Bengaluru News: ಬೆಂಗಳೂರು: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 50000 ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಖರೀದಿಗೆ ಸಮ್ಮತಿಸಿದ್ದು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಪ್ರಮುಖ ಆಹಾರ ಪದಾರ್ಥಗಳಲ್ಲಿ ಅಕ್ಕಿಯೂ ಸೇರಿದೆ. ಕರ್ನಾಟಕ ಅಧಿಕ ಭತ್ತ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಉತ್ಪಾದಿಸುತ್ತಿದೆ. ಹಾಲಿ ರಾಜ್ಯದಲ್ಲಿ 48.91 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನಾ ಸಾಮರ್ಥ್ಯವಿದ್ದು ಆದರೆ ಕೇಂದ್ರದಿಂದ ಬೆಂಬಲ ಬೆಲೆಯೊಂದಿಗೆ ಕೇವಲ 1.5 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಮದ್ಯ ಪ್ರವೇಶಿಸಿ 2024-25ನೇ ಸಾಲಿನಲ್ಲಿ ಬೆಂಬಲ ಬೆಲೆಯೊಂದಿಗೆ ಕನಿಷ್ಠ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ನಿರ್ದೇಶನ ನೀಡುವಂತೆ ಕೃಷಿ ಸಚಿವರು ಎನ್.ಚಲುವರಾಯಸ್ವಾಮಿರವರು ದಿನಾಂಕ 13-12-2024ರಂದು ಪತ್ರ ಬರೆದು ಮನವಿ ಮಾಡಿದರು.
ಇದಕ್ಕೆ ಸ್ಪಂದನೆ ನೀಡಿರುವ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಸಾರ್ವಜನಿಕ ವಿತರಣೆ ಮತ್ತು ಹೊಸ ನವೀಕರಿಸಬಹುದಾದ ಇಂಧನ ಸಚಿವಾಲಯ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಸೂಕ್ತ ಕ್ರಮ ವಹಿಸುವಂತೆ ರಾಜ್ಯದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಇಲಾಖೆ ಕಾರ್ಯದರ್ಶಿರವರಿಗೆ ನಿರ್ದೇಶನ ನೀಡಿದೆ.