Political News: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿದ್ದ ಮುಡಾ ಹಗರಣದಲ್ಲಿ ತನಗೆ ಯಾವುದೇ ತನಿಖೆಯನ್ನು ಕೈಗೊಳ್ಳಲು ಆಗುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಇ.ಡಿ. ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ. ಇನ್ನೂ ಪ್ರಮುಖವಾಗಿ ಈ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾಗಿದ್ದ ಸಮನ್ಸ್ ವಜಾಗೊಂಡಿರುವ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ತನಿಖೆಯೇ ನಿಂತು ಬಿಟ್ಟಿದೆ ಎಂದು ಹೇಳಿಕೊಂಡಿದೆ.
ಇನ್ನೂ ಮುಡಾ ಮಾಜಿ ಆಯಕ್ತ ಡಿ.ಬಿ. ನಟೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ಮಾಡಲಾಗಿದ್ದ ಸಮನ್ಸ್ ಅನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಇ.ಡಿ. ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು.
ನಾವು ಪ್ರಮುಖ ಆರೋಪಿಗೆ ಸಮನ್ಸ್ ನೀಡಲು ಬರುವುದಿಲ್ಲ..
ಈ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ಎಸ್.ವಿ.ರಾಜು , ಹೈಕೋರ್ಟ್ ನಮ್ಮಿಂದ ನಟೇಶ್‌ಗೆ ಜಾರಿ ಮಾಡಲಾಗಿದ್ದ ಸಮನ್ಸ್ ರದ್ದುಗೊಳಿಸಿರುವುದರಿಂದ, ಇದೇ ಆದೇಶದ ಮೇಲೆ ಪ್ರಮುಖ ಆರೋಪಿ ಪಾರ್ವತಿ ಅವರಿಗೂ ನೀಡಲಾಗಿದ್ದ ಸಮನ್ಸ್ ಅನ್ನೂ ಸಹ ಹೈಕೋರ್ಟ್ ರದ್ದು ಮಾಡಿದೆ. ಅಲ್ಲದೆ ಇನ್ನು ಮುಂದೆ ನಾವು ಪಾರ್ವತಿಯವರಿಗೆ ಯಾವುದೇ ಸಮನ್ಸ್ ನೀಡಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. ಇನ್ನೂ ನಟೇಶ್ ಅವರಂತೆಯೇ ಭವಿಷ್ಯದಲ್ಲಿ ಹಲವು ಪ್ರಕರಣಗಳ ಆರೋಪಿಗಳಿಗೆ ನ್ಯಾಯಾಲದಿಂದ ಲಾಭವಾಗುವಂತೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಿಎಂಎಲ್‌ಎ ಕಾಯ್ದೆಯ ವ್ಯಾಖ್ಯಾನವೇ ಬೇರೆ..!
ಇನ್ನೂ ನ್ಯಾಯಾಲಯದ ಈ ಆದೇಶವು ನಮ್ಮ ಕೈಗಳನ್ನು ಲಾಕ್ ಮಾಡಿದಂತಾಗಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮುಂದಿನ ವಿಚಾರಣೆ ಹೇಗೆ ಸಾಧ್ಯವಾಗಲಿದೆ..? ಆರೋಪಿಗಳ ಹೇಳಿಕೆ ಪಡೆದು ಬಳಿಕ ತನಿಖೆಯನ್ನು ನಡೆಸಬೇಕು. ಅಂದಾಗ ಮಾತ್ರ ಇ.ಡಿ.ತನ್ನ ಸ್ವತಂತ್ರ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿನ ಸೆಕ್ಷೆನ್ 17ರ 1 ಮತ್ತು 2ನೇ ಭಾಗಗಳ ಬಗ್ಗೆ ಭಿನ್ನವಾಗಿ ಹೇಳಲಾಗಿದೆ ಎಂದು ರಾಜು ತಮ್ಮ ವಾದ ಮಂಡಿಸಿದರು.
ಹಣ ಅಕ್ರಮ ವರ್ಗಾವಣೆಯಾಗಿರುವುದು ಸ್ಪಷ್ಟ..
ಅಂದಹಾಗೆ ಮುಡಾ ಹಗರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಸೈಟ್‌ಗಳನ್ನು ಪ್ರಭಾವಿಗಳಿಗೆ ಹಸ್ತಾಂತರಗೊಳಿಸುವಲ್ಲಿ ಆರೋಪಿತ ಅಧಿಕಾರಿಯ ಪಾತ್ರ ನೇರವಾಗಿದೆ. ಅಲ್ಲದೆ ಇದರಲ್ಲಿ ಅಕ್ರಮ ಹಣದ ವರ್ಗಾವಣೆಯು ನಡೆದಿದೆ. ಮುಡಾದಿಂದ ನೀಡಲಾಗಿರುವ ನಿವೇಶನಗಳೆಲ್ಲ ಅಪರಾಧದ ಭಾಗವಾಗಿವೆ. ಈ ಪ್ರಕರಣವು ಮುಟ್ಟುಗೋಲು ಹಾಗೂ ಶೋಧನಾ ಹಂತದಲ್ಲಿರುವುದರಿಂದ ಆರೋಪಿಗಳ ಬಂಧನದ ಪ್ರಕ್ರಿಯೆಯು ಸದ್ಯದಲ್ಲಿ ಇಲ್ಲ. ಬದಲಿಗೆ ಅದು ನಂತರದಲ್ಲಿ ನಡೆಯಲಿದೆ. ಆದರೆ ತನಿಖೆಯು ನಡೆಯುತ್ತಿರುವಾಗ ಕೋರ್ಟ್‌ಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ರಾಜು ಹೈಕೋರ್ಟ್ ಗನಮಕ್ಕೆ ತಂದರು.