Political News: ದೇಶದಲ್ಲಿನ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂದುಕೊಂಡಂತೆ ವಕ್ಫ್ ತಿದ್ದುಪಡಿ ಮಸೂದೆಯ ಗೆಲುವಿನ ಹುರುಪಿನಲ್ಲಿರುವ ಬಿಜೆಪಿ ಇದೀಗ ಮತ್ತೊಂದು ಅಭಿಯಾನಕ್ಕೆ ಮುಂದಾಗಿದೆ. ದೇಶಾದ್ಯಂತ ಏಪ್ರಿಲ್ 20 ರಿಂದ 15 ದಿನಗಳ ಕಾಲ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕರೆ ನೀಡಿದೆ.
ಇನ್ನೂ ಈ ಕುರಿತು ದೆಹಲಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಾವು ಮುಖ್ಯವಾಗಿ ಮುಸ್ಲಿಂ ಸಮುದಾಯದ ಬಡ ಮಹಿಳೆಯರು ಹಾಗೂ ಸಮಾಜ ಬಾಂಧವರ ಕಲ್ಯಾಣಕ್ಕಾಗಿ ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದೇವೆ. ಇದರಿಂದ ಸಾಕಷ್ಟು ಮುಸ್ಲಿಂ ಜನರಿಗೆ ಅನುಕೂಲವಾಗುತ್ತದೆ. ಇಷ್ಟು ದಿನ ಕೆಲವೇ ಕೆಲವು ಪ್ರಭಾವಿಗಳ ಕಪಿ ಮುಷ್ಟಿಯಲ್ಲಿದ್ದ ಭೂಮಿಯು ಇನ್ನು ಮುಂದೆ ಎಲ್ಲರ ಬಳಕೆಗೆ ಅನುಕೂಲವಾಗಲಿದೆ. ಈ ವಕ್ಫ್ ತಿದ್ದುಪಡಿಯಿಂದ ಎಲ್ಲರಿಗೂ ತೊಂದರೆ ತಪ್ಪಲಿದೆ. ಇನ್ನೂ ವಕ್ಫ್ ಆಸ್ತಿಯು ಅಲ್ಪಸಂಖ್ಯಾತ ಸಮುದಾಯದ ಏಳ್ಗೆಗೆಗಾಗಿ ತರಲಾಗಿದೆ. ಎಲ್ಲ ಬಡ ಮುಸಲ್ಮಾನರಿಗೂ ಇದರ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಏಪ್ರಿಲ್ 20 ರಿಂದ ನಡೆಯಲಿರುವ ಈ 15 ದಿನಗಳ ವಿಶೇಷ ಜಾಗೃತಿ ಅಭಿಯಾನವು ವಕ್ಫ್ ಮಸೂದೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲಿದೆ. ಅಲ್ಲದೆ ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಮುದಾಯದ ಜನರು ಹಾಗೂ ಸಾರ್ವಜನಿಕರಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ವಿಪಕ್ಷಗಳು ಸುಳ್ಳು ಮಾಹಿತಿ ಹರಡುತ್ತಿವೆ ಎಂದು ನಡ್ಡಾ ಕಿಡಿ ಕಾರಿದ್ದಾರೆ. ಜನರಲ್ಲಿರುವ ಸಂದೇಗಳನ್ನು ಹೋಗಲಾಡಿಸಲು ಬಿಜೆಪಿ ವಿಶೇಷ ಜಾಗೃತಿ ಅಭಿಯಾನ ನಡೆಸಲಿದೆ ಎಂದು ಹೇಳಿದ್ದಾರೆ.
ವಕ್ಫ್ ಸುಧಾರ್ ಜನ ಜಾಗರಣ್..
ಇದೇ ವಿಚಾರಕ್ಕೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಕಿರಣ್ ರಿಜಿಜು, ಯಾವುದೇ ಕಾರಣಕ್ಕೂ ಮುಸ್ಲಿಂ ಧಾರ್ಮಿಕ ಸಂಪ್ರದಾಯಗಳಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯು ಹಸ್ತಕ್ಷೇಪ ಮಾಡುವುದಿಲ್ಲ. ಇದು ಮುಸ್ಲಿಂ ಸಮುದಾಯದ ಜನರ ಹಿತ ಕಾಪಾಡಲಿದೆ. ಇನ್ನೂ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರು ಇರುವುದರ ಹಿಂದೆ ಆಸ್ತಿಗಳ ನಿರ್ವಹಣೆಯ ಉದ್ದೇಶವಿದೆಯೇ ಹೊರತು ಧರ್ಮಕ್ಕೂ ಹಾಗೂ ಇದಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಏಪ್ರಿಲ್ 20 ರಿಂದ 15 ದಿನಗಳ ಕಾಲ ವಕ್ಫ್ ಸುಧಾರ್ ಜನ ಜಾಗರಣ್ ಎಂಬ ಹೆಸರಿನಲ್ಲಿ ದೇಶಾದ್ಯಂತ ಬೃಹತ್ ಅಭಿಯಾನ ನಡೆಸಲಿದ್ದೇವೆ ಎಂದು ಸಚಿವ ರಿಜಿಜು ಮಾಹಿತಿ ನೀಡಿದ್ದಾರೆ.
ಬಿಜೆಪಿ ಉರ್ದು ಪ್ರೇಮ..
ಇನ್ನೂ ಏನೇ ಮಾಡಿದರೂ ಅದರ ಹಿಂದೆ ಒಂದಿಲ್ಲೊಂದು ಮಹತ್ವದ ಲೆಕ್ಕಾಚಾರ ಹಾಕುವ ಬಿಜೆಪಿಯು ಈ ವಕ್ಫ್ ಜಾಗೃತಿ ಅಭಿಯಾನದಲ್ಲೂ ಅದನ್ನು ಮುಂದುವರೆಸಿದೆ. ಪ್ರಮುಖವಾಗಿ ಮುಸ್ಲಿಮ್ ಸಮುದಾಯದ ಓಲೈಕೆಗಾಗಿ ಕಾಯ್ದೆಯ ಕುರಿತ ಸಂದೇಹಗಳು, ಪ್ರಶ್ನೆಗಳು ಹಾಗೂ ಉತ್ತರಗಳನ್ನು ಪಡೆಯಲು ಉರ್ದು ಭಾಷೆಯಲ್ಲಿ ನೀಡಲಿದೆ. ಇದಕ್ಕಾಗಿ ಕರಪತ್ರ ಹಂಚುವ ಮೂಲಕ ಮುಸ್ಲಿಮರಿಗೆ ಸುಲಭವಾಗಿ ಹೆಚ್ಚಿನ ಮಾಹಿತಿ ಪಡೆಯುವಂತಾಗಬೇಕೆಂಬುದು ಬಿಜೆಪಿಯ ಯೋಚನೆಯಾಗಿದೆ.
ಏಪ್ರಿಲ್ 16ಕ್ಕೆ ವಕ್ಫ್ ಅರ್ಜಿ ವಿಚಾರಣೆ..
ಏತನ್ಮಧ್ಯೆ, ಈ ವಕ್ಫ್ ತಿದ್ದುಪಡಿ ಮಸೂದೆಯ ಸಿಂಧುತ್ವ ಪ್ರಶ್ನಿಸಿ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ 10 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇದೇ ಏಪ್ರಿಲ್ 16 ರಂದು ವಿಚಾರಣೆ ನಡೆಯಲಿದೆ. ಮುಖ್ಯ ನಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದಲ್ಲಿ ಆಪ್‌ನ ಅಮಾನತುಲ್ಲಾ ಖಾನ್, ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್ ಗಢಿ, ಆರ್‌ಜೆಡಿಯ ಮನೋಜ್ ಕುಮಾರ್ ಝಾ ಸೇರಿದಂತೆ ಹಲವರ ಅರ್ಜಿಗಳ ವಿಚಾರಣೆಯಾಗಲಿದೆ. ಅಲ್ಲದೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಹ ಗುರುವಾರ ಸುಪ್ರೀಂ ಕೋರ್ಟ್ ವಕ್ಫ್ ತಿದ್ದುಪಡಿ ಮಸೂದೆಯ ಕಾರ್ಯವಿಧಾನ ಪ್ರಶ್ನಿಸಿ ಅರ್ಜಿ ದಾಖಲಿಸಿದ್ದಾರೆ.