Political News: ಮೈಸೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜತೆ ಮಾತನಾಡಿದ್ದು, ಮಹಿಳಾ ಮೀಸಲಾತಿ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.
ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ. ಸ್ಥಳೀಯ ಸಂಸ್ಥೆಗಳಲ್ಲಿ 50% ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್ ಸರ್ಕಾರವೇ. 2023 ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಆಗಲೇ ಅದನ್ನು ಜಾರಿ ಮಾಡಬೇಕಿತ್ತು, ಇಲ್ಲಿಯವರೆಗೆ ಏಕೆ ಕಾಯಬೇಕಿತ್ತು? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಿದ್ದರು. ನಾನು ಮಹಿಳಾ ಮೀಸಲಾತಿಯ ಪರವಾಗಿದ್ದೇನೆ ಎಂದು ತಿಳಿಸಿದ್ದೆ. ಮಹಿಳಾ ಮೀಸಲಾತಿ ಮಸೂದೆಯ ವಿಚಾರದಲ್ಲಿ ಪ್ರಧಾನಿಗಳ ಟೀಕೆ ರಾಜಕೀಯ ಲಾಭದ ಲೆಕ್ಕಾಚಾರದಿಂದ ಕೂಡಿದೆ. ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದು ಸಿಎಂ ಹೇಳಿದ್ದಾರೆ.
ಅವರು ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮಹಿಳಾ ಮೀಸಲಾತಿ ಏಕೆ ಜಾರಿಮಾಡಲಿಲ್ಲ? ಈಗಲೂ 2023ರ ಪ್ರಕಾರ ಜಾರಿ ಮಾಡಲಿ. ಕ್ಷೇತ್ರ ಮರು ವಿಂಗಡನೆಯನ್ನು ಜನಗಣತಿಯಾದ ನಂತರ ಮಾಡಿದರೆ ಸೂಕ್ತ. ಲೋಕಸಭಾ ಸ್ಥಾನಗಳನ್ನು ಶೇಕಡ 50% ರಷ್ಟು ಹೆಚ್ಚು ಮಾಡುವುದಾಗಿ ಹೇಳಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಗಣತಿ ಮಾಡಿ ಎಲ್ಲರಿಗೂ ಸಮಾನವಾಗಿ ಸ್ಥಾನಗಳನ್ನು ಕೊಡಬೇಕು ಎಂದು ಸಿಎಂ ಹೇಳಿದರು.
ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಪ್ರಧಾನಿಗಳು ನಮ್ಮ ವಿರುದ್ಧ ರಾಜಕೀಯ ಭಾಷಣ ಮಾಡುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ಗೊತ್ತಿದ್ದೂ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆ ಮಸೂದೆಯನ್ನು ಒಟ್ಟಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




