ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬೇಸರ

Political News: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳಿಲ್ಲ. ಸರಿಯಾದ ಕೊಠಡಿ, ನೀರು, ಬೆಡ್ ಯಾವುದೂ ಸರಿಯಾಗಿಲ್ಲವೆಂದು ಆರೋಪ ಕೇಳಿಬಂದಿದೆ.

ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಬಡಮಕ್ಕಳು ಓದುವ ಹಾಸ್ಟೆಲ್’ಗಳ ದುಸ್ಥಿತಿ ನಾಚಿಕೆಗೇಡು. ಅನಾಗರಿಕತೆಯ ಪರಮಾವಧಿ. ಆಡಳಿತ ವ್ಯವಸ್ಥೆ ತಲೆ ತಗ್ಗಿಸಬೇಕಾದ ಸಂಗತಿ. ಕಸಾಯಿಖಾನೆಗಳಿಗಿಂತ ಕಡೆಯಾಗಿರುವ ಇಂತಹ ಜಾಗದಲ್ಲಿ ಮಕ್ಕಳು ಗುಣಾತ್ಮಕ ವಿದ್ಯಾಭ್ಯಾಸ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

2026-27ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ₹42,632 ಕೋಟಿ ಅನುದಾನ ಮೀಸಲಿಡಲಾಗಿದೆ. ಇಷ್ಟು ಹಣ ಕಾಗದದ ಮೇಲಷ್ಟೇ ಮೀಸಲು ಇದೆಯೋ? ಅಥವಾ ಆ ಹಣ ಭ್ರಷ್ಟರ ಕಿಸೆಗಳ ಪಾಲಾಗಿದೆಯೋ? ಸರಕಾರವೇ ಹೇಳಬೇಕು.

ತಂದೆತಾಯಿಯನ್ನು ಗ್ಯಾರಂಟಿಗಳ ಆಮಿಷದಲ್ಲಿ ಮುಳುಗಿಸಿ ಅವರ ಮಕ್ಕಳ ಭವಿಷ್ಯವನ್ನು ಸರ್ವನಾಶ ಮಾಡುತ್ತಿರುವ ಈ ಕೆಟ್ಟ ವ್ಯವಸ್ಥೆ ಆತಂಕಕಾರಿ. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಗ್ಯಾರಂಟಿ ಎಂದು ಜಾಗಟೆ ಹೊಡೆಯುತ್ತಿರುವ ಕಾಂಗ್ರೆಸ್ ಸರಕಾರದ ದೆಸೆಯಿಂದ ಸಮೃದ್ಧ ಕರ್ನಾಟಕ ತನ್ನ ಹೆಮ್ಮೆ, ಹಿರಿಮೆ ಗರಿಮೆಗಳನ್ನು ಕಳೆದುಕೊಂಡು ‘ಜಂಗಲ್ ರಾಜ್ಯ’ವಾಗಿ ಬದಲಾಗುತ್ತಿದೆ! ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ರೀಲ್ ಸರಕಾರದ ಮುಖಕ್ಕೆ ರಾಚುವಂತಿದೆ ಈ ರಿಯಾಲಿಟಿ ಚೆಕ್!

•ಹಾಸ್ಟೆಲ್ ಕೊಠಡಿಗಳಲ್ಲಿ ಕುರಿಗಳಂತೆ ಮಕ್ಕಳನ್ನು ತುಂಬಲಾಗಿದೆ!

•ಶೌಚಾಲಯ, ಸ್ನಾನದ ಗೃಹಗಳು ದುರ್ನಾತದಿಂದ ನಾರುತ್ತಿವೆ!

•ಕಳಪೆ ಆಹಾರ; ಅನ್ನದಲ್ಲಿ ಕಲ್ಲು, ಕೊಳೆತ ತರಕಾರಿ!

•ಜೈಲುಗಳಿಗಿಂತ ಕೆಟ್ಟ ಸ್ಥಿತಿಯಲ್ಲಿರುವ ಹಾಸ್ಟೆಲ್ ಕೋಣೆಗಳು!

•ಸ್ವಚ್ಛತೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮಕ್ಕಳು!

“ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಅಡಿಪಾಯ. ಜ್ಞಾನವೇ ಎಲ್ಲದರ ತಳಹದಿ” ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆದರೆ ಅವರ ಹೆಸರಿನ ಹಾಸ್ಟೆಲ್’ಗಳ ದಯನೀಯ ಸ್ಥಿತಿ ಕರ್ನಾಟಕಕ್ಕೆ ಕಳಂಕ. ಸಮಾಜ ಕಲ್ಯಾಣ ಸಚಿವರು ಹಾಸ್ಟೆಲ್’ಗಳಲ್ಲಿ ವಾಸ್ತವ್ಯ ಹೂಡಬೇಕು, ಮಕ್ಕಳೊಂದಿಗೆ ಊಟ ಮಾಡಬೇಕು. ಅವರ ಉತ್ತಮ ಶಿಕ್ಷಣಕ್ಕಾಗಿ ಕಠಿಣ ಕ್ರಮಗಳನ್ನು ವಹಿಸದ ಹೊರತು ಸುಧಾರಣೆ ಸಾಧ್ಯವಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

About The Author