Political News: ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ, ಕೆಜೆಪಿ ಪಕ್ಷದವರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ದೆಹಲಿ ಪೊಲೀಸರು ಅಭಿಜೀತ್ ಸೇರಿ ಮೂವರನ್ನು ವಿಮಾನದಲ್ಲಿ ಮತ್ತು ಧ್ರುವ್ ರಾಠಿಯನ್ನು ಅವರ ಮನೆಯಿಂದಲೇ ಬಂಧಿಸಿ, ಕರೆದೊಯ್ದಿದ್ದಾರೆ. ಅಲ್ಲದೇ ದೆಹಲಿಯಲ್ಲಿ 30 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಡಾ.ಹೆಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಕ್ರಮಗಳನ್ನು ಪ್ರಶ್ನಿಸಿ ದೆಹಲಿಯಲ್ಲಿ ನಡೆಯುತ್ತಿರುವ ಯುವಕರ ಪ್ರತಿಭಟನೆಯನ್ನು ಹತ್ತಿಕ್ಕಲು ಅವರನ್ನು ಬಂಧಿಸಿರುವ ಬಿಜೆಪಿ ಸರ್ಕಾರದ ನಡವಳಿಕೆಯು ಅತ್ಯಂತ ಅಕ್ಷಮ್ಯ ಮತ್ತು ಯಾವುದೇ ಪ್ರಜಾಪ್ರಭುತ್ವ ಸರ್ಕಾರ ಮಾಡಬಹುದಾದ ಅಪರಾಧದ ಪರಮಾವಧಿ.
ಯುವಕರ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿಯಲ್ಲಿ ಸುಮಾರು 30000 ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಿದೆ ಎಙದರೆ ಬಿಜೆಪಿಗರು ಎಂತಹ ಹೀನಾಯ ಮನಸ್ಥಿತಿಗೆ ತಲುಪಿದ್ದಾರೆ ಎಂಬುದನ್ನು ನೀವೇ ಅರ್ಥೈಸಿಕೊಳ್ಳಿ ಎಂದು ಮಹದೇವಪ್ಪ ಹೇಳಿದ್ದಾರೆ
ಜನಾಭಿಪ್ರಾಯವನ್ನು ಅರ್ಥೈಸಿಕೊಳ್ಳದೇ, ಜನರ ಕೂಗಿಗೆ ಕಿವಿಯಾಗದೇ, ಕಣ್ಣಿದ್ದೂ ಕುರುಡಾಗುವ, ತನ್ನೆಲ್ಲ ಇಂದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುವ ಯಾವುದೇ ಸರ್ಕಾರವಾಗಲಿ, ಯಾವುದೇ ಪ್ರಭುತ್ವವಾಗಲಿ, ಅಥವಾ ಯಾವುದೇ ಸರ್ವಾಧಿಕಾರಿಯ ಅಂತ್ಯ ಅತ್ಯಂತ ದಾರುಣವಾಗಿರುತ್ತದೆ ಎಂಬುದನ್ನು ಇತಿಹಾಸ ನಮಗೆ ತೋರಿಸಿಕೊಟ್ಟಿದೆ.
ಹೀಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಮಗೆ ಸಿಕ್ಕಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಕಳೆದುಕೊಂಡರೆ, ಪ್ರಜಾಪ್ರಭುತ್ವದ ಧ್ವನಿಯ ಪರವಾಗಿ ನಿಲ್ಲದೇ ಹೋದರೆ, ದೇಶದ ಆಡಳಿತ ವ್ಯವಸ್ಥೆ ಕತ್ತಲಲ್ಲಿ ಮುಳುಗಲಿದೆ ಎಂಬುದನ್ನು ಎಲ್ಲರೂ ನೆನಪಿಡೋಣ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.




