Mandya News: ಪ್ರೀತಿ, ಮದುವೆ, ಪತಿ- ಪತ್ನಿ ಸಂಬಂಧ ಅನ್ನೋದು ಒಂದು ಪವಿತ್ರವಾದ ಸಂಬಂಧ. ಆ ಪ್ರೀತಿಗೆ ಎಲ್ಲರನ್ನೂ ಗೆಲ್ಲುವ ಶಕ್ತಿ ಇರುತ್ತದೆ. ಪ್ರೀತಿಸಿ ಮದುವೆಯಾಗಿ ಖುಷಿ ಖುಷಿಯಾಗಿ ಸಂಸಾರ ಮಾಡುವವರು ಪ್ರಪಂಚದಲ್ಲಿ ತುಂಬಾನೇ ವಿರಳವಾಗಿ ಕಾಣ ಸಿಗುತ್ತಾರೆ. ಯಾಕಂದ್ರೆ ಪ್ರೀತಿಸಿ ಮದುವೆಯಾದ ಎಷ್ಟೋ ಜನ ಕೆಲ ವರ್ಷಗಳಲ್ಲೇ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಕೆಲವರು ಪ್ರೀತಿ ಮಾಡಿ, ಮದುವೆಯಾಗದೇ ಬೇರೆ ಬೇರೆಯಾಗಿದ್ದಾರೆ. ಇನ್ನು ಕೆಲವರು ಪ್ರೀತಿಸಿ ಮೋಸ ಹೋಗಿದ್ದಾರೆ. ಮತ್ತೆ ಕೆಲವರು ಪ್ರೀತಿಸಿ, ಮದುವೆಯಾಗಿ, ಜೀವನ ಸಂಗಾತಿಯನ್ನೇ ಕಳೆದುಕೊಂಡಿದ್ದಾರೆ. ಅಂಥದ್ದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದ್ದು, ಮೂರು ದಿನಗಳ ಹಿಂದೆ ಪ್ರೀತಿಸಿ ಮದುಯಾಗಿದ್ದ ಯುವಕ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಅವರ 28 ವರ್ಷದ ಮಗ ಶಶಾಂಕ್ ಸಾವನ್ನಪ್ಪಿದ ದುರ್ದೈವಿ. ಈತ ಬೆಂಗಳೂರಿನ ಖಾಸಗಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಅದೇ ಕಂಪನಿಯಲ್ಲಿ ಜಾರ್ಖಂಡ ಮೂಲಕ ಯುವತಿಯಾದ ಅಷ್ಣಾ ಕೂಡ ಕೆಲಸ ಮಾಡುತ್ತಿದ್ದಳು. ಇವರಿಬ್ಬರು ಮೊದಲು ಉತ್ತಮ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸಿದರು.
ಕಳೆದ 1 ವರ್ಷದಿಂದ ಪ್ರೀತಿ ಮಾಡಿ, ಕೆಲ ದಿನಗಳ ಹಿಂದಷ್ಟೇ ಎರಡೂ ಮನೆಯವರಿಗೆ ವಿಷಯ ತಿಳಿಸಿ, ಮನೆಯವರನ್ನು ಮದುವೆಗೆ ಒಪ್ಪಿಸಿದ್ದರು. ಕಳೆದ ಭಾನುವಾರವಷ್ಟೇ ಮೈಸೂರಿನ ರೆಸಾರ್ಟ್ ಒಂದರಲ್ಲಿ ಶಶಾಂಕ್ ಮತ್ತು ಅಷ್ಣಾ ಮದುವೆಯಾಗಿದ್ದಾರೆ. ಮದುವೆ ಕಾರ್ಯಕ್ರಮವೆಲ್ಲ ಮುಗಿಸಿ, ಕುಟುಂಬದೊಂದಿಗೆ ಶಶಾಂಕ್ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಇಂದು ಶಶಾಂಕ್‌ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ, ಶಶಾಂಕ್ ಸಾವನ್ನಪ್ಪಿದ್ದಾನೆ. ಮದುವೆಗೂ ಕೆಲ ದಿನಗಳ ಮುಂಚೆ ಶಶಾಂಕ್‌ಗೆ ಜ್ವರ ಬಂದಿತ್ತು. ಈ ವಿಷಯವನ್ನು ಆತ ತನ್ನ ಸ್ನೇಹಿತರಿಗಷ್ಟೇ ತಿಳಿಸಿದ್ದ. ಆಗಲೇ ಸರಿಯಾದ ಚಿಕಿತ್ಸೆ ಪಡೆದಿದ್ದರೆ, ಶಶಾಂಕ್ ಉಳಿಯುತ್ತಿದ್ದನೇನೋ.