Political News: ಇದು ಮುಂಚಿನ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಯಾವಾಗಲೂ ರಾಷ್ಟ್ರದ್ರೋಹಿಗಳು ಮತ್ತು ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ಮುಂಬೈ ದಾಳಿಯನ್ನು ‘ಸ್ಯಾಫ್ರನ್ ಟೆರರ್’ ಎಂದು ಬಿಂಬಿಸಲು ಯತ್ನಿಸಿದ್ದು ಹಾಗೂ ಪಾಕಿಸ್ತಾನದ ಪರವಾಗಿ ನಿಂತು ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ ದುಷ್ಕೃತ್ಯಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಜೈಲಿನಲ್ಲಿರುವ ಉಮರ್ ಖಾಲಿದ್ ಪರವಾಗಿ ಮಾತನಾಡಿರುವುದು, ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೃತ್ಯವಾಗಿದೆ.

ಉಮರ್ ಖಾಲಿದ್ ಅವರೇ, “ನಾನು ಯಾವುದೇ ರೀತಿಯ ರಾಷ್ಟ್ರಕ್ಕೆ, ರಾಷ್ಟ್ರೀಯತೆಗೆ ನ್ಯಾಷನಲಿಸ್ಟ್ ಅಲ್ಲ” ಎಂದು ಹೇಳಿಕೊಂಡಿದ್ದಾರೆ. ಭಾರತ ವಿರೋಧಿ ಕಾರ್ಯಗಳನ್ನು ಮಾಡಿ ಇಂದು ಜೈಲಿನಲ್ಲಿರುವ ಇಂತಹ ದೇಶದ್ರೋಹಿಗಳಿಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ತಂದುಕೊಟ್ಟಂತಹ ಕಾಂಗ್ರೆಸ್ ಈಗ ಇಲ್ಲ. ಇವತ್ತು ಇರುವುದು ನಕಲಿ ಕಾಂಗ್ರೆಸ್, ನಕಲಿ ಗಾಂಧಿಗಳು. ಈ ದೇಶದ ಬಗ್ಗೆ ಅವರಿಗೆ ಯಾವುದೇ ಚಿಂತನೆಯಿಲ್ಲ. ದೇಶದ ಸಂಸ್ಕೃತಿಯ ಬಗ್ಗೆ ಯಾವುದೇ ರೀತಿಯ ಕಲ್ಪನೆಯೂ ಅವರಿಗಿಲ್ಲ. ಈ ದೇಶದ ಮೇಲಿನ ವ್ಯಾಮೋಹದ ಕೊರತೆಯಿಂದಾಗಿ ವಿದೇಶಿ ಶಕ್ತಿಗಳಿಗೆ ಮತ್ತು ನಮ್ಮ ದೇಶದ್ರೋಹಿ ಶಕ್ತಿಗಳಿಗೆ ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ದೇಶದ್ರೋಹದ ಕೆಲಸವಾಗಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆ.

ರಾಷ್ಟ್ರದ್ರೋಹಿಗಳ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ನಿಜವಾದ ಬಣ್ಣವನ್ನು ತೋರುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಹಾಗೂ ಖಂಡನೀಯ ಸಂಗತಿಯಾಗಿದೆ. ದೇಶದ್ರೋಹಿಗಳ ಪರವಾಗಿ ನಿಲ್ಲುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.

About The Author