Political News: ಸಿಎಂ ಆದ ಬಳಿಕ ಇದೇ ಪ್ರಪ್ರಥಮ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಪತ್ನಿ ಜತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಡಿಕೆಶಿ ದಂಪತಿಯ ಜತೆ ಪುತ್ರ ಮತ್ತು ಅಳಿಯ ಕೂಡ ತಿಮ್ಮಪ್ಪನ ದರ್ಶನ ಪಡೆದು ಪುನೀತರಾದರು.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಶೇರ್ ಮಾಡಿರುವ ಡಿಕೆಶಿ, ಓಂ ನಮೋ ವೆಂಕಟೇಶಾಯ, ಕಾಮಿತಾರ್ಥ ಪ್ರದಾಯಿನೇ, ಪ್ರಣತಃ ಕ್ಲೇಶ ನಾಶಾಯ, ಗೋವಿಂದಾಯ ನಮೋ ನಮಃ. ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಧರ್ಮಪತ್ನಿಯೊಂದಿಗೆ ಭೇಟಿ ನೀಡಿ, ದೇವರ ದಿವ್ಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹವೂ ಪ್ರತಿಯೊಬ್ಬರ ಮೇಲಿರಲಿ, ನಾಡು ಸಮೃದ್ಧಿಯಾಗಲಿ ಎಂದು ಆಶಿಸುತ್ತೇನೆ ಎಂದು ಬರೆದಿದ್ದಾರೆ.
ನಿನ್ನೆಯಷ್ಟೇ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಅದೇ ಖುಷಿಯಲ್ಲಿರುವ ಸಿಎಂ ಕುಟುಂಬದ ಜತೆ ಟೆಂಪಲ್ ರನ್ ಮಾಡಿದ್ದಾರೆ.




