Political News: ಈ ದ್ವೇಷ ರಾಜಕೀಯಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್ ಸರ್ಕಾರ. ಹಲವಾರು ದಶಕಗಳಿಂದಲೂ, ಸ್ವಾತಂತ್ರ್ಯ ಬಂದಾಗಿನಿಂದಲ್ಲೂ ಉತ್ತಮ ಆಡಳಿತವನ್ನು ಬೇರೆ ಬೇರೆ ಸರ್ಕಾರಗಳು ನಮ್ಮ ರಾಜ್ಯಕ್ಕೆ ನೀಡಿವೆ. ಆದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ದ್ವೇಷದ ರಾಜಕಾರಣಕ್ಕೆ ಸೊಪ್ಪು ಹಾಕಿರಲಿಲ್ಲ. ಈಗ ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಬರೀ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಅವರು ಕೇತಗಾನಹಳ್ಳಿ ಜಮೀನಿನ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು 1985ರಲ್ಲಿ ಚಲನಚಿತ್ರ ವಿತರಕರಾಗಿ ದುಡಿದ ಹಣದಲ್ಲಿ ಆ ಜಮೀನು ಖರೀದಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿಯೇ ಕಳೆದ ಎರಡು ವರ್ಷಗಳಿಂದ ಟಾರ್ಗೆಟ್ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ನಾವೂ ಕಾನೂನು ಹೋರಾಟ ನಡೆಸುತ್ತೇವೆ. ಕಾನೂನಿಗೆ ಯಾರೇ ಆಗಲಿ ತಲೆ ಬಾಗಬೇಕು ಎಂದು ಹೇಳಿದ್ದಾರೆ. ಅಲ್ಲದೆ ಈ ಸರ್ಕಾರದಲ್ಲಿ ಎಸ್ ಐ ಟಿ, ಲೋಕಾಯುಕ್ತವನ್ನು ಮಿಸ್ ಯೂಸ್ ಮಾಡಿಕೊಂಡ ನಿದರ್ಶನಗಳು ಸಾಕಷ್ಟು ಇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಪ್ರಶ್ನೆ ಮಾಡುವವರು ಯಾರೂ ಇಲ್ಲ..
ಇತ್ತೀಚಿಗೆ ಬಿಜೆಪಿಯ ಒಬ್ಬ ವಿಧಾನಪರಿಷತ್ ಸದಸ್ಯರು ಸದನದಲ್ಲಿ ಸಚಿವೆಯೊಬ್ಬರಿಗೆ ಅವಹೇಳನ ಮಾಡಿದ್ದರು ಎನ್ನುವ ಆರೋಪ ಹೊರಿಸಿದ್ದರು. ಆದರೆ ಅದೇ ಶಿವಮೊಗ್ಗದಲ್ಲಿ ಭದ್ರಾವತಿಯ ಶಾಸಕರ ಮಗ ಒಬ್ಬ ಮಹಿಳಾ ಅಧಿಕಾರಿಗೆ ಯಾವ್ಯಾವ ರೀತಿ ಪದ ಬಳಕೆ ಮಾಡಿದ್ದಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಅದನ್ನು ಪ್ರಶ್ನೆ ಮಾಡುವವವರು ಯಾರೂ ಇಲ್ಲ, ಇನ್ನೂ ಒಬ್ಬ ಶಾಸಕನನ್ನು ಏಳೆಂಟು ಸ್ಟೇಷನ್‌ಗಳಿಗೆ ಒಂದು ರಾತ್ರಿಯಲ್ಲಿ ಅಲೆದಾಡಿಸಿರುವುದನ್ನು ಈ ರಾಜ್ಯದಲ್ಲಿ ಯಾರೂ ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ನನಗೆ ಪೆನ್ನು, ಪೇಪರ್ ಕೊಡಿ. ಈ ರಾಜ್ಯದ ಜನರ ಸೇವೆಗೆ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಿ ಕೇಳಿಕೊಂಡಿದ್ದರು. ಅದರಂತೆ 6 ಜನ ಶಾಸಕರನ್ನು ಕೊಟ್ಟಿದ್ದಾರೆ. ಅಲ್ಲದೆ ಡಿಸಿಎಂ ಅವರು ಮಂಡ್ಯ ಜನರು ಛತ್ರಿ ಎಂಬ ಹೇಳಿಕೆಗೆ ಈ ಜಿಲ್ಲೆಯ ಒಬ್ಬ ಮಹಾನ್ ನಾಯಕರು ಹಾಗೂ ಪ್ರಭಾವಿ ಶಾಸಕರೊಬ್ಬರು ಛತ್ರಿ ಅಂದ್ರೆ ಏನು ಅನ್ನೋದರ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಛತ್ರಿ ಅಂದರೆ ಅತ್ಯಂತ ಬುದ್ದಿವಂತರು, ಪ್ರಬುದ್ಧ ಜನರಿಗೆ ಹೇಳುವ ಪದವಾಗಿದೆ ಅಂತ ವಿಶ್ಲೇಷಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಉದಯ್‌ಗೆ ನಿಖಿಲ್ ಟಾಂಗ್ ನೀಡಿದ್ದಾರೆ. ಅಲ್ಲದೆ ಹಿಮಾಚಲದಲ್ಲಿ ಗ್ಯಾರಂಟಿ ಕೊಟ್ಟು ಅಲ್ಲಿನ ಸರ್ಕಾರ ಆರ್ಥಿಕ ದಿವಾಳಿಯಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಅದೇ ಪರಿಸ್ಥಿತಿ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.