Political News: ರಾಜ್ಯದಲ್ಲಿ ಹಾಲು, ಡಿಸೇಲ್, ಮೆಟ್ರೋ ದರ ಸೇರಿ ಹಲವು ದರಗಳ ಏರಿಕೆಯಾಗಿದ್ದಕ್ಕೆ, ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿರುವ ಅವರು, ಬೆಂಗಳೂರಿಗಿಂತ ನ್ಯೂಯಾರ್ಕ್‌ನಲ್ಲೇ ಆರಾಮವಾಗಿ ಇರಬಹುದು. ಅಲ್ಲಿನ ಅಭಿವೃದ್ಧಿ ಹೇಗೆ ಆಗುತ್ತಿದೆ, ಬೆಂಗಳೂರಿನ ಅಭಿವೃದ್ಧಿ ಹೇಗೆ ಆಗುತ್ತಿದೆ..? ಕಳೆದೆರಡು ವರ್ಷಗಳಿಂದ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ನಾಡಪ್ರಭು ಕೆಂಪೇಗೌಡ ಜಯಂತಿಗೆ ಹಣ ಕಟ್ ಮಾಡಿರುವ ಬಗ್ಗೆ ಆಕ್ರೋಶ ಹೊರಹಾಕಿರುವ ನಿಖಿಲ್, ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಡೆದಿದ್ದು ಅಯ್ತು. ಈಗ ನಾಡಪ್ರಭು ಕೆಂಪೇಗೌಡರ ಜಯಂತಿಗೆ ಹಣ ಕಟ್ ಮಾಡಿದ್ದಾರೆ. ಪೆನ್ನು ಪೇಪರ್ ಕೇಳಿದ ಮಹಾನುಭಾವರು ಏನು ಮಾಡುತ್ತಿದ್ದಾರೆ? ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಆಕಾಶಕ್ಕೆ ಏಣಿ ಹಾಕಲು ಹೊರಟಿರುವ ಡಿಸಿಎಂ ಮಾನ್ಯ ಡಿ.ಕೆ ಶಿವಕುಮಾರ್ ಅವರೇ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ ಅನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಶಾಲೆ ಕಾಲೇಜುಗಳಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ನಿಖಿಲ್, ಅನುದಾನವಿಲ್ಲದೆ ರಾಜ್ಯದ ವಿಶ್ವವಿದ್ಯಾಲಯಗಳು ದಿನೇ ದಿನೇ ಸೊರಗುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ವಿವಿಗಳಿಗೆ ಕೊನೆ ಮೊಳೆ ಹೊಡೆಯುತ್ತಿದೆ. ಈ ಕಡೆ ಸರ್ಕಾರ ಮೈ ಮರೆತು ಕುಂಭಕರ್ಣ ನಿದ್ದೆಗೆ ಜಾರಿದೆ. ಇದರ ನಡುವೆ ಕರ್ನಾಟಕ ಸಂಸ್ಕೃತ ವಿವಿಗೆ ಮೂಲ ಸೌಲಭ್ಯ ಕೊರತೆ ಮತ್ತು ಅನುದಾನವಿಲ್ಲದೆ ದಯನೀಯ ಸ್ಥಿತಿಗೆ ಬಂದಿದೆ ಎಂದು ಬೇಸರ ಹೊರಹಾಕಿದ್ದಾರೆ.