆ ದಕ್ಷಿಣ ಭಾರತದ ರಾಜ್ಯಕ್ಕೆ ಸೇರಿದ ಮಹಿಳಾ ನಾಯಕಿಯ ಕೈಗೆ ಬಿಜೆಪಿ ಸಾರಥ್ಯ ನೀಡಬಹುದು ಎನ್ನಲಾಗುತ್ತಿದೆ. ಈ ಮೊದಲು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಪುರಂದೇಶ್ವರಿ ಅವರು ಬಳಿಕ 2014 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪಕ್ಷದ ಸಂಘಟನೆಯಲ್ಲಿ ಉತ್ತಮ ಅನುಭವವನ್ನು ಹೊಂದಿರುವ ಇವರು, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಬಿಜೆಪಿಯ ಮುಖ್ಯಸ್ಥೆಯಾಗಿದ್ದಾರೆ. ಜನಸಾಮಾನ್ಯರೊಂದಿಗೆ ಒಳ್ಳೆಯ ಒಡನಾಟ ಹಾಗೂ ಬಿಜೆಪಿ ಕೇಂದ್ರ ನಾಯಕತ್ವದೊಂದಿಗೂ ನಿರಂತರ ಸಂಪರ್ಕವನ್ನು ಹೊಂದಿರುವ ಇವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ. ಅತ್ಯುತ್ತಮ ವಾಗ್ಮಿಯ ಕೌಶಲ್ಯ ಮತ್ತು ಐದು ಭಾಷೆಗಳಲ್ಲಿ ನಿರರ್ಗಳತೆಯಿಂದ ಮಾತನಾಡುವ ಇವರನ್ನು ದಕ್ಷಿಣ ಭಾರತದ ಸುಷ್ಮಾ ಸ್ವರಾಜ್ ಎಂತಲೂ ಗುರುತಿಸಲಾಗುತ್ತದೆ.

ಇನ್ನೂ ಮಹಿಳಾ ನಾಯಕಿಯರ ಪಟ್ಟಿ ಒಂದೆಡೆಯಾದರೆ ನೂತನ ಅಧ್ಯಕ್ಷರ ಹುದ್ದೆಯ ಸ್ಪರ್ಧೆಯಲ್ಲಿ ಆಂದ್ರಪ್ರದೇಶವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಜಿ ಕಿಶನ್‌ ರೆಡ್ಡಿಯವರ ಹೆಸರು ಮುಂಚೂಣಿಯಲ್ಲಿದೆ. ಅಂದಹಾಗೆ ಇದಕ್ಕೂ ಮೊದಲು ಈ ಪಟ್ಟಿಯಲ್ಲಿನ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿದ್ದರೆ, 55 ವರ್ಷದ ಧರ್ಮೇಂದ್ರ ಪ್ರಧಾನ್, 55 ವರ್ಷದ ಭೂಪೇಂದ್ರ ಯಾದವ್, ಮತ್ತು 61 ವರ್ಷದ ವಿನೋದ್ ತಾವ್ಡೆ ಇವರುಗಳಲ್ಲಿಯ ಒಬ್ಬರನ್ನು ಆಯ್ಕೆ ಮಾಡುವ ಚರ್ಚೆಗಳು ಪಕ್ಷದ ಹೈಕಮಾಂಡ್‌ನಲ್ಲಿ ನಡೆಯುತ್ತಿವೆ.

ಅಲ್ಲದೆ ಈ ವರ್ಷ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಗುಜರಾತ್‌ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ವಿಚಾರವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷವು ಅಳೆದು ತೂಗಿ ಲೆಕ್ಕಾಚಾರ ಹಾಕಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಇನ್ನೂ ಒಮ್ಮತದ ಮೂಲಕ ಅಂತಿಮವಾಗಿ ನಿರ್ಧಾರ ಕೈಗೊಳ್ಳಲು ಮುಂದಾದರೂ ಸಹ, ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಕೂಡ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಮಾರ್ಚ್‌ 21 ರಿಂದ 23ರ ವರೆಗೆ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್‌ ಮುಂದಾಗಿದೆ.

ಅಲ್ಲದೆ ಪ್ರಮುಖವಾಗಿ ಶಿಸ್ತಿಗೆ ಒತ್ತು ನೀಡುವ ಬಿಜೆಪಿಯು ತಮ್ಮ ಪಕ್ಷದ ಎಲ್ಲ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಗಳನ್ನು ಮಾರ್ಚ್‌ 14ರ ಒಳಗಾಗಿ ಪೂರ್ಣಗೊಳಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಹಲವಾರು ಚಟುವಟಿಕೆಗಳು ಚುರುಕುಗೊಂಡಿವೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 15 ಅಥವಾ 16ರಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆ ಇದೆ. ಇದಕ್ಕೆ ಹಾಲಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ.

11 ಪುರುಷ ಅಧ್ಯಕ್ಷರನ್ನು ಕಂಡ ಬಿಜೆಪಿ..

ಬಿಜೆಪಿ ಅತ್ಯುನ್ನತ ಸ್ಥಾನದಲ್ಲಿ ಇದುವರೆಗೂ 11 ಮಂದಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಬಿಜೆಪಿ ಪಕ್ಷ ಕಟ್ಟಿದ ಬಳಿಕ 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಇದಾದ ಬಳಿಕ 1986ರಲ್ಲಿ ಎಲ್‌.ಕೆ ಅಡ್ವಾಣಿ, 1991ರಲ್ಲಿ ಮುರುಳಿ ಮನೋಹರ್ ಜೋಷಿ ಬಳಿಕ ಕುಶಾಭೌ ಠಾಕ್ರೆ, ಬಂಗಾರು ಲಕ್ಷ್ಮಣ್, ಕೆ. ಜನಕೃಷ್ಣಮೂರ್ತಿ, ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ, ಜೆ.ಪಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆದರೆ 12 ನೇ ಅಧ್ಯಕ್ಷರಾಗಿ ಮಹಿಳೆಗೆ ಕೇಸರಿ ನಾಯಕತ್ವ ಮಣೆ ಹಾಕುತ್ತಾ ಎನ್ನುವುದು ಸದ್ಯ ಕುತೂಹಲದ ಪ್ರಶ್ನೆಯಾಗಿದೆ

About The Author