Political News: ಪಠ್ಯಪುಸ್ತಕ ಮುದ್ರಕರ ಬಾಕಿ ಹಣ ಬಿಡುಗಡೆಗೆ ತಡವಾಗುತ್ತಿರುವ ಬಗ್ಗೆ ಆರ್.ಅಶೋಕ್ ಆಕ್ರೋಶ

Political News: ಪುಸ್ತಕ ಮುದ್ರಣೆ ಮಾಡುವವರಿಗೆ ಹಣ ನೀಡಲು ತಡವಾಗುತ್ತಿರುವ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕುಮಾರಕೃಪಾ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಲು ಹಣ ಇದೆ… ಆದರೆ ಬಡ ಮಕ್ಕಳ ಕೈಗೆ ಪುಸ್ತಕ ತಲುಪಿಸಲು ಶ್ರಮಿಸಿದ ಮುದ್ರಕರ ಬಿಲ್ ಪಾವತಿಸಲು ಹಣವಿಲ್ಲವೇ? ಇದೇನಾ ‘Educationalist By Choice’ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಕ್ಷಣಕ್ಕೆ ನೀಡುವ ಆದ್ಯತೆ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಕುಮಾರಕೃಪಾ ಅತಿಥಿಗೃಹವನ್ನು ಗೃಹ ಕಚೇರಿಯನ್ನಾಗಿ ಮಾಡಿಕೊಳ್ಳುವ ವೈಭೋಗದ ನವೀಕರಣಕ್ಕೆ ಜನರ ತೆರಿಗೆ ಹಣವನ್ನು ಕೋಟಿಗಟ್ಟಲೆ ಸುರಿಯುವ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ, ರಾಜ್ಯದ ಲಕ್ಷಾಂತರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುವ ಪಠ್ಯಪುಸ್ತಕ ಮುದ್ರಕರ ಬಾಕಿ ಹಣ ಪಾವತಿಸಲು ಮಾತ್ರ ಹಣದ ಕೊರತೆ! ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಒಂದು ಬಾಕಿ ಬಿಲ್ಲಿನ ವಿಷಯವಲ್ಲ… ಇದು ಇಡೀ ಶಿಕ್ಷಣ ಕ್ಷೇತ್ರದ ಮೇಲೆ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯದ ಜೀವಂತ ಉದಾಹರಣೆ. 2026-27ನೇ ಶೈಕ್ಷಣಿಕ ಸಾಲಿಗೆ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೋಟ್ಯಂತರ ಪಠ್ಯಪುಸ್ತಕಗಳನ್ನು ಮುದ್ರಕರು ಕೇವಲ 60 ದಿನಗಳ ಅವಧಿಯಲ್ಲಿ, ಹಗಲು-ರಾತ್ರಿ 3-4 ಪಾಳಿಯಲ್ಲಿ ಕೆಲಸ ಮಾಡಿ ಸಿದ್ಧಪಡಿಸಿದ್ದಾರೆ.

ಕಾಗದ, ಮುದ್ರಣ, ಕಾರ್ಮಿಕ ವೆಚ್ಚ ಎಲ್ಲವನ್ನೂ ಭರಿಸಿ, ಜಿಎಸ್‌ಟಿ ಪಾವತಿಸಿ ಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿದ ಮುದ್ರಕರಿಗೆ ಇಂದು ಅವರದೇ ಹಣಕ್ಕಾಗಿ ಕಚೇರಿ ಕಚೇರಿ ಅಲೆದಾಡುವ ಪರಿಸ್ಥಿತಿ! ಹಣಕಾಸು ಇಲಾಖೆ ಮೊದಲ ಬಿಲ್‌ನ ಶೇ.80ರಷ್ಟು ಮೊತ್ತ ಬಿಡುಗಡೆಗೆ ಒಪ್ಪಿಗೆ ನೀಡಿದ್ದರೂ, ಶಿಕ್ಷಣ ಇಲಾಖೆಯಲ್ಲಿ ಕಡತಗಳು ಏಕೆ ನಿಂತಿವೆ? ಈ ವಿಳಂಬಕ್ಕೆ ಕಾರಣವೇನು? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ. 

ಮುಖ್ಯಮಂತ್ರಿಗಳೇ, ಶಿಕ್ಷಣ ಕ್ಷೇತ್ರ ನಮ್ಮ ಆದ್ಯತೆ ಎಂದು ಹೇಳಿಕೊಳ್ಳುವ ನಿಮ್ಮ ಸರ್ಕಾರದಲ್ಲಿ, ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯವಾದ ಪಠ್ಯಪುಸ್ತಕಗಳ ಪೂರೈಕೆಯಲ್ಲಿ ಇಂತಹ ಗೊಂದಲ ಏಕೆ? ಬಡ ಮಕ್ಕಳ ಶಿಕ್ಷಣದ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡಬೇಕಾದ ಸಮಯದಲ್ಲಿ, ಸರ್ಕಾರದ ವೆಚ್ಚಗಳ ಆದ್ಯತೆಗಳ ಬಗ್ಗೆ ಜನರಲ್ಲಿ ಸಹಜ ಪ್ರಶ್ನೆಗಳು ಮೂಡುತ್ತಿವೆ. ತಕ್ಷಣವೇ ಪಠ್ಯಪುಸ್ತಕ ಮುದ್ರಕರ ಬಾಕಿ ಹಣ ಬಿಡುಗಡೆ ಮಾಡಿ. ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ. ಬಡ ಮಕ್ಕಳ ಶಿಕ್ಷಣದ ಜೊತೆ ಯಾವುದೇ ರಾಜಕೀಯ ನಿರ್ಲಕ್ಷ್ಯ ಬೇಡ ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author