Thursday, April 17, 2025

Latest Posts

Political News: ದೆಹಲಿ ಆಯ್ತು, ಬಿಹಾರದ ಮೇಲೆ ಮೋದಿ ಕಣ್ಣು

- Advertisement -

Political News: ರಾಜಕೀಯದಲ್ಲಿ ಸೋಲು ಗೆಲುವುಗಳು ಸಾಮಾನ್ಯ ಅನ್ನೋದನ್ನ ನಾವು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕು. ಅದರಲ್ಲಿ ಕೆಲವೊಂದು ಬಾರಿ ಈ ಎರಡೂ ಸಹ ಅನಿರೀಕ್ಷಿತವಾಗಿಯೂ ಹಾಗೂ ಇನ್ನು ಕೆಲ ಸಂದರ್ಭಗಳಲ್ಲಿ ಈ ಸೋಲುಗಳೇ ನಿರೀಕ್ಷಿತವಾಗಿ ಎದುರಾಗಿ ಬಿಡುತ್ತವೆ. ಇದೇ ರೀತಿಯ ಸನ್ನಿವೇಶವನ್ನ ನಾವು ದೆಹಲಿ ರಾಜಕೀಯ ವ್ಯವಸ್ಥೆ ಹಾಗೂ ಇತ್ತೀಚಿಗೆ ಹೊರಬಿದ್ದ ಫಲಿತಾಂಶವನ್ನ ಗಮನಿಸಿದಾಗ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತೆ. ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಸೋಲಿಗೆ ಏನು ಕಾರಣ..? ಜನರಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಹಾಗೂ ಉತ್ತಮ ಆಡಳಿತದ ಭರವಸೆ ತುಂಬಿ ಅಧಿಕಾರಕ್ಕೆ ಬಂದಿದ್ದೋರು ಹೇಳ ಹೆಸರಿಲ್ಲದಂತೆ ಮೂಲೆ ಗುಂಪಾಗಿದ್ದೇಕೆ..? ಅಂದುಕೊಂಡಂತೆ ದೆಹಲಿ ದಂಡಯಾತ್ರೆಯಲ್ಲಿ ಸಕ್ಸಸ್‌ ಕಂಡ ಬಿಜೆಪಿ ದಿಲ್ಲಿಯ ಗಲ್ಲಿಗಳಿಗೂ ತಾನು ನೀಡಿದ್ದ ಪ್ರಾಮಿಸ್‌ ಪೂರ್ಣಗೊಳಿಸುತ್ತಾ..? ರಾಷ್ಟ್ರ ರಾಜಧಾನಿ ಆಯ್ತು ಇದೀಗ ಬಿಹಾರದಲ್ಲೂ ಮೋದಿ ಮ್ಯಾಜಿಕ್‌ ಸಾಧ್ಯನಾ..? ಮೋದಿ, ನಿತೀಶ್‌, ಲಾಲು ಎದುರು ವರ್ಕ್‌ಔಟ್‌ ಆಗುತ್ತಾ ಪ್ರಶಾಂತ್‌ ಕಿಶೋರ್‌ ಪಾಲಿಟಿಕಲ್‌ ಸ್ಟ್ರ್ಯಾಟಜಿ..? ಈ ಎಲ್ಲ ವಿಚಾರಗಳ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಮಹಾರಾಷ್ಟ್ರ, ದೆಹಲಿ ಆಯ್ತು ಮೋದಿ ದಂಡಯಾತ್ರೆ ಮುಂದೆಲ್ಲಿಗೆ..?
ದಿಲ್ಲಿಲಿ ಕೇಜ್ರಿವಾಲ್‌ ಗರ್ವಭಂಗ ಆಗಲು ಮೋ-ಶಾ ಜೋಡಿ ಮಾಡಿದ್ದೇನು..?

ಈ ರಾಜಕಾರಣ ನಿಂತ ನೀರಲ್ಲ, ಇದು ಹರಿಯೋ ನೀರಾಗಿರುತ್ತೆ, ಇದಕ್ಕೆ ಬಂದೋರು ಸಮಾಜದ ಶುದ್ದೀಕರಣದ ಜೊತೆಗೆ ಅದರ ಏಳ್ಗೆಯನ್ನ ಮಾಡಲು ಸಾಧ್ಯ ಅನ್ನೋ ಮಾತನ್ನ ಬೇರೆ ಬೇರೆ ಸನ್ನಿವೇಶಗಳಲ್ಲಿ ಅನೇಕ ರಾಜಕಾರಣಿಗಳು ಆಗಾಗ ಹೇಳುತ್ತಿರುತಾರೆ. ಆ ಮಾತು ಅಷ್ಟೇ ನಿಜವೂ ಆಗಿದೆ. ಈ ಹಿಂದೆ ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡು ಅದರಲ್ಲೂ ನಮ್ಮ ದೇಶಕ್ಕೆ ಸಾಮಾಜಿಕ ಪಿಡುಗಿನಂತೆ ಕಾಡುತ್ತಿದ್ದ, ಕಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ ಮಸೂದೆ ಜಾರಿಗೆಗಾಗಿ ಆಗ್ರಹಿಸಿ ಏಪ್ರಿಲ್ 5, 2011ರಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ಮುಂಚೂಣಿ ನೇತೃತ್ವದಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಚಳುವಳಿಯ ಭಾಗವಾಗಿದ್ದ ಸರ್ಕಾರಿ ನೌಕರರೊಬ್ಬರು ಕ್ರಮೇಣ ತಮ್ಮ ಹೋರಾಟದ ಹಿನ್ನೆಲೆಯಿಂದ ದೇಶದ ಗಮನ ಸೆಳೆಯುತ್ತಾರೆ. ಈ ಚಳುವಳಿಯಲ್ಲಿ ಇದ್ದುಕೊಂಡೆ ಅವರು ತಮ್ಮದೇ ಆದ ರಾಜಕೀಯ ಪಕ್ಷವೊಂದನ್ನ ಸ್ಥಾಪಿಸಲು ತೆರೆಮರೆಯ ಸಿದ್ದತೆ ಪ್ರಾರಂಭಿಸುತ್ತಾರೆ. ದೇಶಾದ್ಯಂತ ನಾಗರಿಕ ಚಳುವಳಿಯ ಸ್ವರೂಪ ಪಡೆದಿದ್ದ ಜನಲೋಕ ಪಾಲ್‌ ಹೋರಾಟದ ಪ್ರಭಾವದಿಂದ ಕೊನೆಗೆ 2012ರಲ್ಲಿ ದೇಶಕ್ಕೆ ಇನ್ನೊಂದು ರಾಜಕೀಯ ಪಕ್ಷದ ಪರಿಚಯವಾಗುತ್ತೆ. ಅದು ಬೇರಾವುದೆ ಪಾರ್ಟಿ ಅಲ್ಲ, ಅಲ್ದೆ ಅದನ್ನ ಹುಟ್ಟು ಹಾಕಿದ್ದು ಮತ್ಯಾವ ನಾಯಕನೂ ಅಲ್ಲ… ಇದರ ಮುಖ್ಯ ರೂವಾರಿ ನನ್‌ ಅದರ್‌ ದ್ಯಾನ್‌ ತಮಗಿದ್ದ ದೆಹಲಿ ಕಿರೀಟವನ್ನ ತಮ್ಮ ಕೈಯಾರೇ ಎತ್ತಿ ಮೋದಿ-ಶಾ ಜೋಡಿ ಕೈಗೆ ಇಟ್ಟಿರೋ ಇದೇ ಅರವಿಂದ್‌ ಕೇಜ್ರಿವಾಲ್‌ ಅನ್ನೋದು ಅಚ್ಚರಿಯಾದರೂ ಸತ್ಯವಾಗಿದೆ.

ಬಿಹಾರದಲ್ಲಿ ಎನ್‌ಡಿಎ, ಮಹಾ ಘಟಬಂಧನ್‌ಗಳ ಮಧ್ಯೆ ವರ್ಕೌಟ್‌ ಆಗುತ್ತಾ ಆ ಸ್ಟ್ರ್ಯಾಟಜಿ..?
ನಿತೀಶ್‌, ಲಾಲು ಅಬ್ಬರದ ನಡುವೆ ಬಿರುಗಾಳಿ ಎಬ್ಬಿಸ್ತಾರಾ ಪ್ರಶಾಂತ್‌ ಕಿಶೋರ್..?‌

ಎಸ್….ಹೀಗೆ ರಾಜಕಾರಣಿಯಾಗಿ ತಮ್ಮನ್ನ ತಾವೇ ಬದಲಾಯಿಸಿಕೊಂಡು, ಆಡಳಿತದಲ್ಲಿ ಬದಲಾವಣೆ ತರಲು ಸಾಧ್ಯ ಅಂತ ತಿಳಿದು ಬಹು ಬೇಗನೇ ಜನರಿಗೆ ಹತ್ತಿರವಾಗಿದ್ದರು. ತಾವೇ ಸ್ಥಾಪಿಸಿದ್ದ ಪಕ್ಷಕ್ಕೆ ಅಧ್ಯಕ್ಷರಾಗುವುದನ್ನ ನೋಡಿದ್ದೇವೆ. ಆದರೆ ಕೇಜ್ರಿವಾಲ್‌ ಹಾಗೆ ಮಾಡಲಿಲ್ಲ ಬದಲಿಗೆ ಆಪ್‌ಗೆ ಸಂಚಾಲಕರಾಗಿ ಗಮನ ಸೆಳೆದರು. ಅಲ್ದೆ ತಮ್ಮ ಪಕ್ಷ ಸಂಘಟನೆಯಲ್ಲೂ ಸಹ ಜನ ಸಾಮಾನ್ಯರನ್ನ ಕೇಂದ್ರಿಕರಿಸಿಯೇ ತಮ್ಮ ಸಂಘಟನೆಗೆ ಒತ್ತು ನೀಡುತ್ತಾರೆ. ಹೀಗೆ ಜನ್ಮತಾಳಿದ್ದ ಆಮ್‌ ಆದ್ಮಿ ಅನ್ನೋ ಜನಸಾಮಾನ್ಯರ ಪಕ್ಷ ತಾನು ಎದುರಿಸಿದ್ದ ಮೊದಲ ವಿಧಾನಸಭಾ ಚುನಾವಣೆಯಲ್ಲಿಯೇ ದೆಹಲಿಯ 70ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಿ ಗೆಲುವು ಪಡೆಯುವಲ್ಲಿ ಸಫಲವಾಗುವ ಮೂಲಕ ಆಗ ಎರಡನೇಯ ಅತಿದೊಡ್ಡ ಪಕ್ಷವಾಗಿ, ಹಾಗೂ ಸತತ ಮೂರು ಬಾರಿ ಪೂರ್ಣಾವಧಿ ಸಿಎಂ ಆಗಿದ್ದ ಕಾಂಗ್ರೆಸ್‌ನ ಶೀಲಾ ದಿಕ್ಷಿತ್‌ರನ್ನ ಸೋಲಿಸಿದ್ದ ಕೇಜ್ರಿವಾಲ್‌ ಸಹ ದೊಡ್ಡ ಜನಪ್ರಿಯ ನಾಯಕರಾಗಿ ಹೊರಹೊಮ್ಮುತ್ತಾರೆ. ಬಳಿಕ 2015ರಲ್ಲಿಯೂ ಸಹ 67 ಸ್ಥಾನಗಳನ್ನ ಪಡೆದು ವಿಪಕ್ಷಗಳನ್ನ ಧೂಳಿಪಟ ಮಾಡುವ ಮೂಲಕ ಇದೇ ಆಪ್‌ ಇತಿಹಾಸ ನಿರ್ಮಿಸಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಕೇಜ್ರಿವಾಲ್‌ ಸರ್ಕಾರ ಸಾರ್ವಜನಿಕರ ಜೀವನದಲ್ಲಿ ಅಮೂಲಾಗ್ರ ಬದಲಾವಣೆ ತರುವ ಹಾಗೂ ಮೂಲಭೂತ ಸೌಕರ್ಯಗಳನ್ನ ಪೂರೈಸಿ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವ ಗುರಿಯನ್ನ ಹೊಂದಿತ್ತು. ಇನ್ನೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಉತ್ತಮ ಕಟ್ಟಡಗಳ ನಿರ್ಮಾಣದ ಜೊತೆಗೆ ಒಳ್ಳೆಯ ಗುಣಟ್ಟದ ಶಿಕ್ಷಣಕ್ಕೆ ಒತ್ತು ನೀಡಿತ್ತು. ವೈದ್ಯಕೀಯ ಕ್ಷೇತ್ರದಲ್ಲೂ ಸಹ ಹೆಸರು ಮಾಡಿದ್ದ ಆಪ್‌ ಸರ್ಕಾರ ಆರೋಗ್ಯ ಸೇವೆಗಳು ಹೆಚ್ಚು ಜನಸ್ನೇಹಿಯಾಗುವಂತೆ ನೋಡಿಕೊಂಡಿತ್ತು ಅನ್ನೋದು ಇದೆಲ್ಲ ಈಗ ಇತಿಹಾಸವಾಗಿದೆ ಅನ್ನೋದು ನಿಜಕ್ಕೂ ಶೋಚನೀಯ.

ಇನ್ನೂ ರಾಜಕೀಯವೂ ಸೇರಿದಂತೆ ಜೀವನದಲ್ಲಿಯೂ ಕೆಲವೊಂದು ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನ ಪಡೆಯದಿರುವುದು. ಅಲ್ದೆ ನಮ್ಮ ಒಣ ಪ್ರತಿಷ್ಠೆಗೆ ಜೋತು ಬಿದ್ದು ಇರುವ ಅವಕಾಶಗಳನ್ನ ಕಳೆದುಕೊಳ್ಳುವುದು. ಇನ್ನೂ ಈ ಎಲ್ಲವುಗಳೇ ಕೊನೆಗೆ ನಾವು ಅಧಃಪತನದತ್ತ ಸಾಗಲು ನಾವೇ ಮಾಡಿಕೊಂಡಿರುವ ಸ್ವಯಂಕೃತ ಅಪರಾಧಗಳಾಗುತ್ತವೆ ಅನ್ನೋದಕ್ಕೆ ಇದೀಗ ಇಡೀ ದೇಶದ ಎದುರು ಇದೇ ಕೇಜ್ರಿವಾಲ್‌ ಉದಾಹರಣೆಯಾಗಿರೋದು ಸುಳ್ಳಲ್ಲ. ತಮ್ಮ ನೂತನ ರಾಜಕೀಯ ಪಕ್ಷವನ್ನ ಆರಂಭಿಸಿದ ಬಳಿಕ ಇದೇ ಕೇಜ್ರಿವಾಲ್‌ ದೆಹಲಿ ಜನತೆ ಸೇರಿದಂತೆ ಇಡೀ ದೇಶದ ಜನರಲ್ಲಿ ಸಾಕಷ್ಟು ಭರವಸೆಗಳನ್ನ ಮೂಡಿಸಲು ಕಾರಣವಾಗಿದ್ದರು. ಪ್ರಮುಖವಾಗಿ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರೂ ಸಹ ಧ್ವನಿ ಎತ್ತುವಂತೆ ಮಾಡುವಲ್ಲಿ ಆಪ್‌ ತನ್ನ ಜವಾಬ್ದಾರಿ ಮೆರೆದಿತ್ತು. ಆದರೆ ಯಾವ ವಿಚಾರದಲ್ಲಿ ಜನರಿಗೆ ಭರವಸೆಯಾಗಿ ಆಪ್‌ ಕಂಡಿತ್ತೋ.. ಅದೇ ಈಗ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿ ಜನರಿಂದ ದೂರಾಗಿ ಬಿಟ್ಟಿದೆ. ಸತತ ಎರಡು ಅವಧಿಗಳಲ್ಲಿ ದೆಹಲಿ ಗದ್ದುಗೆ ಏರಿದ್ದ ಕೇಜ್ರಿವಾಲ್‌ ಯುಗ ಈಗ ದೆಹಲಿಯಲ್ಲಿ ಅಂತ್ಯವಾಗಿ ಅಲ್ಲಿಯೂ ಮೋದಿಯುಗ ಆರಂಭವಾಗಿದೆ ಅನ್ನೋದು ರೋಚಕವಾಗಿದೆ.

ಆಪ್‌ ಎಡವಿದ್ದೇಲ್ಲಿ..?

ಇತ್ತೀಚಿಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಆಮ್‌ ಆದ್ಮಿಯ ನಾಯಕ ಕೇಜ್ರಿವಾಲ್‌ಗೆ ಸೋಲಿನ ಗರ್ವಭಂಗವಾಗಿದೆ. ಈ ಮೂಲಕ 27 ವರ್ಷಗಳ ವನವಾಸ ಅನುಭವಿಸಿದ್ದ ಬಿಜೆಪಿಯು ಅಧಿಕಾರದ ಗದ್ದುಗೆ ಹಿಡಿಯಲಿದೆ. ದೆಹಲಿ ವಿಧಾನಸಭೆಯ 70 ರಲ್ಲಿ 48 ಸ್ಥಾನಗಳು ಕೇಸರಿ ಪಾಳಯದ ಪಾಲಾದರೆ ಇನ್ನುಳಿದ 22 ಸೀಟ್‌ಗಳನ್ನು ಪಡೆದು ಆಪ್‌ ತೀವ್ರ ಮುಖಭಂಗವನ್ನ ಅನುಭವಿಸುವಂತಾಗಿದೆ. ಇನ್ನೂ ಒಂದು ಕಾಲದಲ್ಲಿ ದೇಶದಲ್ಲಿಯೇ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್‌ ಅಡ್ರೆಸ್‌ ಇಲ್ದಂಗೆ ಮಾಯವಾಗಿ ಶೂನ್ಯ ಸಂಪಾದನೆ ಮಾಡಿ ತೀರ ನಗೆಪಾಟಲಿಗೀಡಾಗಿದೆ. ನಾವಿಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅಧಿಕಾರದ ಸುಖದ ಸುಪ್ಪತ್ತಿಗೆ ಅನುಭವಿಸಿದ್ದ ಆಮ್‌ ಆದ್ಮಿ ಇಷ್ಟೊಂದು ಕುಸಿಯಲು ಕಾರಣವಾಗಿದ್ದೇನು ಅನ್ನೋದರ ಬಗ್ಗೆ.. ಜೀವನದಲ್ಲಿ ಯಾವುದನ್ನೂ ತಲೆಗೇರಿಸಿಕೊಳ್ಳಬಾರದು ಅನ್ನೋ ಮಾತಿದೆ ಅಲ್ವಾ..? ಅದು ಹಣದ ಮೋಹ ಆಗಲಿ ಅಥವಾ ಅಧಿಕಾರದ ವ್ಯಾಮೋಹ ಇರಲಿ. ಇವೆರಡು ಹೆಚ್ಚಾದಾಗ ಮನುಷ್ಯನನ್ನ ಪಾತಾಳಕ್ಕೆ ತಳ್ಳುತ್ತವೆ. ಈ ಆಪ್‌ ವಿಚಾರದಲ್ಲೂ ಸಹ ಅದೇ ಆಗಿದ್ದು. ಮನಸಾರೆ ಜನರು ನೀಡಿದ್ದ ಆಶೀರ್ವಾದವನ್ನ ಕಡೆಗಣಿಸಿ ನಾನು ಮಾಡಿದ್ದೆ ನಡೆಯೋದು ಅಂತ ಬೇಕಾಬಿಟ್ಟಿಯಾಗಿ ನೀತಿ ನಿಯಮಗಳ ಜೊತೆಗೆ ಭ್ರಷ್ಟಾಚಾರ ಮಾಡಿದರೆ ಯಾವ್ಯಾವ ಸಂಕಷ್ಟಗಳು ಎದುರಾಗಬಹುದು ಹೇಳಿ..?

ಎಸ್.. ಈ ಅರವಿಂದ್‌ ಕೇಜ್ರಿವಾಲ್‌ ಕೂಡ ಉತ್ತಮವಾಗಿ ಆಡಳಿತ ನೀಡುತ್ತಾ ಇನ್ನಷ್ಟು ಜನರಿಗೆ ಹತ್ತಿರವಾಗಿ ಪಾರದರ್ಶಕವಾದ ಅಧಿಕಾರ ನೀಡಿದ್ದರೆ ಈಗಲೂ ಅವರೇ ದೆಹಲಿಯನ್ನ ಆಳುತ್ತಿದ್ದರು. ಆದರೆ ಅವರು ಅದನ್ನ ಮಾಡಲಿಲ್ಲ ಅನ್ನೋದು ಸಾಕಷ್ಟು ಜನರ ವಾದವಾಗಿದೆ. ಬದಲಾಗಿ ಕೇಜ್ರಿವಾಲ್ ಬಹುಕೋಟಿ ಅಬಕಾರಿ ಹಗರಣದಲ್ಲಿ ಸಿಲುಕಿಕೊಂಡು ಸ್ವತಃ ಮುಖ್ಯಮಂತ್ರಿಯಾಗಿದ್ದ ತಾವೇ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕೆ ಕಾರಣವಾಗಿದ್ದರು. ಅಲ್ದೆ ಈ ಹಗರಣದಲ್ಲಿ‌ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಆಗಿನ ಡಿಸಿಎಂ ಮನೀಷ್‌ ಸಿಸೋಡಿಯಾ ಹಾಗೂ ಆಪ್‌ ನಾಯಕ ಸಂಜಯ್‌ ಸಿಂಗ್‌ ಇವರೆಲ್ಲರೂ ಇಡಿಯಿಂದ ಅಂದ್ರೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದರು. ಇದರ ಬಳಿಕ ಇಡೀ ಸರ್ಕಾರವೇ ಮುಜುಗರಕ್ಕೊಳಗಾಗಿತ್ತು. ಅಲ್ದೆ ಕೋವಿಡ್‌ ಸಂದರ್ಭದಲ್ಲಿ ದುಬಾರಿ ಖರ್ಚಿನಲ್ಲಿ ನಿರ್ಮಿಸಿದ್ದ ಶೀಷ್‌ ಮಹಲ್‌ ವಿಚಾರಗಳು ಸೇರಿದಂತೆ ಆಮ್‌ ಆದ್ಮಿಯು ದಿನಕಳೆದಂತೆ ಆಡಳಿತ ವಿರೋಧಿ ಅಲೆಯನ್ನ ಎದುರಿಸಲು ಪ್ರಾರಂಭಿಸಿತ್ತು. ಇನ್ನೂ ಮುಖ್ಯವಾಗಿ ಜೈಲಿನಿಂದಲೇ ಕೆಲ ದಿನಗಳ ಕಾಲ ಕೇಜ್ರಿವಾಲ್‌ ಕಡತಗಳಿಗೆ ಸಹಿ ಹಾಕಿ ಅಲ್ಲಿಂದಲೇ ಆಡಳಿತ ನಡೆಸಿದ್ದರು. ಅಲ್ದೆ ಮುಖ್ಯವಾಗಿ ತಮ್ಮ ಪಕ್ಷದಲ್ಲಿ ಭಿನ್ನಮತದ ಹೊಗೆಯಾಡುತ್ತಿದ್ದರೂ ಸಹ ಕೇಜ್ರಿವಾಲ್‌ ಕೇವಲ ಉತ್ಸವಮೂರ್ತಿಯಂತೆ ಅತಿಶಿ ಮರ್ಲೇನಾ ಅವರನ್ನ ಸಿಎಂ ಆಗಿ ಮಾಡಿದ್ದು ಹೀಗೆ ಹಲವು ಕಾರಣಗಳಿಗಾಗಿ ಇಂದು ಆಮ್‌ ಆದ್ಮಿ ಹಾಗೂ ಅರವಿಂದ್‌ ಕೇಜ್ರಿವಾಲ್‌ ಅನ್ನೋ ಹೆಸರು ಮುಂದಿನ ಐದು ವರ್ಷಗಳವರೆಗೆ ಜನರಿಂದ ದೂರವಾಗಲು ಕಾರಣವಾಗಿದೆ.

ರಾಜಕೀಯ ತಂತ್ರಗಾರನಿಂದ ಜಾತಿ ರಹಿತ ರಾಜಕಾರಣ ಪಾಲಿಸಿ ಸಕ್ಸಸ್‌ ಆಗುತ್ತಾ..?
ಏನಿದೆ ಬಿಜೆಪಿಯ ಬಿಹಾರ ಬತ್ತಳಿಕೆಯಲ್ಲಿ..?

ಇನ್ನೊಂದು ಮುಖ್ಯವಾದ ಕಾರಣವೆಂದರೆ ಲೋಕಸಭಾ ಚುನಾವಣೆಯ ವೇಳೆ ದೇಶದಲ್ಲಿನ ಬಹುತೇಕ ವಿಪಕ್ಷಗಳು ಸೇರಿ ಮೋದಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಸ್ಥಾಪನೆಯಾಗಿದ್ದ ಇಂಡಿಯಾ ಒಕ್ಕೂಟದಲ್ಲಿ ಆಗ ಆಮ್‌ ಆದ್ಮಿಯು ಭಾಗಿಯಾಗಿತ್ತು. ಚುನಾವಣೆಯ ಬಳಿಕ ಕ್ರಮೇಣ ಕಾಂಗ್ರೆಸ್‌ನಿಂದ ಆಪ್‌ ದೂರ ಉಳಿಯಲು ಪ್ರಾರಂಭಿಸುತ್ತೆ. ಅಲ್ದೆ ದೆಹಲಿಯ ಸೇವೆಗಳಲ್ಲಿ ಕೇಂದ್ರದ ಹಿಡಿತ ಸಾಧಿಸುವ ಉದ್ಧೇಶದಿಂದ ಮೋದಿ ಸರ್ಕಾರ ತರಬಯಸಿದ್ದ ದೆಹಲಿಯ ಸೇವೆಗಳ ಮಸೂದೆ ವಿಚಾರದಲ್ಲಿ ಕಾಂಗ್ರೆಸ್‌ ತಮ್ಮ ಪರ ಬೆಂಬಲ ವ್ಯಕ್ತಪಡಿಸಿಲ್ಲ ಎಂಬ ಕೋಪವೂ ಆಪ್‌ಗೆ ಇತ್ತು. ಇವೆಲ್ಲದರ ಪರಿಣಾಮವಾಗಿ ಕೇಜ್ರಿವಾಲ್‌ ಆ್ಯಂಡ್ ಟೀಂ ಹಸ್ತದಿಂದ ಅಂತರ ಕಾಯ್ದುಕೊಳ್ಳುತ್ತೆ. ಬಳಿಕ‌ ನಡುವೆ ಅಂತರ ಕಂದಕದಂತಾಗಿ ಕಾಂಗ್ರೆಸ್‌ ಹಾಗೂ ಕೇಜ್ರಿವಾಲ್‌ರ ಆಪ್‌ ನಡುವೆ ದೆಹಲಿಯ ಚುನಾವಣೆಗೆ ಮೈತ್ರಿಯಾಗದಂತೆ ಮಾಡಿತ್ತು. ಅಲ್ಲದೆ ಒಂದು ಕಾಲದಲ್ಲಿ ಅಂದರೆ ಲೋಕಸಭೆಯ ಚುನಾವಣೆ ವೇಳೆ ವಿ ಆರ್‌ ಫ್ರೆಂಡ್ಸ್‌ ಅಂತಿದ್ದರು. ಆದರೆ ಬದಲಾದ ರಾಜಕೀಯ ಸ್ಥಿತಿಯಲ್ಲಿ ನೋ ನೋ ವಿ ಆರ್‌ ಎನಿಮೀಸ್‌ ಅಂತಲೇ ಪರಸ್ಪರ ಕಾದಾಟಕ್ಕಿಳಿದೇ ಬಿಟ್ಟರು ಈ ರಾಹುಲ್‌ ಹಾಗೂ ಕೇಜ್ರಿವಾಲ್…‌ ಅಲ್ಲಿಗೆ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಕನ್ಫರ್ಮ್‌ ಆಗುತ್ತೆ. ಅದೇ ಒಂದ್ವೇಳೆ ಕಾಂಗ್ರೆಸ್‌ ಹಾಗೂ ಆಪ್‌ ಮೈತ್ರಿಯಾಗಿದ್ದರೆ ದೆಹಲಿ ಗದ್ದುಗೆಗಾಗಿ ಈ ಹೊತ್ತಲ್ಲಿ ಮೋದಿ ಮತ್ತೆ ಐದು ವರ್ಷಗಳ ತಪಸ್ಸನ್ನೇ ಮಾಡಬೇಕಾದ ಸಂದರ್ಭ ಬರುತ್ತಿತ್ತು ಅನ್ನೋ ಮಾತುಗಳೂ ಸಹ ರಾಜಕೀಯ ವಿಶ್ಲೇಷಕರದ್ದಾಗಿವೆ. ರಾಜಕೀಯ ವ್ಯವಸ್ಥೆಯಲ್ಲಿ ಏನೋ ಒಂದು ದೊಡ್ಡ ಬದಲಾವಣೆಯನ್ನ ತಂದು ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕುವುದಾಗಿ ಹೇಳಿದ್ದ ಕೇಜ್ರಿವಾಲ್‌ ಮೇಲಿನ ನಂಬಿಕೆ ಕಳೆದುಕೊಂಡ ಜನರು ನಿಜಕ್ಕೂ ಭ್ರಮನಿರಸನಗೊಂಡಿದ್ದಾರೆ ಅನ್ನೋದು ಮಾತ್ರ ಸತ್ಯವಾಗಿದೆ.

ಬಿಜೆಪಿ ಗೆದ್ದಿದ್ದೇಲ್ಲಿ..?

ಈಗಾಗಲೇ ಆಪ್‌ ಹೇಗೆ ಮಣ್ಣು ಮುಕ್ಕಿದೆ ಅನ್ನೋದನ್ನ ನಾವು ಗಮನಿಸಿದ್ದಾಯ್ತು. ಇನ್ನೂ ತಮ್ಮ ವನವಾಸ ಅಂತ್ಯಗೊಳಿಸಿ ಬಿಜೆಪಿಯು ದಿಲ್ಲಿ ಗದ್ದುಗೆ ಏರಲು ಏನೇನು ಕಸರತ್ತು, ತಂತ್ರಗಾರಿಕೆ ಮಾಡಿತ್ತು ಅನ್ನೋದನ್ನ ನೋಡೋದಾದ್ರೆ… ಬಿಜೆಪಿ.. ತನ್ನ ಅಸಾಮಾನ್ಯ ಸಾಧನೆಗಳಿಂದಲೇ ಕಳೆದೆರಡು ದಶಕಗಳಿಂದಲೂ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ದೆ ಗುಜರಾತ್‌, ಉತ್ತರಾಖಂಡ, ಛತ್ತಿಸ್‌ಗಡ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷವಾಗಿದೆ ಅನ್ನೋದು ಇದರ ಇನ್ನೊಂದು ಗರಿಮೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹೇಗಾದರೂ ಮಾಡಿ ದೆಹಲಿಯಲ್ಲಿ ಕೇಸರಿ ಧ್ವಜ ಹಾರಾಡಲೇಬೇಕೆಂದು ಪಣ ತೊಟ್ಟ ಬಿಜೆಪಿ ನಾಯಕರು ಅಂದುಕೊಂಡ ಹಠ ಸಾಧಿಸಿದ್ದಾರೆ. ಕೇಜ್ರಿವಾಲ್‌ ಆಡಳಿತದಲ್ಲಿನ ವೈಫಲ್ಯಗಳನ್ನೇ ತಮ್ಮ ಚುನಾವನಾ ಅಸ್ರ್ತಗಳನ್ನಾಗಿಸಿಕೊಂಡು ಜನರಲ್ಲಿ ಆಳವಾಗಿ ತಲುಪುವಂತೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ದೆಹಲಿ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಮುಖ್ಯವಾಗಿ ಕೇಜ್ರಿವಾಲ್‌ ಸರ್ಕಾರದ ಅಬಕಾರಿ ಹಗರಣದಲ್ಲಿನ ಭ್ರಷ್ಟಾಚಾರ ಹಾಗೂ ದುಬಾರಿ ಶೀಷ ಮಹಲ್‌ ನಿರ್ಮಾಣದ ವಿಚಾರಗಳನ್ನೇ ಮುಂದಿಟ್ಟುಕೊಂಡು ಸ್ವತಃ ಮೋದಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ದೆಹಲಿ ಜನರು ಇನ್ನು ಮುಂದೆ ಆಪ್ದಾ ಅಂದ್ರೆ ಆಪತ್ತಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಾವು ಹೋದ ಕಡೆಗಳಲೆಲ್ಲ ಟೀಕಾ ಪ್ರಹಾರ ನಡೆಸಿದ್ದರು. ಈ ಮೂಲಕ ಆಪ್‌ ಸರ್ಕಾರದ ತಪ್ಪುಗಳನ್ನ ಜನರಲ್ಲಿ ಬೇರೂರುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದರು. ಅಲ್ದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತ್ ಲಾಭ ದೆಹಲಿಯ ಜನರಿಗೆ ತಲುಪದಂತೆ ಆಪ್‌ ಸರ್ಕಾರ ನೋಡಿಕೊಂಡಿತ್ತು ಎಂದು ಮೋದಿ ಹರಿಹಾಯ್ದಿದ್ದರು.

ಇನ್ನೂ ಹರಿಯಾಣದ ಬಿಜೆಪಿ ಸರ್ಕಾರದಿಂದ ಯಮುನಾ ನದಿಗೆ ವಿಷ ಬೇರೆಸಲಾಗಿದೆ ಎಂದು ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಸ್ವತಃ ಹರಿಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ ಯಮುನಾ ನದಿಯ ನೀರಿಗಿಳಿದು ಹರಿಯಾಣದ ನೀರು ವಿಷಕಾರಿ ಅಲ್ಲ, ಬದಲಿಗೆ ನಿಮ್ಮ ಮನಸ್ಸು ನಿಜವಾಗಲೂ ವಿಷದಿಂದ ಕೂಡಿದೆ ಅಂತ ಕೇಜ್ರಿವಾಲ್‌ಗೆ ತಿರುಗೇಟು ನೀಡಿದ್ದರು. ಅಲ್ದೆ ಇದರಿಂದ ಕೇಜ್ರಿವಾಲ್‌ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿದ್ದರು. ಇನ್ನೂ ಪ್ರಮುಖವಾಗಿ ದೆಹಲಿಗೆ ಸಂಬಂಧಿಸಿದ್ದ ಸಮಸ್ಯೆಗಳು ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಬಿಜೆಪಿ ನಾಯಕರು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಆಫ್‌ನ ಪ್ರಮುಖ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಕ್ಷೇತ್ರಗಳಲ್ಲಿ ಕೇಜ್ರಿವಾಲ್‌ ಓಟವನ್ನ ಕಟ್ಟಿ ಹಾಕುವ ತಂತ್ರಗಾರಿಕೆಯನ್ನೂ ಸಹ ಕೇಸರಿ ಪಡೆಯ ನಾಯಕರು ಮಾಡಿದ್ದರು. ಮುಖ್ಯವಾಗಿ ಟಿಕೆಟ್‌ ವಂಚಿತ ಆಪ್‌ನ ಪ್ರಮುಖರನ್ನ ತಮ್ಮತ್ತ ಸೆಳೆದು ಅವರಿಗೆ ತಮ್ಮ ಟಿಕೆಟ್‌ ನೀಡಿ ಆಪ್‌ಗೆ ಸೆಡ್ಡು ಹೊಡೆಯುವ ಕೆಲಸವನ್ನ ಬಿಜೆಪಿ ಮಾಡಿತ್ತು. ಪ್ರಚಾರದ ವಿಚಾರದಲ್ಲಿ ಜಾಣ ನಡೆ ಅನುಸರಿಸಿದ್ದ ಬಿಜೆಪಿಯು, ತಮ್ಮ ಪಕ್ಷದ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖರನ್ನ ಕೇವಲ ಪಕ್ಷದ ಚುನಾವಣಾ ಪ್ರಚಾರಕ್ಕಾಗಿಯೇ ಪ್ರಬಲವಾಗಿ ಬಳಸಿಕೊಂಡಿತ್ತು. ಇಷ್ಟೇ ಅಲ್ದೆ ತಮ್ಮ ಈ ಕಾರ್ಯಕ್ಕೆ ಆರ್‌ಎಸ್‌ಎಸ್‌ ಅನ್ನೂ ಸಹ ಬಳಸಿಕೊಂಡು ಉತ್ತಮ ದೆಹಲಿ-ಉತ್ತಮ ಭಾರತ ಅನ್ನೋ ಘೋಷಣೆಯ ಅಡಿಯಲ್ಲಿ ತಳಮಟ್ಟದಲ್ಲಿಯೂ ಈ ದೆಹಲಿ ಉಳಿಸಿ ಅಭಿಯಾನ ಜನರನ್ನ ತಲುಪುವಂತೆ ಮಾಡಿತ್ತು. ಕೇಂದ್ರ ಸಚಿವರು ಹಾಗೂ ಎನ್‌ಡಿಎ ಮಿತ್ರಕೂಟದ ಸಂಸದರೂ ಸಹ ಮನೆ ಮನೆಗೆ ತೆರಳಿ ಜನರನ್ನ ಭೇಟಿಯಾಗಿ ಮತಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ಬಿಜೆಪಿಯ ಪಾಲಿಗೆ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಆಪ್‌ ಸರ್ಕಾರದ ಲೋಪದೋಷಗಳನ್ನ ನಿರಂತರವಾಗಿ ಎತ್ತಿ ತೋರಿಸುತ್ತಿದ್ದೂ ಸಹ ಬಿಜೆಪಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.

ಇನ್ನೂ ಚುನಾವಣೆಗೂ ಮುನ್ನ ಬಿಜೆಪಿ ಬಜೆಟ್‌ ಘೋಷಿಸಿದ್ದು ಹಾಗೂ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಆಪ್‌ ಸರ್ಕಾರದ ಉಚಿತ ಯೋಜನೆಗಳನ್ನ ನಿಲ್ಲಿಸುವುದಿಲ್ಲ. ಅವುಗಳನ್ನ ಯಥಾವತ್ತಾಗಿ ಮುಂದುವರೆಸುತ್ತೇವೆ. ಅಲ್ದೆ ಬಿಜೆಪಿಯು ತಾನೂ ಸಹ ಸಂಕಲ್ಪ ಪತ್ರದ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಅದರಲ್ಲಿಯೂ ಕೆಲವು ಫ್ರೀ ಬೀಸ್‌ ನೀಡುವುದಾಗಿ ಹೇಳಿದ್ದು ಜನರಿಗೆ ಇನ್ನಷ್ಟು ಬಿಜೆಪಿಯತ್ತ ಆಕರ್ಷಣೆಯಾಗಲು ಸಾಧ್ಯವಾಗಿತ್ತು. ಮುಖ್ಯವಾಗಿ ಕೇವಲ ಚುನಾವಣೆಯ ಗೆಲುವೇ ನಮ್ಮ ಗುರಿ ಅಂತ ತಿಳಿದು ಸಿಎಂ ಅಭ್ಯರ್ಥಿ ಘೋಷಿಸದೆ ಯಾವುದೇ ಗೊಂದಲಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಎಲ್ಲ ಕಾರಣಗಳಿಗಾಗಿ ಮೋದಿ-ಶಾ ಜೋಡಿಯ ದೆಹಲಿ ದಂಡಯಾತ್ರೆಯು ಸಕ್ಸಸ್‌ ಕಾಣಲು ಸಾಧ್ಯವಾಗಿದೆ.

ದೆಹಲಿ ಆಯ್ತು ಬಿಹಾರದಲ್ಲೇನು..?

ಈ ಸಲದ ಚುನಾವಣೆ ಬಿಹಾರದ ಪಾಲಿಗೆ ನೇರ ಹಣಾಹಣಿ. ಯಾಕೆಂದರೆ ಇಲ್ಲಿ ಸಣ್ಣಪುಟ್ಟ ಪಕ್ಷಗಳಿದ್ದರೂ ಅವು ಎನ್‌ಡಿಎ ಮತ್ತು ಮಹಾ ಒಕ್ಕೂಟಗಳ ನಡುವೆ ಲೆಕ್ಕಕ್ಕಿಲ್ಲ. ಹಲವು ಪಕ್ಷಗಳು ಈ ಎರಡು ಒಕ್ಕೂಟಗಳ ನಡುವೆ ಜಾಗ ಪಡೆದುಕೊಂಡಿವೆ. ಎಡಪಕ್ಷಗಳು ಇಲ್ಲಿ ಮಹತ್ವಾಕಾಂಕ್ಷೆ ಹೊಂದಿಲ್ಲ. ಇನ್ನೊಂದು ರೀತಿಯಿಂದ, ಈ ಸಲದ ಚುನಾವಣೆ ಹಾಲಿ ಸಿಎಂ ನಿತೀಶ್‌ ಕುಮಾರ್‌ ವರ್ಸಸ್‌ ಲಾಲು ಪ್ರಸಾದ್‌ ಪುತ್ರ ತೇಜಸ್ವಿ ಯಾದವ್‌ ನಡುವಿನ ಹೋರಾಟ ಎಂದು ಬಿಂಬಿತವಾಗಿದೆ. ಹಿಂದುಳಿದ ಜಾತಿ ವರ್ಗಗಳ ಮೇಲೆ ನಿತೀಶ್‌ ಪ್ರಭಾವ ಹೊಂದಿದ್ದು, ಬಿಜೆಪಿಯ ಪಾಲಿಗೆ ಮತಗಳ ಅನರ್ಘ್ಯ ನಿಧಿಯಾಗಿದ್ದಾರೆ. ಇನ್ನೊಂದು ಕಡೆ ತೇಜಸ್ವಿ, ಯಾದವೇತರ ಮತಗಳನ್ನ ಕ್ರೋಡೀಕರಿಸಲು ಯತ್ನಿಸುತ್ತಿದ್ದಾರೆ. ಒಬಿಸಿ ಮತಗಳನ್ನ ಒಟ್ಟುಗೂಡಿಸುವಲ್ಲಿ ತೇಜಸ್ವಿ ಸಫಲರಾದರೆ, ನಿತೀಶ್‌ಗೆ ಕಷ್ಟವಾಗಲಿದೆ.

ಎಸ್..‌ ಗಳಸ್ಯ ಕಂಠಸ್ಯ ಅನ್ನೋ ರೀತಿಯಲ್ಲಿಯೇ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಜೋಡಿಯ ಮುಂದಿನ ಕಣ್ಣು ಬಿಹಾರದತ್ತ ಅನ್ನೋದು ಇತ್ತೀಚಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ನೀಡಿರುವ ಕೊಡುಗೆಗಳೇ ಸಾಕ್ಷಿಯಾಗಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಕೂಟವು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 225 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನ ಹೊಂದಿದೆ. ಮುಂಬರುವ ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಚುನಾವಣೆಗಾಗಿ ಈಗಾಗಲೇ ಅತ್ಯಂತ ಕಠಿಣ ಹೋರಾಟದ ರೂಪು ರೇಷೆಗಳನ್ನ ಕೈಗೊಳ್ಳಲಾಗುತ್ತಿದೆ. ಬಿಹಾರ ಚುನಾವಣೆಯು ಎನ್‌ಡಿಎ ಪಾಲಿಗೆ ನಿರ್ಣಾಯಕ ಪರೀಕ್ಷೆಯಾಗಲಿದ್ದು, 2024 ರ ಲೋಕಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದರಿಂದ ಗಮನಾರ್ಹವಾಗಿ ಲಾಭವಾಗಿತ್ತು. ಎನ್‌ಡಿಎ ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ 30 ಸ್ಥಾನಗಳನ್ನ ಪಡೆದುಕೊಂಡಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ದೆಹಲಿಯ ಗೆಲುವಿನ ಬಳಿಕ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಪುನಃ ಅಧಿಕಾರಕ್ಕೆ ಬರಲು ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಆದರೆ ಇದುವರೆಗೂ ಮುಂದಿನ ಸಿಎಂ ಅಭ್ಯರ್ಥಿಯನ್ನ ಘೋಷಿಸದೆ ಮಹಾರಾಷ್ಟ್ರ ಹಾಗೂ ದೆಹಲಿ ಮಾದರಿಯಲ್ಲೇ ಬಿಹಾರದಲ್ಲೂ ಸಹ ಚುನಾವಣೆ ನಡೆಸಲು ಎನ್‌ಡಿಎ ಯೋಚಿಸಿದ್ದಂತೆ ಕಾಣುತ್ತೆ.

ಈ ಹಿಂದೆ ನವೆಂಬರ್ 2020ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಂದ್ರೆ ಎನ್‌ಡಿಎ ಸರ್ಕಾರವನ್ನ ರಚಿಸಿತ್ತು. ಆಗ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರು. ನಂತರ, ಆಗಸ್ಟ್ 2022 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಎನ್‌ಡಿಎ ಜೊತೆಗಿನ ಸಂಬಂಧವನ್ನ ಮುರಿದು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ನೊಂದಿಗೆ ಸರ್ಕಾರವನ್ನ ರಚಿಸಿತ್ತು. ಅಲ್ಲಿಯೂ ವರ್ಕ್‌ಔಟ್‌ ಆಗದ ನಿತೀಶ್‌ ದೋಸ್ತಿ ಕೊನೆಗೆ 2024ರ ಜನವರಿ ತಿಂಗಳಲ್ಲಿ ಆರ್‌ಜೆಡಿ ನೇತೃತ್ವದ ಸಂಬಂಧಕ್ಕೆ ಟಾಟಾ ಹೇಳಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಕೈ ಜೋಡಿಸಿದ್ದಾರೆ.

ಚುನಾವಣೆಗೆ ಮುನ್ನವೇ ಎನ್‌ಡಿಎ ಕೂಟದ ನಾಯಕರು ತಮ್ಮ ಸದಸ್ಯರಲ್ಲಿ ಒಗ್ಗಟ್ಟು ಬಲ ಕಳೆದುಕೊಳ್ಳಬಾರದೆಂದು ಪ್ರತಿ ಜಿಲ್ಲೆಗಳಲ್ಲಿಯೂ ಜಂಟಿ ಸಭೆಗಳನ್ನು ನಡೆಸುವ ಮೂಲಕ ಮೈತ್ರಿಯಲ್ಲಿ ಬಿರುಕು ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಸಭೆಗಳಲ್ಲಿ ಎನ್‌ಡಿಎಗೆ ಸಂಬಂಧಿಸಿದ ಅಧ್ಯಕ್ಷರು ಒಟ್ಟಾಗಿ ಭಾಗಿಯಾಗಿ ಎಲ್ಲರೂ ಒಂದಾಗಿ ದೃಢಸಂಕಲ್ಪದಿಂದ ಕೆಲಸ ನಿರ್ವಹಿಸುವಂತೆ ಸಲಹೆ ನೀಡುತ್ತಿದ್ದಾರೆ. ಅಲ್ದೆ ತಳಮಟ್ಟದಲ್ಲಿ ಮೈತ್ರಿಕೂಟದ ಒಗ್ಗಟ್ಟನ್ನ ಕಾಪಾಡಿಕೊಳ್ಳುವ ಅವಶ್ಯಕತೆ ಇದೆ. ವಿರೋಧ ಪಕ್ಷದ ಕುಟುಂಬ-ಆಧಾರಿತ ರಾಜಕೀಯ ಶಕ್ತಿಗಳನ್ನ ಮಟ್ಟಹಾಕಲು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಸಿದ್ದರಾಗಿರುವಂತೆ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ಈಗಾಗಲೇ ಕರೆ ನೀಡಿದ್ದಾರೆ. ಇನ್ನೂ ದೆಹಲಿ ಫಲಿತಾಂಶದ ಬಳಿಕ ಬಿಹಾರದ ಹಿಂದೂಸ್ತಾನಿ ಅವಾಮ್ ಮೋರ್ಚಾ ನಾಯಕ ಹಾಗೂ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಕೂಡ ದೆಹಲಿಯ ಫಲಿತಾಂಶ ಮತ್ತು ಬಿಹಾರದ ಭವಿಷ್ಯದ ಚುನಾವಣಾ ವಿಚಾರವನ್ನ ಕೇಂದ್ರಿಕರಿಸಿ ದಿಲ್ಲಿ ತೋ ಝಾಂಕಿ ಹೈ, ಬಿಹಾರ್ ಅಭಿ ಬಾಕಿ ಹೈ… ಜೈ ಎನ್‌ಡಿಎ ಅಂತ ಹೇಳುವ ಮೂಲಕ ತಾವು ಚುನಾವಣೆಗೆ ಸಿದ್ದರಾಗಿದ್ದೇವೆ ಎಂಬ ಸಂದೇಶ ನೀಡಿದ್ದರು. ಇನ್ನೂ ತಮ್ಮ ಪಕ್ಷಕ್ಕೂ ಸಹ 20 ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಇತ್ತೀಚಿಗೆ ಮಾಂಝಿ ಕೇಳಿದ್ದರು.

ಬಿಹಾರ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುವ ಮುನ್ನವೇ, ರಾಜ್ಯದ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಕೇಂದ್ರ ಗಮನಹರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬಿಹಾರದ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನ ಹೆಚ್ಚಿಸುವ ಗುರಿಯ ಜೊತೆಗೆ ಹಲವು ಯೋಜನೆಗಳನ್ನ ಒಳಗೊಂಡಿತ್ತು. ಇವುಗಳಲ್ಲಿ ಮುಖ್ಯವಾಗಿ ನೂತನ ಮಖಾನಾ ಮಂಡಳಿ ಸ್ಥಾಪನೆ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಮತ್ತು ಪಶ್ಚಿಮ ಕೋಶಿ ಕಾಲುವೆಯಂತಹ ಪ್ರಮುಖ ಪ್ರಾದೇಶಿಕ ಯೋಜನೆಗಳಿಗೆ ಆರ್ಥಿಕ ನೆರವು ನೀಡಿದೆ. ಅಲ್ದೆ ಪಾಟ್ನಾದ ಐಐಟಿ ವಿಸ್ತರಿಸುವುದರ ಜೊತೆಗೆ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನ ಸ್ಥಾಪಿಸುವ ಯೋಜನೆಗಳನ್ನ ಘೋಷಿಸುವ ಮೂಲಕ ಮೋದಿ ಸರ್ಕಾರ ಬಿಹಾರ ಜನರನ್ನ ಸೆಳೆಯುವಲ್ಲಿ ಮುಂದಾಗಿದೆ. ಅಲ್ದೆ ಬಿಹಾರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಜಂಪಿಂಗ್‌ ಸ್ಟಾರ್ ನಿತೀಶ್‌ ಕುಮಾರ್ ಸರ್ಕಾರ‌ಕ್ಕೆ ಚುನಾವಣಾ ಯುದ್ಧವನ್ನ ಗೆಲ್ಲುವುದಕ್ಕಾಗಿ ಪ್ರತ್ಯೇಕ ಮೈದಾನದಲ್ಲಿ ತಾಲೀಮು ಮಾಡುವ ಅವಶ್ಯಕತೆ ಇಲ್ಲವಾದರೂ ಸಹ ಆರ್‌ಜೆಡಿಯ ಸವಾಲನ್ನ ಸಮರ್ಥವಾಗಿ ಎದುರಿಸಬೇಕಿದೆ ಅನ್ನೋದು ಮಾತ್ರ ಅಷ್ಟೇ ಸತ್ಯವಾಗಿದೆ. ಬಿಹಾರದ ಗೆಳೆಯನಿಗಾಗಿ ಇಷ್ಟೆಲ್ಲ ಬಂಪರ್‌ ನೀಡಿರುವ ಮೋದಿ ಮ್ಯಾಜಿಕ್ ಮಹಾಮೈತ್ರಿಕೂಟ ಹಾಗೂ ಆರ್‌ಜೆಡಿ ಎದುರು‌ ನಡೆಯುವುದು ಸ್ವಲ್ಪ ಕಷ್ಟವೇ ಆಗಬಹುದು.

ಇನ್ನೂ ಆರ್‌ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌ ಅವರೇ 2025ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ ಅಂತ ಕಾಂಗ್ರೆಸ್‌ ನಾಯಕ ಹಾಗೂ ಬಿಹಾರದ ಸಹ ಉಸ್ತುವಾರಿ ಶಹನವಾಜ್‌ ಆಲಂ ಇತ್ತೀಚಿಗಷ್ಟೇ ಘೋಷಿಸಿದ್ದರು. ಅಲ್ದೆ ಇಲ್ಲಿ ಎನ್‌ಡಿಎ ಆಡಳಿತ ಇದ್ದರೂ ಸಹ ಅದರ ಪ್ರಾಬಲ್ಯಕ್ಕೆ ಟಕ್ಕರ್‌ ನೀಡಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಜನತಾ ದಳ ಅಂದ್ರೆ ಆರ್‌ಜೆಡಿಯು ಸಹ ಭಾರಿ ವಿರೋಧವನ್ನ ಎದುರಿಸುತ್ತಿದೆ. ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್, ಮಾಯ್ ಬಹಿನ್ ಮಾನ್ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ 2,500 ರೂಪಾಯಿ ಮತ್ತು ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಭರವಸೆಗಳನ್ನ ನೀಡುವ ಮೂಲಕ ಎನ್‌ಡಿಎ ಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಲ್ದೆ ಸಮಾಜದಲ್ಲಿ ದುರ್ಬಲ ವರ್ಗದ ಜನರಿಗೆ ಪಿಂಚಣಿ ಸೇರಿದಂತೆ ಬಿಹಾರದಲ್ಲಿ ವ್ಯಾಪಕವಾಗಿ ತಲೆದೂರಿರುವ ನಿರುದ್ಯೋಗ ಸಮಸ್ಯೆಯನ್ನ ಹೋಗಲಾಡಿಸಿ ಜನರ ವಲಸೆಯನ್ನ ತಪ್ಪಿಸುವುದಾಗಿ ಈಗಾಗಲೇ ತೇಜಸ್ವಿ ಯಾದವ್‌ ಘೋಷಿಸುವ ಮೂಲಕ ಎನ್‌ಡಿಎಗೆ ಸೆಡ್ಡು ಹೊಡೆಯುವ ಕೆಲಸ ಮಾಡಿದ್ದಾರೆ.

ಬಿಹಾರದ ಜಾತಿ ಸಮೀಕರಣ ಏನು..?

ಇನ್ನೂ ಈ ರಾಜಕಾರಣ ಅಂದ್ರೆ ಜಾತಿ ಸಮೀಕರಣ ಬರಲೇಬೇಕಲ್ವಾ.. ರಾಜಕಾರಣ ಬಿಟ್ಟು ಜಾತಿ ಇಲ್ಲ, ಜಾತಿ ಬಿಟ್ಟು ರಾಜಕಾರಣವೇ ಇಲ್ಲ ಅನ್ನೋ ಸ್ಥಿತಿಗೆ ನಾವೆಲ್ಲ ಬಂದು ತಲುಪಿದ್ಧೇವೆ. ಅಂದ ಹಾಗೆ ಈ ಬಿಹಾರದಲ್ಲಿ ಜಾತಿ ಲೆಕ್ಕಾಚಾರವನ್ನ ನೋಡಿದಾಗ.. ಶೇ.14 ರಷ್ಟಿರುವ ಯಾದವರು, ಶೇ.18 ರಷ್ಟಿರುವ ಕುಶ್ವಾಹಗಳು ಹಾಗೂ ಶೇ. 6 ರಷ್ಟಿರುವ ಮಲ್ಲಾಹ್ ಮೀನುಗಾರರ ಸಮುದಾಯಗಳು ಇಂಡಿಯಾ ಒಕ್ಕೂಟವನ್ನ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದವು. ಬಿಜೆಪಿಯು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕುಶ್ವಾಹ ಸಮುದಾಯದ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಆದರೆ ಜೆಡಿಯು ಮೂವರಿಗೆ ಟಿಕೆಟ್‌ ನೀಡಿತ್ತು. ಈ ಮೂಲಕ ಕಳೆದ 25 ವರ್ಷಗಳಿಂದ ನಿತೀಶ್‌ ಕುಮಾರ್‌ ಪೋಷಿಸುತ್ತಾ ಬಂದಿದ್ದ ಲವ-ಕುಶ ಅಂದ್ರೆ ಕುರ್ಮಿ ಕುಶ್ವಾಹ ಸಮುದಾಯದ ಮತಗಳನ್ನ ತಮ್ಮತ್ತ ಸೆಳೆಯುವಲ್ಲಿ ಸೋಷಿಯಲ್‌ ಇಂಜಿನಿಯರಿಂಗ್‌ ಅನ್ನೋ ಖ್ಯಾತಿಗಳಿಸಿರುವ ಲಾಲೂ ಪ್ರಸಾದ್‌ ಯಾದವ್‌ ಈ ಹಿಂದೆ ಯಶಸ್ವಿಯಾಗಿದ್ದರು. ಆದರೆ ಈ ಮತಗಳು ತನ್ನತ್ತ ವಾಲುವಂತೆ ಮಾಡಬೇಕಿರುವುದು ಎನ್‌ಡಿಎ ಕೂಟದ ಮುಂದೆ ಇರುವ ಸವಾಲಾಗಿದೆ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರಗಳನ್ನ ಹಾಗೂ ವಿಧಾನಸಭಾ ಚುನಾವಣೆಗಳು ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸಮಸ್ಯೆಗಳ ಜೊತೆಗೆ ರಾಜಕೀಯ ಸ್ಥಿತಿಗತಿಗಳನ್ನ ಆಧರಿಸಿರುತ್ತವೆ. ಈ ಎರಡೂ ಚುನಾವಣೆಗಳೂ ಸಹ ಬೇರೆ ಬೇರೆ ಸ್ವರೂಪದಲ್ಲಿ ನಡೆಯುತ್ತವೆ ಅನ್ನೋದನ್ನ ನಾವು ಒಪ್ಪಲೇಬೇಕಾಗುತ್ತೆ.

13 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬಿಹಾರದಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ. 82.69ರಷ್ಟಿದ್ದರೆ, ಶೇ 17 ರಷ್ಟು ಮುಸ್ಲಿಂ ಹಾಗೂ ಶೇ 17-18 ರಷ್ಟು ದಲಿತ ಸಮುದಾಯದ ಮತಗಳಿವೆ. ಅಲ್ದೆ ಪ್ರಮುಖವಾಗಿ ಮುಸ್ಲಿಂ ಹಾಗೂ ಯಾದವರು ಒಟ್ಟುಗೂಡಿದರೆ ಶೇ 32 ರಷ್ಟಾಗುವ ಜಾತಿ ಸಮೀಕರಣವೂ ಇದೂ ಸಹ ಬಿಹಾರದಲ್ಲಿ ಗೆಲುವಿನ ಸೂತ್ರವಾಗಿದೆ. ಇದನ್ನೇ ಬಳಸಿ ಆರ್‌ಜೆಡಿಯ ಲಾಲು ಪ್ರಸಾದ್‌ ಯಾದವ್‌ ಬಿಹಾರದಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿದ್ದ ಬಿಹಾರದಲ್ಲಿ1989ರ ಲೋಕಸಭಾ ಚುನಾವಣೆಯ ಬಳಿಕ ಜನತಾದಳ ಹಾಗೂ ಬಿಜೆಪಿ ಪಕ್ಷಗಳು ಮುನ್ನೆಲೆಗೆ ಬಂದಿದ್ದವು. ಇದೇ ವರ್ಷ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯು ಆರ್‌ಜೆಡಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಗಮನಾರ್ಹ ಸ್ಥಾನಗಳನ್ನ ಪಡೆದಿತ್ತು. ಬಳಿಕ 2004ರಲ್ಲಿ ತನ್ನ ಶಕ್ತಿಯನ್ನ ತೋರಿಸಿತ್ತು, ಅಲ್ದೆ 2009ರಲ್ಲಿ ಜೆಡಿಯು ಪ್ರಾಬಲ್ಯ ಮೆರೆದಿತ್ತು.

ಇನ್ನೂ ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜೊತೆಗಿರುವ ಸ್ಥಳೀಯ ಪ್ರಾದೇಶಿಕ ಪಕ್ಷಗಳನ್ನಾ ನೋಡೋದಾದ್ರೆ… ಎಲ್‌ಜೆಪಿ ಅಂದ್ರೆ ಲೋಕ ಜನಸತ್ತಾ ಪಕ್ಷ, ಆರ್‌ಎಲ್‌ಎಸ್‌ಪಿ ರಾಷ್ಟ್ರೀಯ ಲೋಕ ತಾಂತ್ರಿಕ್‌ ಸಮತಾ ಪಾರ್ಟಿ, ಹೆಚ್‌ಎಂಎಸ್ ಅಂದ್ರೆ ಹಿಂದೂಸ್ತಾನ್‌ ಅವಾಮ್‌ ಮೋರ್ಚಾ ಪಕ್ಷಗಳು ಮೋದಿ ತಂಡದಲ್ಲಿವೆ. ಅಲ್ದೆ ಆರ್‌ಜೆಡಿ ಅಂದ್ರೆ ರಾಷ್ಟ್ರೀಯ ಜನತಾದಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ಸಿಪಿಎಮ್‌ ಅಂದ್ರೆ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಲಿಬರೇಷನ್‌, ಭಾರತೀಯ ಕಮ್ಯೂನಿಸ್ಟ್‌ ಪಕ್ಷ ಸೇರಿದಂತೆ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಮಾರ್ಕ್ಸ್‌ವಾದ, ವಿಎಸ್‌ಐಪಿ ಅಂದ್ರೆ ವಿಕಾಸಶೀಲ ಇನ್‌ಸಾನ್‌ ಪಾರ್ಟಿ ಒಳಗೊಂಡಂತೆ ಬಹುತೇಕ ಎಡಪಕ್ಷಗಳು ಕಾಂಗ್ರೆಸ್‌ ನೇತೃತ್ವದ ಮಹಾ ಘಟಬಂಧನ್‌ ಅಂದ್ರೆ ಮಹಾ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿವೆ. ಇನ್ನುಳಿದಂತೆ ಫಾರ್ವರ್ಡ್‌ ಬ್ಲಾಕ್‌, ಎಐಎಂಐಎಂ ಸೇರಿದಂತೆ ಇತರ ಪಕ್ಷಗಳಿದ್ದರೂ ಸಹ ಅವು ಈ ಎರಡು ಅಲೆಯನ್ಸ್‌ನಲ್ಲಿ ಗುರುತಿಸಿಕೊಂಡಿಲ್ಲ.

ಶಾಂತ ಬಿಹಾರದಲ್ಲಿ ಆಕ್ರೋಶದ ಅಲೆ ಎಬ್ಬಿಸ್ತಾರಾ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್..?

ಇನ್ನೂ ಈ ಎರಡು ಕೂಟಗಳಿಗೆ ಪರ್ಯಾಯ ಪ್ರತಿಸ್ಫರ್ಧಿಯಾಗಿ ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ನೇತೃತ್ವದ ಜನ್‌ ಸೂರಾಜ್‌ ಪಕ್ಷವೂ ಈ ಬಾರಿಯ ಬಿಹಾರ ಚುನಾವಣಾ ಅಖಾಡಕ್ಕೆ ಧುಮುಕಲಿದ್ದು, ಇದರಿಂದ ಸಹಜವಾಗಿಯೇ ಇತರ ಪಕ್ಷಗಳ ಮೇಲೆ ಪರಿಣಾಮ ಬೀರಲಿದೆ ಅಂತ ಹೇಳಲಾಗುತ್ತಿದೆ. ಚುನಾವಣೆಗೂ ಕೆಲ ತಿಂಗಳುಗಳ ಮೊದಲೇ ಪಕ್ಷವನ್ನ ಪ್ರಾರಂಭಿಸಿರುವ ಕಿಶೋರ್‌ ತಮ್ಮದೇ ಆದ ಚುನಾವಣಾ ತಂತ್ರಗಾರಿಕೆ ಹಾಗೂ ಕೌಶಲ್ಯತೆಯಿಂದ ದೇಶದ ಚುನಾವಣಾ ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ. ಅಲ್ದೆ ಪ್ರಧಾನಿ ನರೇಂದ್ರ ಮೋದಿ, ನಿತೀಶ್‌ ಕುಮಾರ್‌, ಜಗನ್‌ ಮೋಹನ್‌ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಹಾಗೂ ಆಮ್‌ ಆದ್ಮಿ ಪಕ್ಷಗಳ ಪ್ರಮುಖ ನಾಯಕರು ಅಧಿಕಾರದ ಗದ್ದುಗೆ ಏರಲು ಈ ಪ್ರಶಾಂತ್‌ ಕಿಶೋರ್‌ ಕುಶಲ ರಾಜಕೀಯ ತಂತ್ರಗಾರಿಕೆಯೇ ಕಾರಣವಾಗಿತ್ತು. ಪ್ರಮುಖವಾಗಿ ಬಿಹಾರದಲ್ಲಿ ಆಳವಾಗಿ ಬೇರೂರಿರುವ ಜಾತಿ ಸಮೀಕರಣದ ಆಚೆಗೆ ತಮ್ಮ ರಾಜಕಾರಣ ನಡೆಸಲು ಪ್ರಶಾಂತ್‌ ಕಿಶೋರ್‌ ಮುಂದಾಗಿದ್ದಾರೆ. ಹೀಗಿರುವಾಗ ಯಾವುದೇ ಜಾತಿಯ ಗಟ್ಟಿಯಾದ ತಳಹದಿಯ ಇಲ್ಲದಿದ್ದರೂ ಸಹ ಅವರ ರಾಜಕಾರಣ ಹೇಗೆ ನಡೆಯುತ್ತದೆ ಅನ್ನೋದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಅಲ್ದೆ ಪ್ರಶಾಂತ್‌ ಕಿಶೋರ್‌ ಹೇಳುವಂತೆ ಜಾತಿ ರಹಿತ ರಾಜಕಾರಣ ಮಾಡೋದು ಅಷ್ಟೊಂದು ಸುಲಭವಾದ ಮಾತಲ್ಲ. ಇಡೀ ರಾಜಕೀಯ ವ್ವವಸ್ಥೆಯೇ ಜಾತಿಯಿಂದ ತುಂಬಿ ತುಳುಕುತ್ತಿರುವಾಗ ಇದೆಲ್ಲ ಹೇಗೆ ಸಾಧ್ಯ ಅನ್ನೋದು ಸಾಮಾನ್ಯ ಪ್ರಶ್ನೆಯಾಗಿದೆ. ಒಂದು ವೇಳೆ ನಾವು ಕಾಮನ್‌ ಥಿಂಕ್‌ ಮಾಡಿದಾಗ ಇಲ್ಲಿ ಬ್ರಾಹ್ಮಣ ಸಮುದಾಯದ ಈ ಪ್ರಶಾಂತ್‌ ಕಿಶೋರ್‌ ರಾಜಕೀಯ ಎಂಟ್ರಿಯಿಂದ ಸಹಜವಾಗಿಯೇ ಬಿಜೆಪಿಗೆ ಅದರಲ್ಲೂ ನಿತೀಶ್‌ ಕುಮಾರ್‌ ಅವರಿಗೆ ಹೆಚ್ಚು ಏಟು ಬೀಳುವ ಸಾಧ್ಯತೆಗಳನ್ನ ತಳ್ಳಿ ಹಾಕುವಂತಿಲ್ಲ. ಬಿಜೆಪಿಯ ಮೋಸ್ಟ್‌ ಸ್ಟ್ರಾಂಗೆಸ್ಟ್‌ ವೋಟ್‌ ಬ್ಯಾಂಕ್‌ ಅಂದ್ರೆ ಅದೂ ಬ್ಯಾಹ್ಮಣ ಸಮುದಾಯ, ತಮ್ಮದೇ ಸಮುದಾಯದ ಒಬ್ಬ ವ್ಯಕ್ತಿ ಹೋರಾಟದಲ್ಲಿ ಇದ್ದಾನೆ ಅಂದ್ರೆ ಆಗ ಬ್ರಾಹ್ಮಣರು ಜಾತಿಯನ್ನ ಬಿಡಲಾರರು ಅನ್ನೋ ಲೆಕ್ಕಾಚಾರಗಳು ಇವೆ. ಇನ್ನೊಂದು ಪ್ರಮುಖವಾದ ವಿಚಾರವೆಂದ್ರೆ ಅದು ಈ ಆರ್‌ಜೆಡಿ ವಿಚಾರದಲ್ಲಿ…. ಎಸ್‌.. ಈಗಾಗಲೇ ಪ್ರಶಾಂತ್ ಕಿಶೋರ್‌ ಜಾತಿಯ ಮೇಲೆ ಚುನಾವಣೆ ಎದುರಿಸುವುದಿಲ್ಲ ಅಂತ ಹೇಳಿರೋ ಮಾತಿಗೆ ಬದ್ದರಾಗಿ ನಡೆದರೆ ಅವರಂದುಕೊಂಡಂತೆ ದಲಿತ ಹಾಗೂ ಮುಸ್ಲಿಂ ಸಮೀಕರಣದ ಫಾರ್ಮುಲಾ ವರ್ಕೌಟ್‌ ಆಗಬಹುದು ಎನ್ನಲಾಗುತ್ತಿದೆ. ಯಾಕಂದ್ರೆ ಈ ಮತಗಳು ಈ ಮೊದಲು ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ ಹಾಗೂ ಎನ್‌ಡಿಎ ಪಾಲುದಾರ ಪಕ್ಷಗಳ ನಾಯಕರ ಪಾಲಾಗುತ್ತಲೇ ಬಂದಿದ್ದವು. ಆದರೆ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದರಲ್ಲೂ ಒಬ್ಬ ನಿಪುಣ ರಾಜಕೀಯ ಚಾಣಕ್ಯ ಖುದ್ದು ಬಿಹಾರದ ರಣಾಂಗಣಕ್ಕೆ ಧುಮುಕಿರೋದನ್ನ ನೋಡೊದಾಗ ಈ ಚುನಾವಣೆಯಲ್ಲಿ ಯಾವುದೇ ಕ್ಷಣದಲ್ಲಿ ಎತಹ ರಾಜಕೀಯ ಬದಲಾವಣೆಗಳು ಆಗಬಹುದು ಅನ್ನೋದು ರಾಜಕೀಯ ವಿಶ್ಲೇಷಕರ ಮಾತುಗಳಾಗಿವೆ.

- Advertisement -

Latest Posts

Don't Miss