Political News: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ನಲುಗಿಹೋಗಿರುವ ರಾಜ್ಯಕ್ಕೆ ಇದೀಗ ಮತ್ತೊಂದು ಬರೆಯನ್ನು ಸಿದ್ದರಾಮಯ್ಯ ಸರ್ಕಾರ ಎಳೆದಿದ್ದಾರೆ. ಇಷ್ಟು ದಿನ ಶಾಸಕ, ಸಚಿವರ ವೇತನ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದಿದ್ದ ಸರ್ಕಾರ ದಿಢೀರ್ ಆಗಿ ಇಂದು ಸಿಎಂ, ಸಚಿವರು, ವಿಧಾನ ಮಂಡಲ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರೆಲ್ಲರ ಈಗಿರುವ ವೇತನವನ್ನು ದುಪ್ಪಟ್ಟುಗೊಳಿಸುವ ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2025ನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಇನ್ನೂ ಆರ್ಥಿಕ ವಿಚಾರದ ವಿಧೇಯಕವಾದ ಕಾರಣ ಸರ್ಕಾರ ಬುಧವಾರವಷ್ಟೇ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಅಲ್ಲದೆ ಬಳಿಕ ಮರುದಿನ ರಾಜ್ಯಪಾಲರು ಈ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದರು. ಇಂದು ವಿಧಾನಸಭೆಯಲ್ಲಿ ಹಾಗೂ ವಿಧಾನ ಪರಿಷತ್‌ನಲ್ಲಿ ವಿಧೇಯಕ ಮಂಡಿಸುವ ಮೂಲಕ ಅನುಮೋದನೆಗೆ ಸರ್ಕಾರ ಮುಂದಾಗಿತ್ತು. ಅದರಂತೆ ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿದ್ದು, ವಿಧಾನ ಪರಿಷತ್‌ನಲ್ಲೂ ಮಂಡನೆಯಾಗಿ ಅನುಮೋದನೆ ಪಡೆಯಲಿದೆ. ಅಂದಹಾಗೆ ನೂತನ ತಿದ್ದುಪಡಿಯ ಮೂಲಕ ಶಾಸಕರು, ಸಚಿವರಿಗೆ ಹಾಗೂ ಮಾಜಿ ಶಾಸಕರಿಗೆ ವೇತನ ದೊರೆಯಲಿದೆ ಎಂದು ನೋಡುವುದಾದರೆ. ಶಾಸಕರ ವೇತನದಲ್ಲಿ 40 ಸಾವಿರ ರೂಪಾಯಿಗಳಿಂದ 80 ಸಾವಿರಕ್ಕೆ ಏರಿಕೆಯಾಗಲಿದೆ. ಅಲ್ಲದೆ ವಿಧಾನಸಭಾಧ್ಯಕ್ಷರ ಹಾಗೂ ವಿಧಾನ ಪರಿಷತ್ ಸಭಾಪತಿಗಳ ವೇತನವು 75 ಸಾವಿರದಿಂದ 1 ಲಕ್ಷ 25 ಸಾವಿರ ರೂಪಾಯಿಗಳಷ್ಟಾಗಲಿದೆ. ಇನ್ನೂ ಮುಖ್ಯಮಂತ್ರಿಗಳ ವೇತನ 75 ಸಾವಿರಗಳಿಂದ 1 ಲಕ್ಷ 50 ಸಾವಿರದವರೆಗೆ, ಸಚಿವರಿಗೆ 60 ಸಾವಿರಗಳಿಂದ 1 ಲಕ್ಷ 25 ಸಾವಿರ ರೂಪಾಯಿಗಳಷ್ಟು ಏರಿಕೆಯಾಗಲಿದೆ.
ಸರ್ಕಾರಕ್ಕೆ ಬೀಳಲಿದೆ ಬರೊಬ್ಬರಿ 62 ಕೋಟಿ ರೂ ಹೊರೆ..
ಸಚಿವರು, ಶಾಸಕರ ವೇತನ ಹೆಚ್ಚಳದಿಂದ ಸರ್ಕಾರಕ್ಕೆ 62 ಕೋಟಿ ರೂ. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ. ಕಳೆದ ಬಿಜೆಪಿ ಸರ್ಕಾರ 2022ರಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಿತ್ತು. ಆಗ ಮಂಡಿಸಲಾಗಿದ್ದ ತಿದ್ದುಪಡಿ ವಿಧೇಯಕದಲ್ಲಿ ಬೆಲೆ ಸೂಚ್ಯಂಕ ಆಧಾರದಲ್ಲಿ 2023ರ ಏಪ್ರಿಲ್ 1ರಿಂದ 5 ವ ವರ್ಷಕ್ಕೊಮ್ಮೆ ವೇತನ ವೇತನ ಹೆಚ್ಚಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದೀಗ 2 ವರ್ಷ ಪೂರ್ಣವಾಗುವ ಮೊದಲೇ ಸರ್ಕಾರ ಶಾಸಕರ ವೇತನ ಹೆಚ್ಚಳ ಮಾಡಿದೆ. ಈ ಮೂಲಕ ಇನ್ನಷ್ಟು ಆರ್ಥಿಕ ಹೊರೆಯನ್ನು ಅನುಭವಿಸಲಿದೆ.
ಇನ್ನೂ ಸಾಮಾನ್ಯ ಜನರಂತೆಯೇ ಸಚಿವರು, ಶಾಸಕರ ಖರ್ಚು ಕೂಡ ಹೆಚ್ಚಾಗುತ್ತಿದೆ. ಸಾಮಾನ್ಯ ಮನುಷ್ಯ ಕೂಡ ಬೆಲೆ ಏರಿಕೆಯಿಂದ ಬಳಲುತ್ತಿದ್ದಾನೆ, ಇದಕ್ಕೆ ಶಾಸಕರೂ ಹೊರತಲ್ಲ. ಆದ್ದರಿಂದ, ಶಾಸಕರು ಮತ್ತು ಇತರರಿಂದ ಶಿಫಾರಸುಗಳು ಬಂದಿವೆ, ಮತ್ತು ಅದಕ್ಕಾಗಿಯೇ ಮುಖ್ಯಮಂತ್ರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಇತರ ಸಚಿವರು ಸಮರ್ಥಿಸಿಕೊಂಡಿದ್ದಾರೆ.
ತಾವು ಮಾಡಿದ್ದ ನಿಯಮವನ್ನು ತಾವೇ ಮಾಡಿದ್ದ ಶಾಸಕರು..
ಇನ್ನೂ ಈ ಬಾರಿ ಇದ್ದ ಬೇಡಿಕೆಯಂತೆಯೇ ಈ ಹಿಂದೆ 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ 2022 ಹಾಗೂ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಹಾಗೂ ಭತ್ಯೆಗಳ ತಿದ್ದುಪಡಿ ಮಸೂದೆ 2022 ಅಂದಿನ ವಿಧಾನಸಭೆಯಲ್ಲಿ ಜಾರಿಗೆ ಬಂದಿತ್ತು. ಅಲ್ಲದೆ 2022ರ ಏಪ್ರಿಲ್ 1 ರಿಂದ ಈ ವೇತನ ಹೆಚ್ಚಳ ಜಾರಿಗೆ ಬಂದಿತ್ತು. ಈ ತಿದ್ದುಪಡಿಯಂತೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ವೇತನದಲ್ಲಿ ಶೇ 60ರಷ್ಟು, ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ ಶೇ50, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿ ಶೇ50 ರಷ್ಟು ಜಾಸ್ತಿಯಾಗಿತ್ತು. ಅಲ್ಲದೆ ಆಗ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು.
ಒಟ್ನಲ್ಲಿ.. 2022ರ ಕಾಯ್ದೆ ಪ್ರಕಾರ, ಮುಂದಿನ ಅವಧಿಯಲ್ಲಿ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ವಿಧಾನಪರಿಷತ್ ಸಭಾಪತಿ, ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ನಿಗದಿತವಾಗಿ ಐದು ವರ್ಷಗಳಿಗೊಮ್ಮೆ ನಡೆಸುವಂತೆ ನಿಯಮ ರೂಪಿಸಲಾಗಿತ್ತು. ಅದರೆ ಇದೀಗ ತಮ್ಮ ಸಂಬಳವನ್ನು ಹೆಚ್ಚಳ ಮಾಡಿಕೊಂಡು ತಾವೇ ತಂದ ನಿಯಮಗಳನ್ನು ಮುರಿಯುವ ಸ್ಥಿತಿಗೆ ಶಾಸಕರು ಹಾಗೂ ಮಂತ್ರಿಗಳು ತಲುಪಿರುವುದು ನಿಜಕ್ಕೂ ಶೋಚನೀಯವಾಗಿದೆ. ಅದೇನೆ ಇರಲಿ.. ಕಾನೂನುಗಳನ್ನು ರೂಪಿಸುವವರೇ ಅವುಗಳನ್ನು ಉಲ್ಲಂಘಿಸಿದರೆ, ಇನ್ನೂ ಜನಸಾಮಾನ್ಯರಿಂದ ಹೇಗೆ ಕಾನೂನು ಪಾಲನೆಯನ್ನು ಈ ಸರ್ಕಾಗಳು ನಿರೀಕ್ಷೆ ಮಾಡುತ್ತವೆ ಅನ್ನೋದು ಸದ್ಯ ಜನ ಸಾಮಾನ್ಯರ ಪ್ರಶ್ನೆಯಾಗಿದೆ.