Political News: ಈಶಾ ಯೋಗ ಕೇಂದ್ರದ ಕಾರ್ಯಕ್ರಮಕ್ಕೆ ಡಿಕೆಶಿ, ಕೈ ನಲ್ಲಿ ಶುರುವಾಯ್ತು ತಳ ಮಳ

ಅಮಿತ್‌ ಶಾ ಜೊತೆ ಡಿಕೆ ಶಿವಕುಮಾರ್‌ ವೇದಿಕೆ ಹಂಚಿಕೆ…
ಈಶಾ ಕಾರ್ಯಕ್ರಮದಲ್ಲಿ ಭಾಗಿ, ಕೈ ಸಿದ್ದಾಂತಗಳ ದುರ್ಬಲಕ್ಕೆ ಕಾರಣ..
ಕೈನಲ್ಲಿ ಆಕ್ಷೇಪ.. ಡಿಕೆ ಡೋಂಟ್‌ ಕೇರ್..‌!
ಡಿಕೆಶಿ ಹಿಂದುತ್ವ ಜಪ ಯಾರಿಗೆ ಸಂದೇಶ..?
ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದೇಕೆ ಡಿಸಿಎಂ ನಡೆ..?
ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ..
ಡಿಕೆಶಿ ಹೇಳಿಕೆ ಹಿಂದೆ ಅಡಗಿದ್ಯಾ ರಾಜಕೀಯ ಲೆಕ್ಕಾಚಾರ..?
ಸಂದೇಶ ರವಾನೆಗೆಂದೇ ವೇದಿಕೆ ಹಂಚಿಕೊಂಡ್ರಾ ಬಂಡೆ..?
ಸಿದ್ದು ಅಹಿಂದ ಅಸ್ತ್ರಕ್ಕೆ ಹಿಂದುತ್ವ ಪ್ರತ್ಯಾಸ್ತ್ರಕ್ಕೆ ಸಜ್ಜಾದ್ರಾ ಡಿಕೆಶಿ..?
ರಾಹುಲ್‌ ಅಪಹಾಸ್ಯ ಮಾಡಿದ್ದ ಜಗ್ಗಿ ವಾಸುದೇವ್..

ರಾಜಕಾರಣದಲ್ಲಿ ಧರ್ಮವಿರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ಮಾತಿದೆ, ಇದು ಈಗಿನ ರಾಜಕೀಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನ ನೋಡಿದರೆ ನಮಗೆ ಗೊತ್ತಾಗುತ್ತೆ. ರಾಜ್ಯದ ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರೂ ಸಹ ಈ ಮಾತನ್ನ ಆಗಾಗ ಹೇಳುತ್ತಿರುತ್ತಾರೆ. ಡಿಕೆ ಹಿಂದೂ ಜಪದ ಹಿನ್ನೆಲೆ ಈಗ ಮತ್ತೆ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆದ ಚುನಾವಣೆಗಳಾದಿಯಾಗಿ ಡಿಕೆಶಿ ಕರ್ನಾಟಕ ಕಾಂಗ್ರೆಸ್‌ಗೆ ಒಂಥರಾ ಆಪದ್ಭಾಂಧವನಂತೆ ಕಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆಯಾಗಿ ಇವರೂ ಸಹ ಶ್ರಮಿಸಿದ್ದಾರೆ. ಪ್ರಮುಖವಾಗಿ ರಾಜಕಾರಣದಲ್ಲಿ ಇರಬೇಕಾದ ಸಂಘಟನಾ ಚತುರತೆ ಕನಕಪುರ ಬಂಡೆ ಅಂದ್ರೆ ಡಿಕೆ ಶಿವಕುಮಾರ್‌ ಅವರಲ್ಲಿ ಯಥೇಚ್ಚವಾಗಿ ಕಂಡು ಬರುತ್ತೆ.

ಇದರ ಫಲವಾಗಿಯೇ ಕಾಂಗ್ರೆಸ್‌ ಈ ಮಟ್ಟಕ್ಕೆ ಸಕ್ಸಸ್‌ ಆಗಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಇಷ್ಟೆಲ್ಲ ಶಕ್ತಿ ಸಾಮರ್ಥ್ಯವನ್ನ ಹೊಂದಿರುವ ಕಟ್ಟಾ ಕಾಂಗ್ರೆಸ್ಸಿಗ ಶಿವಕುಮಾರ್‌ ಇದೀಗ ಕೈ ಕಮಾಂಡ್‌ ನಾಯಕರಿಗೆ ಶಾಕ್‌ ನೀಡ್ತಾರಾ..? ಬಿಜೆಪಿಯ ಜೊತೆ ನಿಧಾನವಾಗಿ ಸಖ್ಯ ಬೆಳೆಸಿಕೊಳ್ಳುತ್ತಿರುವ ಡಿಕೆ ಶಿವಕುಮಾರ್‌ ನಿಜಕ್ಕೂ ಕಮಲ ಪಡೆ ಸೇರ್ತಾರಾ..? ಡಿಕೆ ಹಾಗೂ ಅಮಿತ್‌ ಶಾ ಭೇಟಿಯ ನಡುವೆ ಸದ್ಗುರು ಪಾತ್ರವೇನು..? ಎಂಬೆಲ್ಲ ಇಂಟ್ರೆಸ್ಟಿಂಗ್‌ ಮಾಹಿತಿಯನ್ನ ತಿಳಿಯಲು ತಪ್ಪದೆ ಈ ವಿಡಿಯೋ ಕೊನೆಯವರೆಗೂ ವೀಕ್ಷಿಸಿ…

ಡಿಕೆ ಶಿವಕುಮಾರ್‌ ಪ್ರಸ್ತುತ ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷಗಿರಿಯ ಜೊತೆಗೆ ಡಿಸಿಎಂ ಸ್ಥಾನವನ್ನ ಅನುಭವಿಸುತ್ತಿರುವ ಮಾಸ್‌ ಲೀಡರ್..‌ ಎಸ್..‌ ತಮ್ಮ ಹೆಸರಿನಲ್ಲಿಯೇ ಶಿವನನ್ನ ಇಟ್ಟುಕೊಂಡಿರುವ ಇವರು ಹೇಳಿ ಕೇಳಿ ಅಪಾರ ದೈವಿ ಭಕ್ತರಾಗಿದ್ದಾರೆ. ಅದರಲ್ಲೂ ಮೂರು ಲೋಕದ ಒಡೆಯ ಶಿವನ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಭಕ್ತಿ ಇದೆ.

ತಾವು ಸಂಚರಿಸುವ ಮಾರ್ಗ ಮಧ್ಯದಲ್ಲಿ ಶಿವನ ದೇವಸ್ಥಾನ ಕಂಡರೆ ಸಾಕು! ಅಲ್ಲಿಗೆ ಹೋಗಿ ತಾವೇ ಹೇಳುವಂತೆಯೇ, ಭಗವಂತನಿಗೂ ಹಾಗೂ ಭಕ್ತನಿಗೂ ವ್ಯವಹಾರ ನಡೆಯುವ ಸ್ಥಳ ದೇವಸ್ತಾನ ಎನ್ನುವಂತೆಯೇ ನಮಸ್ಕಾರ ಮಾಡಿ ಸಮಯವಿದ್ದರೆ ಪೂಜೆಯನ್ನ ನೆರವೇರಿಸುತ್ತಾರೆ. ಅಷ್ಟೊಂದು ಅಚಲವಾದ ಭಕ್ತಿ ಡಿಕೆ ಶಿವಕುಮಾರ್‌ ಅವರಲ್ಲಿದೆ ಅಂದ್ರೆ ನಿಜಕ್ಕೂ ‌ನಂಬಲೇಬೇಕು…

ಬಿಜೆಪಿ ನಾಯಕರನ್ನೇ ಮೀರಿಸುತ್ತೆ ಈ ಬಂಡೆಯ ಹಿಂದುತ್ವ..

ಎಸ್..‌ ಯಾವುದೇ ದಂಡಿಗೂ ಹೆದರದ, ದಾಳಿಗೂ ಬೆದರದ ಗಟ್ಟಿ ಗುಂಡಿಗೆಯ ನಾಯಕರಾಗಿ ನಮ್ಮೆಲ್ಲರ ಎದುರು ಪ್ರಸ್ತುತ ರಾಜಕಾರಣದಲ್ಲಿ ಡಿಕೆ ಕಂಡು ಬರುತ್ತಾರೆ. ಸೆಕ್ಯೂಲರ್‌ ಅಂತ ಕರೆಯಿಸಿಕೊಳ್ಳುವ ಕಾಂಗ್ರೆಸ್‌ ಪಕ್ಷದ ಜವಾಬ್ದಾರಿಯನ್ನ ಹೊತ್ತು, ಪಕ್ಷದ ತತ್ವ ಹಾಗೂ ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ ಕುರಿತ ಬಿಜೆಪಿ ನಾಯಕರಲ್ಲಿದ್ದ ಹಿಂದುತ್ವದ ಅದೆಷ್ಟೋ ಪ್ರಶ್ನೆಗಳಿಗೆ ಸ್ವತಃ ಡಿಕೆ ಶಿವಕುಮಾರ್‌ ಅವರೇ ಉತ್ತರವಾಗಿದ್ದಾರೆ ಅನ್ನೋದು ಸದ್ಯ ಎಲ್ಲೆಡೆ ನಡೆಯುತ್ತಿರುವ ಚರ್ಚೆಯಾಗಿದೆ. ಯಾಕಂದ್ರೆ ನಾವಿಲ್ಲಿ ಸೂಕ್ಷ್ಮವಾಗಿ ಡಿಕೆ ಶಿವಕುಮಾರ್‌ ಭಾಗವಹಿಸಿದ್ದ ಈ ಹಿಂದಿನ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನ ನೋಡಿದಾಗ ಅಲ್ಲಿ ಟ್ರಬಲ್‌ ಶೂಟರ್‌ ಶಿವ, ಐ ಮೀನ್‌ ಡಿಕೆಶಿ ತಾನೊಬ್ಬ ಸೆಕ್ಯೂಲರ್‌ ಸಿದ್ದಾಂತದ ಪಕ್ಷದ ಅಧ್ಯಕ್ಷ ಅನ್ನೋದನ್ನೇ ಮರೆತು ಅಷ್ಟೊಂದು ಆಳವಾಗಿ ದೇವರಲ್ಲಿ ತಮ್ಮ ಭಕ್ತಿಭಾವವನ್ನ ಸಮರ್ಪಣೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

ಅಲ್ದೆ ಇತ್ತೀಚೆಗೂ ಸಹ ಅವರು ಜಾಗತಿಕ ಮಟ್ಟದಲ್ಲಿ ನಡೆದ ಐತಿಹಾಸಿಕ ಮಹಾ ಕುಂಭಮೇಳದಲ್ಲೂ ಭಾಗಿಯಾಗುವ ಮೂಲಕ ಪುಣ್ಯ ಸ್ನಾನ ಮಾಡಿಬಂದಿದ್ದಾರೆ. ಇನ್ನೂ ಕುಟುಂಬ ಸಮೇತರಾಗಿ ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಒಂದಲ್ಲ, ಎರಡಲ್ಲ ಬರೊಬ್ಬರಿ ಆರು ಬಾರಿ ಮಿಂದೆದ್ದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ತಮ್ಮ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ರು ಈ ಕನಕಪುರದ ಬಂಡೆ. ಅಲ್ದೆ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನ ಮಾಡಲಾಗಿತ್ತು ಎಂದು ಡಿಕೆ ಶಿವಕುಮಾರ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರವನ್ನ ಹಾಡಿ ಹೊಗಳುತ್ತಲೇ ಇರೋದು ಹಲವು ರೀತಿಯ ಚರ್ಚೆಗಳಿಗೆ ಭಿನ್ನ, ವಿಭಿನ್ನ ಆಯಾಮಗಳನ್ನ ನೀಡುತ್ತಿದೆ.

ಮತ್ತೊಂದು ಇಂಟ್ರೆಸ್ಟಿಂಗ್‌ ವಿಚಾರ ಅಂದ್ರೆ ಗಂಗಾ ನದಿಯಲ್ಲಿನ ನೀರು ಕಲುಷಿತಗೊಂಡಿದೆ ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ್ದ ಡಿಕೆಶಿ, ಇಂಥ ವಿವಾದಗಳ ಭಾಗವಾಗಲು ನನಗೆ ಇಷ್ಟವಿಲ್ಲ ಅನ್ನೋ ಮೂಲಕ ಆ ವಿಚಾರವನ್ನ ಸಾರಾಸಗಟಾಗಿ ತಳ್ಳಿ ಹಾಕಿ ಅಲ್ಲೂ ಸಹ ಗಂಗೆಯ ಪಾವಿತ್ರ್ಯತೆಯನ್ನ ಕಾಪಾಡಿ ಹಿಂದುತ್ವ ಜಪ ಮಾಡಿದ್ದರು

ಇನ್ನೂ ಇದಕ್ಕೂ ಮುನ್ನ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಡಿನ್ನರ್ ಪಾಲಿಟಿಕ್ಸ್ ರಾಜಕೀಯದ ಮಧ್ಯೆ, ಇದೇ ಡಿಕೆ ಶಿವಕುಮಾರ್, ತಮಿಳುನಾಡಿನ ಪ್ರತ್ಯಂಗೀರಾ ಮತ್ತು ಕುಂಭಕೋಣಂ ದೇವಾಲಯಗಳಿಗೆ ಭೇಟಿ ನೀಡಿದ್ದರು. ದೇವಾಲಯದಲ್ಲಿ ಹಲವು ಪೂಜೆ, ಹೋಮ ಹವನಾದಿಗಳನ್ನ ಮಾಡಿದ್ದರು. ಅಲ್ದೆ ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗೆ, ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ ಅಂತ ಆಗ ಡಿಸಿಎಂ ಹೇಳಿಕೊಂಡಿದ್ದರು. ಅಲ್ದೆ ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ಧರ್ಮ, ದೇವರು, ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೊ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಅಂತ ಅವರು ತಮ್ಮ ದೈವೀ ಭಕ್ತಿಯನ್ನ ಬಿಚ್ಚಿಟ್ಟಿದ್ದರು.

ಇದೇ ವಿಚಾರ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಹಗೂ ಡಿಕೆ ನಡುವಿನ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಇನ್ನೂ ಇದಾದ ಬಳಿಕ ದಕ್ಷಿಣ ಕಾಶಿ ಅಂತಲೇ ಖ್ಯಾತಿಯಾಗಿರುವ ಬೆಳಗಾವಿಯ ಐತಿಹಾಸಿಕ ಕಪಿಲೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದ ಡಿಕೆಶಿ ಅಲ್ಲೂ ಸಹ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 111 ಲೀಟರ್ ಹಾಲು ಅರ್ಪಿಸುವ ಮೂಲಕ ವಿಶೇಷ ಪೂಜೆ ಪುನಸ್ಕಾರಗಳನ್ನ ಕೈಗೊಂಡಿದ್ದರು. ಅಲ್ದೆ ನಾನೊಬ್ಬ ದೈವ ಭಕ್ತ. ಪೂಜೆ ಮಾಡಿ, ದೈವಶಕ್ತಿ ನೆನಪಿಸಿಕೊಂಡೇ ಮನೆಯಿಂದ ಹೊರ ಬರುತ್ತೇ‌ನೆ. ಹಾಗಾಗಿ ದೇವಸ್ಥಾನಕ್ಕೆ ಬಂದಿದ್ದೇನೆ. ನಿಮ್ಮಿಂದ ರಕ್ಷಣೆ ಬೇಕಪ್ಪ ಎಂದು ಹೇಳುವ ಮೂಲಕ, ಪರೋಕ್ಷವಾಗಿ ಬೆಳಗಾವಿ ನಾಯಕರಿಂದ ರಕ್ಷಣೆ ಬೇಕು ಅಂತ ಆಗ ಹೇಳಿದ್ದರು.

ಅಚ್ಚರಿಯೆಂದ್ರೆ ಯಾವ ಕಾಂಗ್ರೆಸ್‌ ಪಕ್ಷದ ಸುಪ್ರೀಂ ಅಂತ ಕರೆಯಿಸಿಕೊಳ್ಳುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕುಂಭಮೇಳದ ಕುರಿತು ಅಸಮಾಧಾನಕರ ಹೇಳಿಕೆ ಹೊರಬಿದ್ದ ಬಳಿಕವೇ ಅನ್ನೋದು ಮತ್ತಷ್ಟು ಇಂಟ್ರೆಸ್ಟಿಂಗ್…‌ ಇನ್ನೂ ಕೈ ವರಿಷ್ಠ ನಾಯಕ ಖರ್ಗೆ ಏನು ಹೇಳಿದ್ದರು ಅಂತ ನೋಡೋದಾದ್ರೆ… ಕೇಂದ್ರ ಮಂತ್ರಿ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ದೇಶದ ಬಡತನ ನಿವಾರಣೆಯಾಗಲ್ಲ. ಇದರಿಂದ ಜನರ ಹೊಟ್ಟೆ ತುಂಬುತ್ತದೆಯೆ ಎಂದು ಪ್ರಶ್ನಿಸಿದ್ದರು. ಅಲ್ದೆ ಕೇವಲ ಕ್ಯಾಮೆರಾ ಮುಂದೆ ಫೋಸ್‌ ಕೊಡಲು ಬಿಜೆಪಿ ನಾಯಕರು ಸ್ಪರ್ಧೆಗೆ ಬಿದ್ದವರಂತೆ ಪ್ರಯಾಗರಾಜ್‌ಗೆ ತೆರಳಿ ಸ್ನಾನ ಮಾಡುತ್ತಿದ್ದಾರೆ.

ಜನರ ನಂಬಿಕೆಯನ್ನ ನಾನು ಪ್ರಶ್ನಿಸುವುದಿಲ್ಲ. ದೇಶದಲ್ಲಿ ನೂರಾರು ಸಮಸ್ಯೆಗಳು ಇರುವಾಗ ಬಿಜೆಪಿಗರು ನದಿಯಲ್ಲಿ ಮುಳುಗೇಳುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಅಂತ ಕೇಂದ್ರ ಸಚಿವ ಅಮಿತ್‌ ಶಾ ಗಂಗೆಯಲ್ಲಿ ಸ್ನಾನ ಮಾಡಿದ ಬಳಿಕವಷ್ಟೇ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದರು. ಇದೂ ದೇಶಾದ್ಯಂತ ಬಿಜೆಪಿ ಹಾಗೂ ಹಿಂದೂಪರ ನಾಯಕರಿಂದ ಖರ್ಗೆ ಅವರನ್ನ ವ್ಯಾಪಕವಾಗಿ ಟೀಕೆಗೆ ಗುರಿಯಾಗುವಂತೆ ಮಾಡಿತ್ತು. ಅದರೆ ಇದಕ್ಕೆಲ್ಲ ಡೋಟ್‌ ಅಂದ ಡಿಕೆ ನೇರವಾಗಿ ಪ್ರಯಾಗ್‌ರಾಜ್‌ಗೆ ಇಳಿದೇ ಬಿಟ್ಟಿದ್ದರು ಈ ಮೂಲಕ ಖರ್ಗೆ ಮಾತಿಗೆ ಕೌಂಟರ್‌ ನೀಡಿದ್ದರು. ಕುರ್ಚಿ ಕಿತ್ತಾಟದ ನಡುವೆಯೇ, ಸದಾ ಅಹಿಂದ ಮಂತ್ರ ಜಪಿಸುತ್ತಾ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಅಸ್ತ್ರಕ್ಕೆ ಡಿಕೆ ಶಿವಕುಮಾರ್‌ ಹಿಂದುತ್ವದ ಪ್ರತ್ಯಾಸ್ತ್ರ ಹೂಡುತ್ತಿರುವುದು ಕಾಂಗ್ರೆಸ್‌ನಲ್ಲಿ ಇನ್ನಷ್ಟು ತಳಮಳಕ್ಕೆ ಕಾರಣವಾಗಿದೆ.

ವಿವಾದದ ಕೇಂದ್ರವಾಯ್ತು ಡಿಕೆಶಿ ಭಾಗಿಯಾಗಿದ್ದ ಜಗ್ಗಿ ವಾಸುದೇವ ಕಾರ್ಯಕ್ರಮ….

ಅಂದಹಾಗೆ ಹೇಳಿ ಕೇಳಿ ಬಿಜೆಪಿಯವರಿಗಿಂತ ಹೆಚ್ಚಾಗಿ ನಾನೊಬ್ಬ ಹಿಂದೂ ಅಂತ ತೋರಿಸಿಕೊಳ್ಳಲು ಪೈಪೋಟಿಗೆ ಬಿದ್ದಿರುವ ಡಿಕೆ ಶಿವಕುಮಾರ್‌, ಇತ್ತೀಚಿನ ಕೆಲ ದಿನಗಳಲ್ಲಿ ಪಕ್ಕಾ ಹಿಂದೂತ್ವವಾದಿಯಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇನ್ನೊಂದು ದೊಡ್ಡ ವೇದಿಕೆ ಕಲ್ಪಿಸಿದ್ದು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ನಡೆಸುವ ಮಹಾ ಶಿವರಾತ್ರಿಯ ಜಾಗರಣೆಯ ಬೃಹತ್‌ ಕಾರ್ಯಕ್ರಮ.

ಎಸ್…‌ ಪ್ರತಿ ವರ್ಷದಂತೆ ಈಶಾ ಫೌಂಡೇಶನ್ ಆಯೋಜಿಸುವ ಈ ಕಾರ್ಯಕ್ರಮವು ಈ ಬಾರಿ ತಮಿಳು ನಾಡಿನ ಕೊಯಮತ್ತೂರಿನಲ್ಲಿ‌ ನಡೆದಿತ್ತು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಸದ್ಗುರು ಅವರು ಡಿ ಕೆ ಶಿವಕುಮಾರ್‌ ಅವರನ್ನ ಖುದ್ದಾಗಿ ಭೇಟಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದ್ದರು. ಬಳಿಕ ಈಶಾ ಪೌಂಡೇಶನ್​ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ಫೌಂಡೇಶನ್ ಸಂಸ್ಥೆಯವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ನಾನು ಬರುವ ತನಕ ಕಾದು ನನಗೆ ಇನ್‌ವೈಟ್‌ ಮಾಡಿದ್ದಾರೆ. ಕಳೆದ ಬಾರಿ ನನ್ನ ಮಗಳು ಹೋಗಿದ್ದಳಂತೆ. ಈ ಬಾರಿ ನಾನು ಹೋಗುತ್ತಿದ್ದೇನೆ. ನಾನು ಬಿಜೆಪಿಯವರ ಜೊತೆ ಯಾವುದೇ ಸಂಪರ್ಕ ಇಲ್ಲ. ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನನ್ನ ಮನೆಗೆ ಬಂದು ಆಮಂತ್ರಣ ನೀಡಿದ್ದಾರೆ. ಹೀಗಾಗಿ ನಾನು ಈಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತೇನೆ ಅಂತ ಡಿಕೆ ಶಿವಕುಮಾರ್‌ ಅತ್ಯಂತ ಸಂತಸದಿಂದ ಹೇಳಿಕೊಂಡಿದ್ದರು.

ಯಾವಾಗ ಈ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್‌ ಭಾಗಿಯಾಗಲಿದ್ದಾರೆ ಅನ್ನೊ ಸುದ್ದಿ ಹೊರಬಿತ್ತೋ ಆಗಲೇ ತಮ್ಮ ಸ್ವಪಕ್ಷದಲ್ಲೆ ಅವರು ಆಕ್ಷೇಪಗಳನ್ನ ಎದುರಿಸಬೇಕಾಗಿ ಬಂದರೂ ಸಹ ತಾವು ಅಂದುಕೊಂಡಂತೆ ಡಿಕೆಸಿ ಈಶಾ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಲ್ಲೇ ನೋಡಿ ಇರೋದು ಮೇನ್‌ ಮ್ಯಾಟರ್…‌ ಜಗ್ಗಿ ವಾಸುದೇವ್‌ ನಡೆಸಿಕೊಟ್ಟ ಆ ಕಾರ್ಯಕ್ರಮದಲ್ಲಿ ಕಾಕತಾಳೀಯವೋ ಏನೋ ಗೊತ್ತಿಲ್ಲ, ಬಿಜೆಪಿ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ತಮ್ಮ ಹಾಜರಾತಿಯನ್ನ ದಾಖಲಿಸಿದ್ದರು. ನಾವಿಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಈ ಎರಡೂ ನಾಯಕರುಗಳ ಪಕ್ಷ ಬೇರೆ ಬೇರೆಯಾಗಿದೆ, ಆದರೆ ಅವರು ಭಾಗಿಯಾಗಿದ್ದ ಕಾರ್ಯಕ್ರಮದ ಉದ್ದೇಶ ಮಾತ್ರ ಒಂದೇ ಆಗಿತ್ತು. ಇಬ್ಬರೂ ತಮ್ಮ ತಮ್ಮ ಪಕ್ಷಗಳಲ್ಲಿ ಬಲಿಷ್ಠವಾದ ಸ್ವಂತ ವರ್ಚಸ್ಸನ್ನ ಹೊಂದಿರೋ ಟಾಲೆಸ್ಟ್‌ ಲೀಡರ್‌ಗಳಾಗಿದ್ದಾರೆ ಅನ್ನೋದನ್ನ ನಾವಿಲ್ಲಿ ಮರೆಯಬಾರದು.

ಅಷ್ಟಕ್ಕೂ ಈ ರೀತಿಯಾಗಿ ಎರಡು ರಾಷ್ಟ್ರೀಯ ಪಕ್ಷಗಳ ಉನ್ನತ ನಾಯಕರು ಒಂದೆಡೆ ಸೇರಿ ವೇದಿಕೆ ಹಂಚಿಕೊಳ್ಳುತ್ತಾರಂದ್ರೆ ಅಲ್ಲಿ ಸಮ್‌ಥಿಂಗ್‌ ಟು ಬೀ ಹ್ಯಾಪನ್ನಿಂಗ್‌ ಅನ್ನೋ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡುತ್ತೆ. ಮಧ್ಯದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಹಾಗೂ ಅಕ್ಕ ಪಕ್ಕ ಡಿಕೆ ಶಿವಕುಮಾರ್‌ ಹಾಗೂ ಅಮಿತ್‌ ಶಾ ಕುಳಿತುಕೊಂಡಿದ್ದ ಫೋಟೋ ಎಲ್ಲೆಡೆ ವೈರಲ್‌ ಆಗಿದ್ದಲ್ದೆ, ಇದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕಾರ್ಯಕ್ರಮ ಕೇವಲ ಹೆಸರಿಗಷ್ಟೇನಾ..? ಪರದೆ ಹಿಂದೆ ಉಭಯ ನಾಯಕರು ಯಾವುದಾದರೂ ರಾಜಕೀಯ ದಾಳವನ್ನ ಉರುಳಿಸೋ ಪ್ಲಾನ್‌ ಏನಾದ್ರು ಮಾಡಿದ್ದಾರಾ..? ಅಥವಾ ಡೈರೆಕ್ಟಾಗಿ ಸೋನಿಯಾ ಬಂಟನನ್ನ ಬಿಜೆಪಿ ಮನೆ ತುಂಬಿಸಿಕೊಳ್ಳಲು ಅಮಿತ್‌ ಶಾ ಸಿದ್ದರಾಗಿದ್ದಾರಾ..? ಎಂಬೆಲ್ಲ ಪ್ರಶ್ನೆಗಳಿಗೆ ಈ ಭೇಟಿ ಕಾರಣವಾಗಿದೆ.

ಇಲ್ಲಿ ಒಂದಂತೂ ಸತ್ಯ ಕಳೆದ ಕೆಲ ತಿಂಗಳುಗಳಿಂದ ಕೇಂದ್ರ ಬಿಜೆಪಿ ನಾಯಕರ ವಿಚಾರದಲ್ಲಿ ಸಾಫ್ಟ್‌ ಕಾರ್ನರ್‌ ನಿಲುವನ್ನ ಹೊಂದಿರೋ ಡಿಕೆ ಶಿವಕುಮಾರ್‌ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದರು. ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಬಣ ಬಡಿದಾಟ ನಡೆಯುತ್ತಿರುವಾಗಲೇ ಅವರು ಬಿಜೆಪಿಯ ಬಗ್ಗೆ ಸಹನೀಯ ನಡೆಯನ್ನ ಹೊಂದಿರುವುದನ್ನ ನೋಡಿದಾಗ ಮುಂದಿನ ರಾಜಕೀಯದ ವಿಪ್ಲವಗಳ ಬಗ್ಗೆ ಚರ್ಚೆಗಳನ್ನ ಹುಟ್ಟುಹಾಕುವಂತೆ ಮಾಡಿದೆ.

ಈ ಎಲ್ಲ ಬೆಳವಣಿಗೆಗಳನ್ನ ಗಮನಿಸಿದಾಗ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಈಗಾಗಲೇ ಡಿಕೆ ಶಿವಕುಮಾರ್‌ ಅವರನ್ನ ತಮ್ಮ ತರಹೇವಾರಿ ವ್ಯಾಖ್ಯಾನಗಳಿಂದ ಬಿಜೆಪಿಗೆ ಸೇರಿಸಿಬಿಟ್ಟಿದ್ದಾರೆ. ಅಲ್ದೆ ಇನ್ನು ಕೆಲವರು ಬಿಜೆಪಿಯ ಮುಂದಿನ ಮುಖ್ಯಮಂತ್ರಿಯೆನ್ನುವಂತೆ ಬಿಂಬಿಸಲು ಶುರು ಮಾಡಿದ್ದಾರೆ. ಹೀಗೆ ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ಬದುಕಿನ ಸ್ಟೈಲ್‌ನಲ್ಲಿ, ಅಧಿಕಾರ ಚಲಾಯಿಸುವ ಶೈಲಿಯಲ್ಲಿ ಹಾಗೂ ಈ ರೀತಿಯ ಭೇಟಿಗಳನ್ನ ಮಾಡಿದ್ದರೆ, ಅದು ಜನಸಾಮಾನ್ಯರ ಮೇಲೆ ಎಷ್ಟೊಂದು ಪರಿಣಾಮ ಬೀರಬಹುದು ಅಂತ ನಮಗೆ ಈ ರೀತಿಯ ಅನೇಕ ಬೆಳವಣಿಗೆಗಳು ಹೇಳಿಕೊಟ್ಟಿವೆ ಅಲ್ದೆ ಇದೂ ಸಹ ಅದೇ ಸಾಲಿನದ್ದಾಗಿದೆ.

ಇನ್ನೂ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿ ಮುಖ್ಯಮಂತ್ರಿಯಾಗುವ ಆಸೆಯನ್ನ ಹೊಂದಿರುವ ಡಿಕೆ ಶಿವಕುಮಾರ್‌, ಇದೀಗ ಬಿಜೆಪಿಯ ಅಮಿತ್‌ ಶಾ ಅವರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್‌ ಹೈಕಮಾಂಡ್‌ಗೆ ಪರೋಕ್ಷವಾಗಿ ತಮ್ಮ ಮುಂದಿನ ನಡೆಯನ್ನ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಅಂತಲೇ ಹೇಳಬಹುದು.

ಡಿಕೆ ಭಾಗಿ ಪಕ್ಷದ ಸಿದ್ದಾಂತಗಳ ದುರ್ಬಲಕ್ಕೆ ಕಾರಣ ಎಂದ ಮೋಹನ್..‌

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಇಶಾ ಪೌಂಡೇಶನ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲೇ ಈ ಕುರಿತು ತಮ್ಮ ಪಕ್ಷದಲ್ಲಿ ಅಪಸ್ವರ ಕೇಳಿಬಂದಿತ್ತು. ಈ ಕುರಿತು ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿವಿ ಮೋಹನ್ ಇಶಾ ಫೌಂಡೇಶನ್‌ನ ಮಹಾಶಿವರಾತ್ರಿ ಕಾರ್ಯಕ್ರಮಲ್ಲಿ ಭಾಗಿಯಾಗಿರುವುದಕ್ಕೆ ಟ್ವಿಟ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಹಾಗೂ ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ, ನಮ್ಮ ನಾಯಕ ರಾಹುಲ್ ಗಾಂಧಿಯನ್ನ ಅಪಹಾಸ್ಯ ಮಾಡುವ ಯಾರಿಗಾದರೂ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆ ವ್ಯಕ್ತಪಡಿಸುವುದು ನಮ್ಮ ಪಕ್ಷದ ಸೈದ್ಧಾಂತಿಕ ನೆಲೆಯನ್ನ ದುರ್ಬಲಗೊಳಿಸುತ್ತದೆ ಎಂದು ಆತಂಕ ಹೊರಹಾಕಿದ್ದರು.

ಅಲ್ದೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ರಾಷ್ಟ್ರದ ಭರವಸೆಯ ಸಂಕೇತ, ಅವರ ವಿರುದ್ಧ ಅಪಹಾಸ್ಯ ಮಾಡಿದ ವ್ಯಕ್ತಿ ಜಗ್ಗಿ ವಾಸುದೇವ್ ಮಾತ್ರವಲ್ಲ ಅವರ ಅಭಿಪ್ರಾಯಗಳು ಯಾವಾಗಲೂ ಆರ್‌ಎಸ್‌ಎಸ್‌ನ ಸಿದ್ದಾಂತಕ್ಕೆ ಹೊಂದಿಕೆಯಾಗುತ್ತವೆ. ಈ ರೀತಿಯ ಮನಸ್ಥಿತಿಯವರು ಕರೆಯುವ ಕಾರ್ಯಕ್ರಮಕ್ಕೆ ಹೋಗುವುದು ಅವರಿಗೆ ಧನ್ಯವಾದ ತಿಳಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನ ರವಾನಿಸುತ್ತದೆ ಎಂದು ಡಿಕೆಶಿ ನಡೆಗೆ ಮೋಹನ್ ಟೀಕೆ ಮಾಡಿದ್ದರು.

ಇನ್ನೂ ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ರಾಜಿ ಮಾಡಿಕೊಳ್ಳುವ ಬದಲು ದೃಢನಿಶ್ಚಯಕ್ಕೆ ಬದ್ಧತೆ ಅತ್ಯಗತ್ಯ. ಇದನ್ನ ನಿರ್ಲಕ್ಷಿಸುವುದರಿಂದ ಪಕ್ಷದ ಸೈದ್ಧಾಂತಿಕ ನಿಲುವುಗಳಿಗೆ ನೆಲೆಯೇ ಇರುವುದಿಲ್ಲ. ಈ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಹಿನ್ನೆಲೆಯ ಹಲವು ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಆತಂಕವಾಗಿದೆ. ಅಮಿತ್‌ ಶಾ ಜೊತೆ ಸಮಯ ಕಳೆಯುವುದು ಊಹಿಸುವುದು ಕಷ್ಟ ಎನ್ನುವ ಮೂಲಕ ಮೋಹನ್‌ ಡಿಕೆಶಿ ನಡೆಯನ್ನ ವಿರೋಧಿಸಿದ್ದರು.

ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ..

ಅಲ್ದೆ ಜಗ್ಗಿ ವಾಸುದೇವ್‌ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾತನಾಡಿದ್ದ ಡಿಕ ಶಿವಕುಮಾರ್‌, ನಾನು ಬಿಜೆಪಿಗೆ ಸೇರುವುದಿಲ್ಲ. ಇದು ದುರುದ್ದೇಶಪೂರಿತ ಪ್ರಚಾರವಾಗಿದೆ. ನಾನು ಹುಟ್ಟಿನಿಂದ ಕಾಂಗ್ರೆಸ್ಸಿಗ ಮತ್ತು ನನ್ನ ನಂಬಿಕೆಗಳ ಮೇಲೆ ನಿಂತಿದ್ದೇನೆ. ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಭೇಟಿ ವೇಳೆ, ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸುವಂತೆ ನಾನು ಮನವಿ ಮಾಡಿಲ್ಲ ಇದು ಕಪೋಲಕಲ್ಪಿತ ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಪ್ರಯಾಗರಾಜ್‌ನ ಮಹಾ ಕುಂಭಮೇಳದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ಡಿಕೆ ಶಿವಕುಮಾರ್, ಕುಂಭ ಮೇಳದಲ್ಲಿ ಉತ್ತಮ ಅನುಭವ ಆಗಿದೆ. ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕುಂಭ ಮೇಳದ ವಿಷಯವನ್ನ ರಾಜಕೀಯಗೊಳಿಸುವುದನ್ನ ವಿರೋಧಿಸಿದ್ದರು. ಕುಂಭಮೇಳದಲ್ಲಿ ಭಾಗಿಯಾಗಿದ್ದಕ್ಕಾಗಿ ನಾನು ಬಿಜೆಪಿಗೆ ಹತ್ತಿರ ಆಗುತ್ತಿದ್ದೇನೆ ಎಂದು ಕೆಲವು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಾನು ಹುಟ್ಟು ಕಾಂಗ್ರೆಸ್ಸಿಗ. ಕುಂಭ ಮೇಳಕ್ಕೆ ನಾನು ಭೇಟಿ ಕೊಟ್ಟಿರುವುದು ನನ್ನ ನಂಬಿಕೆ ಇಂತಹ ಊಹಾಪೋಹಗಳು ನನ್ನ ಹತ್ತಿರವೂ ಸುಳಿಯುವುದು ಬೇಡ, ಬಿಜೆಪಿ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದರು.

ಇನ್ನೂ ಇಶಾ ಫೌಂಡೇಶನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮಿತ್ ಶಾ ಜೊತೆಗೆ ಪಾಲ್ಗೊಂಡು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ನಾನು ಎಲ್ಲ ಧರ್ಮಗಳನ್ನ ಗೌರವಿಸುತ್ತೇನೆ. ಮಹಾತ್ಮಾ ಗಾಂಧಿ, ನೆಹರು ಮತ್ತು ಇಂದಿರಾ ಗಾಂಧಿಯವರ ನಾಯಕತ್ವದ ಮೂಲಕ ನೋಡಿದಂತೆ ಕಾಂಗ್ರೆಸ್ ಸಿದ್ಧಾಂತ ಎಲ್ಲರನ್ನೂ ಒಳಗೊಳ್ಳುತ್ತದೆ. ಸೋನಿಯಾ ಗಾಂಧಿ ಯುಗಾದಿ ಆಚರಿಸುತ್ತಾರೆ ಅಂತ ಡಿಕೆ ಶಿವಕುಮಾರ್‌ ಹೇಳುವ ಮೂಲಕ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದರು.

ಸಿದ್ದು ಅಹಿಂದಕ್ಕೆ, ಡಿಕೆಶಿಯ ಹಿಂದುತ್ವ ಕೌಂಟರ್..

ರಾಜಕಾರಣದಲ್ಲಿ ದೂರದೃಷ್ಟಿ ಇರಬೇಕಾದದ್ದು ಅತ್ಯಂತ ಮಹತ್ವದ್ದಾಗಿದೆ. ಅದರಂತೆಯೇ ಆ ರಾಜಕೀಯ ನಾಯಕರ ಬಾಯಿಂದ ಹೊರಬೀಳುವ ಪ್ರತಿಯೊಂದು ಮಾತಿನ ಹಿಂದೆ ಒಂದೊಂದು ಲೆಕ್ಕಾಚಾರ ಇದ್ದೇ ಇರುತ್ತೆ. ಈ ನಾಯಕರು ತಮ್ಮ ಕಣ್ಣಿನ ನೋಟವನ್ನ ಒಂದೆಡೆಯಾಗಿಸಿದರೆ, ಆಲೋಚನೆಯ ಪರಿ ಮತ್ತೊಂದೆಡೆ ಇರುತ್ತೆ. ಹಾಗೆಯೇ ಇಲ್ಲೂ ಸಹ ಡಿಕೆ ಶಿವಕುಮಾರ್‌ ಮಾಡಿರುವುದು ಅದೇ ಅನ್ನೋದು ಕುತೂಹಲ ಮೂಡಿಸಿದೆ. ಎಸ್..‌ ರಾಜಕಾರಣವನ್ನ ಉತ್ಸಾಹದಿಂದಲೇ ಕಾಣುವ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ಪಕ್ಷವನ್ನ 2028ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಮಹದಾಸೆ ಇದೆ. ಅದಕ್ಕಾಗಿಯೇ ಅವರು ಆಗಾಗ ಮುಂದಿನ ಚುನಾವಣೆಯನ್ನ ನನ್ನ ನೇತೃತ್ವದಲ್ಲೇ ನಡೆಸಲಾಗುವುದು ಅಂತ ಪುನರುಚ್ಚರಿಸುತ್ತಿದ್ದಾರೆ.

ಯಾಕಂದ್ರೆ ಡಿಕೆ ಶಿವಕುಮಾರ್‌ ಅವರು ಈಗಾಗಲೇ ಸಿದ್ದರಾಮಯ್ಯ ಬಣದಿಂದ ತಮ್ಮ ಪಕ್ಷದಲ್ಲೇ ವಿರೋಧಕ್ಕೊಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತಾವಂದುಕೊಂಡ ಗುರಿಯನ್ನ ಸಾಧಿಸಲು ಅವರಿಗೆ ಹಿನ್ನಡೆಯಾಗುತ್ತಿದೆ. ಅದರಲ್ಲೂ ಒಂದು ವೇಳೆ ಕೈ ಪಾಳಯದಲ್ಲಿಯೇ ಸ್ವತಃ ತಾವೇ ಬಂಡಾಯವೆದ್ದರೆ ಪಕ್ಷದ ಬಗ್ಗೆ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗುತ್ತೆ. ಅಷ್ಟಕ್ಕೂ ಆಪರೇಷನ್‌ಗೆ ಮುಂದಾದರೆ ಕನಿಷ್ಠ ಶಾಸಕರ ಬೆಂಬಲವಾದರೂ ಸಿಗುವ ಕಾನ್ಪಿಡೆಂಟ್‌ ಅವರಲ್ಲಿಲ್ಲ. ಹೀಗಾಗಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಹಿಂದುತ್ವದ ಮತಗಳನ್ನ ಸೆಳೆಯುವ ವಿಜನ್‌ ಅನ್ನು ಡಿಕೆ ಶಿವಕುಮಾರ್‌ ಹಾಕಿದಂತೆ ಕಂಡು ಬರುತ್ತಿದೆ ಈ ಮೂಲಕ ಸಿದ್ದರಾಮಯ್ಯ ಅವರ ಅಹಿಂದಕ್ಕೆ ಡಿಕೆ ಶಿವಕುಮಾರ್‌ ಹಿಂದುತ್ವದ ಕೌಂಟರ್‌ ನೀಡಿದ್ದಾರೆ.

ಇಲ್ಲಿ ಇನ್ನೊಂದು ಸೂಕ್ಷ್ಮವಾದ ವಿಚಾರವೆಂದ್ರೆ.. ಕಳೆದ ಹಲವು ತಿಂಗಳುಗಳಿಂದ ಪವರ್‌ ಶೇರಿಂಗ್‌ ಬಗ್ಗೆ ನಡೆಯುತ್ತಿರುವ ಹಗ್ಗ ಜಗ್ಗಾಟ, ಟಾಕ್‌ ವಾರ್‌ ಇವೆಲ್ಲವುಗಳನ್ನ ನೋಡಿದಾಗ, ಡಿಕೆ ಶಿವಕುಮಾರ್‌ ಅವರು ಹಾಗೋ ಹೀಗೋ ಮಾಡಿ ಶಾಸಕರನ್ನ ತಮ್ಮ ಬಲೆಗೆ ಬೀಳಿಸಿಕೊಂಡು ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿ ಸಿಎಂ ಗಾದಿ ಏರುತ್ತಿದ್ದರು. ಆದರೆ ಸಿದ್ದರಾಮಯ್ಯ ನೇಮ್‌ ಹಾಗೂ ಫೇಮ್‌ ಇರೋವರೆಗೂ ಅದು ಸಾಧ್ಯವಾಗುವುದಿಲ್ಲ. ಈಗಾಗಲೇ ಒಂದು ಅವಧಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೇಯ ಬಾರಿ ಸಿಎಂ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಯಾವತ್ತೂ ಹಿಂದೆ ಬಿದ್ದಿಲ್ಲ.

ಹೀಗಾಗಿ ಶಾಸಕರೊಂದಿಗಿನ ಸಮನ್ವಯತೆಯು ಹಾಗೂ ಅವರ ಮೇಲಿನ ವಿಶ್ವಾಸಗಳೆಲ್ಲ ಇಂದಿಗೂ ಸಿದ್ದರಾಮಯ್ಯ ಅಲ್ಲಾಡದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ.‌ ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಕೆ.ಎನ್.ರಾಜಣ್ಣ, ಜಮೀರ್‌ ಅಹ್ಮದ್‌ ಖಾನ್‌, ಭೈರತಿ ಸುರೇಶ್ ಹೀಗೆ ಅನೇಕ ನಿಷ್ಠ ಮಂಡಳಿ ಸದಸ್ಯರ ಬೆಂಬಲ ಸಿದ್ದರಾಮಯ್ಯ ಬೆನ್ನಿಗಿರುವುದು ಡಿಕೆ ಶಿವಕುಮಾರ್‌ ಎಲ್ಲೂ ಕದಲದಂತೆ ಮಾಡಿದ್ದರೂ ಸಹ ಅದು ನಿರೀಕ್ಷಿತ ಫಲ ಕೊಡುತ್ತಿಲ್ಲ ಅಂದ್ರೆ ಡಿಕೆಶಿ ಇದನ್ನ ಮೀರಿ ತಮ್ಮದೇ ಆದ ದಾರಿಯಲ್ಲಿ ಸಿಎಂ ಆಗುವ ಪ್ರಯತ್ನ ಮುಂದುವರೆಸಿದ್ದಾರೆ.

ರಾಹುಲ್‌ ಗಾಂಧಿ ಯಾರು ಎಂದಿದ್ದ ಜಗ್ಗಿ ವಾಸುದೇವ್..

ಅಷ್ಟಕ್ಕೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಏನು ಹೇಳಿದ್ದರು ಅನ್ನೋದನ್ನ ನೋಡೋದಾದ್ರೆ… ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ, ನರೇಂದ್ರ ಮೋದಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಯಾವುದರ ಪರವಾಗಿದ್ದಾರೆ? ಕನಿಷ್ಠ ಪಕ್ಷ ನನಗೆ ಅದು ಸ್ಪಷ್ಟವಾಗಿಲ್ಲ. ರಾಹುಲ್ ಗಾಂಧಿ ಯಾರೆಂದು ನನಗೆ ನಿಜವಾಗಿಯೂ ತಿಳಿದಿಲ್ಲ ಏಕೆಂದರೆ ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ನಮಗೆ ತಿಳಿದಿಲ್ಲ ಅಂತ ಸದ್ಗುರು ಸಂದರ್ಶನವೊಂದರಲ್ಲಿ ಅಪಹಾಸ್ಯ ಮಾಡಿದ್ದರು.

ಅಲ್ದೆ ಯಾರಾದರೂ ರಾಜಕೀಯ ಪ್ರಕ್ರಿಯೆಯ ಭಾಗವಾಗಲು ಬಯಸಿದರೆ, ಆ ವ್ಯಕ್ತಿ ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಜನರಿಗೆ ಸ್ಪಷ್ಟವಾಗಿರಬೇಕು ಎಂದು ಜಗ್ಗಿ ವಾಸುದೇವ್‌ ಹೇಳಿದ್ದರು. ಈ ರೀತಿಯ ಮಾತುಗಳೇ ಇದೀಗ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಪಕ್ಷದ ನಾಯಕನ ಬಗ್ಗೆ ಸದ್ಗುರು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಜೀವನವೆಂದರೆ ಅನಂತ ಯಾತ್ರೆ. ಪ್ರತಿ ಕ್ಷಣವೂ ಒಂದು ಅಧ್ಯಾಯವೆಂದ ಡಿಕೆಶಿ..

ಇನ್ನೂ ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಿರಂತರವಾಗಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರಿಗೆ ಟಾಂಗ್‌ ನೀಡಲು ಪ್ರಯತ್ನಿಸುತ್ತಿರುವ ಡಿಕೆ ಶಿವಕುಮಾರ್‌ ಮತ್ತೆ ಕೈ ನಾಯಕರು ಕೆರಳುವಂತೆ ಮಾಡಿದ್ದಾರೆ. ಬದುಕು, ಆಧ್ಯಾತ್ಮದ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಸುದೀರ್ಘ ಮಾತುಕತೆಯಿಂದ ಇಲ್ಲಿ ಜ್ಞಾನವು ನದಿಯಂತೆ ಹರಿಯಿತು, ಅವರ ಪ್ರತೀ ಮಾತುಗಳೂ ತಾರ್ಕಿತ ಸತ್ಯ ಎನಿಸಿದವು. ಜೀವನ, ಆಧ್ಯಾತ್ಮಿಕತೆ ಮತ್ತು ಅದರಾಚೆಗಿನ ನನ್ನ ಸಂದೇಹಗಳು – ಸದ್ಗುರುವಿನ ಸಮ್ಮುಖದಲ್ಲಿ ಅನಾವರಣಗೊಂಡವು, ಅವಕ್ಕೆ ಸೂಕ್ತ ಉತ್ತರಗಳೂ ಸಿಕ್ಕವು. ಸದ್ಗುರು ಅವರ ಮಾತುಗಳಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯದ ಸಂಯೋಜನೆ ಇರುತ್ತೆ.

ಬದುಕಿನ ಒಳಹುಗಳ‌ ಬಗ್ಗೆ ಸುದೀರ್ಘವಾಗಿ ಮಾತನಾಡಿದೆವು. ಗಂಭೀರ ವಿಚಾರಗಳ ಮಧ್ಯೆ, ಹಾಸ್ಯದ ಝಲಕ್ ಗಳು ಮನಸ್ಸಿಗೆ ಹಿತ ನೀಡಿದವು ಎಂದು ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಅಲ್ದೆ ಜೀವನವೆಂದರೆ ಅನಂತ ಯಾತ್ರೆ. ಪ್ರತಿ ಕ್ಷಣವೂ ಒಂದು ಅಧ್ಯಾಯ, ಪ್ರತಿ ನಗುವೂ ಮತ್ತು ಆಲೋಚನೆಯೂ ನಮ್ಮ ಆಂತರಿಕ ಬೆಳಕಿಗೆ ಪೂರಕ. ನಿಜವಾದ ಸಂಪತ್ತು ಅಂದರೆ, ಆಂತರಿಕ ಶಾಂತಿ, ಆತ್ಮ-ಸಾಕ್ಷಾತ್ಕಾರ ಮತ್ತು ಆ ಭಾವನೆ, ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಜೀವಂತವಾಗಿರುವ ಸತ್ಯವಾಗಿದೆ ಎಂದು ಡಿಕೆ ಶಿವಕುಮಾರ್‌ ಬರೆದುಕೊಂಡು ಸದ್ಗುರುವನ್ನ ಹಾಡಿ ಹೊಗಳಿರುವುದು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿರುವುದು ಸುಳ್ಳಲ್ಲ.‌

ಒಟ್ನಲ್ಲಿ.. ರಾಜಕಾರಣ ನಿಂತ ನೀರಲ್ಲ, ಅದು ಹರಿಯೋ ನೀರು, ಹರಿಯುತ್ತಲೇ ಇರುತ್ತೆ. ಅದರಂತೆ ಪಾಲಿಟಿಕ್ಸ್‌ನಲ್ಲಿ ನಡೆಯುವ ಅನೇಕ ಸಣ್ಣ ಸಣ್ಣ ಬೆಳವಣಿಗೆಗಳೂ ಸಹ ಯಾವ ಸಮಯದಲ್ಲಿ, ಯಾವ್ಯಾವ ರೀತಿಯ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತವೆ ಅನ್ನೋದನ್ನ ನಾವು ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ನಮ್ಮ ಅಕ್ಕ ಪಕ್ಕದ ರಾಜ್ಯಗಳ ರಾಜಕೀಯ ಬೆಳವಣಿಗೆಗಳಲ್ಲಿ ನೋಡಿದ್ದೇವೆ. ಇಲ್ಲಿ ಡಿಕೆ ಶಿವಕುಮಾರ್‌ ಅವರನ್ನ ಬಿಜೆಪಿಗೆ ಸೆಳೆಯುವಲ್ಲಿ ಅಲ್ಲಿನ ನಾಯಕರಲ್ಲಿ‌ ಉತ್ಸಾಹವೇನು ಕಂಡು ಬರುತ್ತಿಲ್ಲ.

ಆದರೆ ತಮ್ಮ ಪಕ್ಷದಲ್ಲಿನ ಎಲ್ಲ ಬೆಳವಣಿಗೆಗಳಿಗೆ ಪ್ರತ್ಯುತ್ತರವಾಗಿಯೇ ಡಿಕೆ ಶಿವಕುಮಾರ್‌ ತಾವಾಗಿಯೇ ಬಿಜೆಪಿ ನಾಯಕರೊಂದಿಗೆ ಸಖ್ಯ ಬೆಳೆಸಲು ಮುಂದಾಗಿದ್ದಾರೆ ಅನ್ನೋದು ಸ್ಪಷ್ಟವಾಗುತ್ತೆ. ಈ ಹಿಂದೆ ರಾಜ್ಯದಲ್ಲಿ ನಡೆದಿದ್ದ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣವೊಂದರಲ್ಲಿ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ಮುಸ್ಲಿಂರನ್ನ ನಮ್ಮ ಸಹೋದರರು ಎಂದು ಡಿಕೆ ಶಿವಕುಮಾರ್ ಕರೆದಿದ್ದರು. ಈಗಲೂ ಸಹ ಅವರ ಹೇಳಿಕೆಯು ರಾಜಕೀಯ ಲೆಕ್ಕಾಚಾರದಿಂದಲೇ ಕೂಡಿದ್ದು, ಇದರಿಂದ ಅಂತಿಮವಾಗಿ ಡಿಕೆ ಶಿವಕುಮಾರ್‌ಗೆ ಎಷ್ಟು ಲಾಭವಾಗಲಿದೆ..? ಇದೇ ಹೇಳಿಕೆಯು ಅವರನ್ನ ಸಿಎಂ ಗಾದಿಗೆ ಏರಿಸುತ್ತಾ..? ಅಲ್ದೆ ಅಮಿತ್‌ ಶಾ ಭೇಟಿಯ ಹಿಂದೆ ಡಿಕೆ ಇನ್ಯಾವ ದೊಡ್ಡ ದಾಳ ಉರುಳಿಸಲು ಸಿದ್ದರಾಗಿದ್ದಾರೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

About The Author