Political news: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾ”ಕದಲ್ಲಿ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಅನ್ನೊ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಅನ್ನೊ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ. ಸಂವಿಧಾನದ ಕುರಿತು, ಡಾ ಬಾಬಾ ಸಾಹೇಬರ ಬಗ್ಗೆ, ಅವರ ನೀತಿಗಳನ್ನು ಪಾಲಿಸುತ್ತೇವೆ ಅಂತಾ ಹೇಳುವ ಕಾಂಗ್ರೆಸ್ ಸರ್ಕಾರದ ನಡೆ ಹಿಟ್ಲರ್ ಆಡಳಿತಕ್ಕಿಂತಲೂ ಕಡೆಯಾಗಿದೆ. ವಾಕ್ ಸ್ವತಂತ್ರ ಕಿತ್ತುಕೊಳ್ಳುವುದು ಸಂವಿಧಾನದಲ್ಲಿ ಬರೆದಿದೆಯಾ ಸಿದ್ದರಾಮಯ್ಯನವರೇ? ನಿಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಸಂಕೋಚ ಡಿಕೆ ಶಿವಕುಮಾರ್ ರವರೇ ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ನಿಮ್ಮ ಸರ್ಕಾರದ ದುರಾಡಳಿತವನ್ನು, ಭ್ರಷ್ಟತೆಯನ್ನು, ಸುಭೀಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿದ್ದನ್ನು, ಮಿತಿಮೀರಿದ ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿದರೆ ನಿಮಗೆ ಏಕೆ ಭಯ? ಖಾಸಗಿ ನ್ಯೂಸ್ ಚಾನೆಲ್ ಮುಖ್ಯಸ್ಥರನ್ನು ಬಂಧಿಸಲು ಕರ್ನಾಟಕದ ಪೊಲೀಸರನ್ನು ಕಳುಹಿಸಿರುವುದು ಯಾವ ಸಂದೇಶ ನೀಡುವುದಕ್ಕಾಗಿ? ನಿಮ್ಮ ಸರ್ಕಾರದ ವೈಫಲ್ಯ ಮುಚ್ಚಿಹಿಡಲು, ನಿಮ್ಮ ಆತಂಕ, ದುಗುಡ ಈ ಆದೇಶದಲ್ಲಿ ಭಾಸವಾಗುತ್ತಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ಮಾರ್ಗವನ್ನು ಹಿಡಿದಿರುವಂತೆ ಕಾಣುತ್ತಿದೆ ಸಿದ್ದರಾಮಯ್ಯನವರೇ! ನಿಮ್ಮ ಹತಾಶೆ ನಮಗೆ ಅರ್ಥವಾಗುತ್ತಿದೆ. ಆದರೆ, ಈ ಹಿಟ್ಲರ್ ಆಡಳಿತದ ಪದ್ದತಿ, ಮೊಘಲರ ಆಡಳಿತದ ಪದ್ದತಿಯನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಬಗ್ಗೆ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ವಿಚಾರಗಳನ್ನು ಬಳಸಿಕೊಂಡು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ್ದಕ್ಕಾಗಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಕಳೆದ ಮೇ 20ರಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯಗಳ ಬಗ್ಗೆ ಆರೋಪ ಪಟ್ಟಿ ಎಂಬ ಶೀರ್ಷಿಕೆಯ ಅಡಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿತ್ತು.
ಆದರೆ ಬಿಜೆಪಿಯ ಆರೋಪಗಳನ್ನು ಸುಳ್ಳು ಪ್ರಚಾರ ಎಂದು ಅಲ್ಲಗಳೆದಿರುವ ರಾಜ್ಯ ಸರ್ಕಾರ, ಬಿಜೆಪಿ ವಿರುದ್ಧ ಬೆಂಗಳೂರಿನ 42ನೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿದೆ. ಸರ್ಕಾರವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಸರ್ಕಾರಿ ಅಭಿಯೋಜಕರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು ಉಪ ಕಾರ್ಯದರ್ಶಿ ಗೃಹ- ಕಾನೂನು ಮತ್ತು ಸುವ್ಯವಸ್ಥೆಯ ಕುಮಟಾ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ.
ಅಲ್ಲದೆ, ಈ ಪ್ರಕರಣವನ್ನು ನಿರ್ವಹಿಸಲು 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲ ಬಿಎಸ್ ಪಾಟೀಲ್ ಮತ್ತು ಬೆಂಗಳೂರಿನ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲರಾದ ಶೈಲಜಾ ನಾಯಕ್ ಅವರನ್ನು ನಿಯೋಜಿಸಿದೆ. ಕುಮಟಾ ಪ್ರಕಾಶ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಡಿಪಿಎಆರ್ ಕಾರ್ಯದರ್ಶಿಗೆ ದೂರು ಸಲ್ಲಿಸಲು ಅಧಿಕಾರ ನೀಡಲಾಗಿದೆ. ಈ ಕ್ರಮದ ವಿರುದ್ಧ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.