Mandya News: ಮಂಡ್ಯ: ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿ ಸ್ಮರಣೆ ಮಾಡುತ್ತಿದೆ. ಇನ್ನೊಂದೆಡೆ ಬೀದರ್ ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅರಾಜಕತೆಗೆ ಸಾಕ್ಷಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ಮಂಡ್ಯದಲ್ಲಿ ದಿಶಾ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರು ಪ್ರತಿಯೊಂದು ವಿಚಾರದಲ್ಲಿ ರಾಜ್ಯದಲ್ಲಿ ನನ್ನನ್ನು ಬಿಟ್ಟರೆ ಸಚ್ಚಾರಿತ್ರ್ಯ ಇರುವ ವ್ಯಕ್ತಿ ಬೇರೆ ಇಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೋಡಿದರೆ ಅವರ ಆಪ್ತ ಸಹಾಯಕನ ಹೆಸರೇ ಬಂದಿದೆ. ಈ ಸರಕಾರ ಈಗಾಗಲೇ ಗುತ್ತಿಗೆದಾರರ ವಿಷಯದಲ್ಲಿ ಚೆಲ್ಲಾಟ ಆಡಿದೆ. ಈಗಲೂ ಅದನ್ನೇ ಮುಂದುವರಿಸುತ್ತಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ರಾಜ್ಯದಲ್ಲಿ ಜನರ ಸಂಕಷ್ಟದಲ್ಲಿದ್ದಾರೆ. ಅನೇಕ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿದ್ದರೂ ಸರಕಾರ ಜವಾಬ್ದಾರಿ ನಿರ್ವಹಣೆ ಮಾಡದೇ ಅರಾಜಕತೆಯನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳು ನಡೆಯುತ್ತಲೇ ಇವೆ. ಹುಟ್ಟುವ ಮುನ್ನವೇ ಹಸುಗೂಸುಗಳು ಸಾವನ್ನಪ್ಪುತ್ತಿವೆ. ಅವರ ಬಗ್ಗೆ ಈ ಸರಕಾರ ಸಣ್ಣ ಕನಿಕರವನ್ನೂ ತೋರಿಸುತ್ತಿಲ್ಲ. ಸತ್ತ ಹೆಣ್ಣುಮಕ್ಕಳ ಬಗ್ಗೆ ಸರಕಾರ ಸೌಜನ್ಯದ ಮಾತುಗಳನ್ನು ಆಡಿದ್ದನ್ನು ನಾನು ಕೇಳಿಲ್ಲ. ಸತ್ಯಾಂಶ ಇಲ್ಲಿಯವರೆಗೂ ಹೊರಗೆ ತಂದಿಲ್ಲ. ಎಂತೆಂಥ ವಿಷಯಗಳಿಗೆ ಆಯೋಗಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಯಾಕೆ ಆಯೋಗ ಮಾಡಿಲ್ಲ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿರಂತರವಾಗಿ ಅಧಿಕಾರದಲ್ಲಿ ಇದ್ದಾರೆ. ಈಗ ಅವರ ಮಗ ಮಂತ್ರಿ. ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಅನ್ಯಾಯ ಅಂತಾರೆ. ನಿಮ್ಮನ್ನು ಹಿಡಿದುಕೊಂಡವರು ಯಾರು? ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಗಾಂಧೀಜಿ ಹೆಸರು ಹೇಳಲು ಕಾಂಗ್ರೆಸ್ಸಿಗೆ ನೈತಿಕತೆ ಇಲ್ಲ:
ಹಿಂದಿನ ಸರಕಾರದ ಪರ್ಸೆಂಟೆಜ್ ಬಗ್ಗೆ ಆಯೋಗ
ಈ ಸರಕಾರದಲ್ಲಿ ನಡೆಯುತ್ತಿರುವ ಪರ್ಸೆಂಟೆಜ್ ಬಗ್ಗೆ ಯಾವ ಆಯೋಗ ಮಾಡುತ್ತೀರಾ? ಮುಂದೆ ಬರುವ ಸರಕಾರಗಳು ಆಡಳಿತ ನಡೆಸುವ ಅವಶ್ಯಕತೆ ಇಲ್ಲ. ಯಾವ ಪುರುಷಾರ್ಥಕ್ಕೆ ಮಹಾತ್ಮ ಗಾಂಧಿಜೀ ಹೆಸರು ತರುತ್ತಿದ್ದಾರೆ ಇವರು? ಯಾವ ನೈತಿಕತೆ ಇಟ್ಟುಕೊಂಡು ಇವರು ಗಾಂಧೀಜಿ ಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ? ದೇಶಕ್ಕೆ ಏನು ಸಂದೇಶ ಕೊಡಬೇಕು ಎಂದು ಹೊರಟಿದ್ದಾರೆ ಇವರು? ಗಾಂಧಿ ನಡಿಗೆ ಬೇರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯಾ ಎಂಬ ಭಾವನೆ ಜನರಲ್ಲಿ ನಶಿಸಿ ಹೋಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನಾನು ಎಂದು ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ. ರಾಜ್ಯದ ಖಜಾನೆ ಬರಿದಾಗುತ್ತದೆ ಎಂದು ಹೇಳಿಲ್ಲ ನಾನು. ಗ್ಯಾರಂಟಿಗಳನ್ನು ಕೊಟ್ಟು ಕೂಡ ಅಭಿವೃದ್ಧಿ ಮಾಡಬಹುದು. ಇದು ಸರಕಾರಕ್ಕೆ ಬೇಕಿಲ್ಲ. ಗ್ಯಾರಂಟಿಗಳ ಮೂಲಕ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಸುಳ್ಳುಗಾರ ಎಂದು ಅವರು ಹೇಳಬಹುದು, ಹೇಳಿಕೊಳ್ಳಲಿ. ಜನ ಸಾಮಾನ್ಯರ ಮೇಲೆ ಹೊರೆ ಹೊರಿಸಿದ್ದೀರಿ? ಪೆಟ್ರೋಲ್ – ಡಿಸೆಲ್ ಮೇಲೆ ಸೆಸ್ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೇರಿದ್ದಾರೆ. ಮದ್ಯದ ದರ ಏರಿಕೆ ಮಾಡಿದ್ದಾರೆ. ಇದು ದೊಡ್ಡ ಸಾಧನೆಯಾ? ಎಂದು ಅವರು ಪ್ರಶ್ನಿಸಿದರು.
ಆಂಧ್ರವನ್ನು ನೋಡಿ ಇವರು ಕಲಿಯಬೇಕು:
ಆಂಧ್ರ ಪ್ರದೇಶ ಸರಕಾರದ ನಡವಳಿಕೆ ನೋಡಿ ಇವರು ಕಲಿಯಬೇಕು. ವೈಜಾಗ್ ಸ್ಟೀಲ್ ಕಾರ್ಖಾನೆ ಪುನಚ್ಚೇತನಕ್ಕೆ ಸಂಬಂಧಿಸಿ ಈವರೆಗೂ ನನ್ನ ಜತೆ ಹತ್ತಕ್ಕೂ ಹೆಚ್ಚು ಬಾರಿ ಚರ್ಚೆ ಮಾಡಿದ್ದಾರೆ. ಹಲವಾರು ಸಲ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಇದು ಮಾದರಿ ನಡವಳಿಕೆ. ಅಭಿವೃದ್ದಿ ಬಗ್ಗೆ ಅವರ ಬದ್ಧತೆಯನ್ನು ನೋಡಿ ಕಲಿಯಿರಿ. ದಿನ ಕಾಲು ಕೆರೆದುಕೊಂಡು ಜಗಳ ಆಡುವುದಲ್ಲ, ಬೀದರ್ ಪ್ರಕರಣ ಒಂದೇ ಅಲ್ಲ. ಇಂಥ ಎಷ್ಟೋ ಪ್ರಕರಣಗಳು ಈ ಸರಕಾರದ ಕಾಲದಲ್ಲಿ ನಡೆದಿವೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದು ಅನಾಗರಿಕ ಸರಕಾರ:
ರಾಜ್ಯದಲ್ಲಿ ಇರುವುದು ಅನಾಗರೀಕ ಸರಕಾರ. ಮನುಷ್ಯತ್ವ, ಮಾನವೀಯತೆ ಇಲ್ಲದ ಸರಕಾರ. ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಸರಕಾರ. ತಿದ್ದಿಕೊಳ್ಳುವುದಿದ್ದರೇ ತಿದ್ದಿಕೊಳ್ಳಲಿ. ಇಷ್ಟು ದಿವಸ ಅಂಬೇಡ್ಕರ್ ಆಯಿತು, ಇದೀಗ ಗಾಂಧಿ ಹೆಸರು ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬದುಕಿದ್ದಾಗ ಅಂಬೇಡ್ಕರ್ ಅವರನ್ನು ನೆಮ್ಮದಿಯಿಂದ ಬದಕಲು ಬಿಡಲಿಲ್ಲ. ಶೋಷಿತ ವರ್ಗಗಳಿಗೆ ಪ್ರಬಲ ದನಿಯಾಗಿದ್ದ ಅವರನ್ನು ವ್ಯಕ್ತಿಯನ್ನು ಹೇಗೆ ನಡೆಸಿಕೊಂಡರು? ಕೊನೇಪಕ್ಷ ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ. ಅಮಿತ್ ಶಾ ಹೇಳಿಕೆ ಬಗ್ಗೆ ಇವರು ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಅಂಬೇಡ್ಕರ್ ಪೋಟೋ ಇಟ್ಟುಕೊಂಡು ನಿಂತಿದ್ದರು. ಸಿ.ಟಿ.ರವಿ ಪ್ರಕರಣ ಬರುತ್ತಿದ್ದಂತೆಯೇ ಅಂಬೇಡ್ಕರ್ ಪೋಟೋ ಎಲ್ಲೋಯ್ತೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ರಾಜ್ಯದ ಪೊಲೀಸ್ ಇಲಾಖೆ ಮೇಲೆ ದೇಶವೇ ಗೌರವ, ನಂಬಿಕೆ ಇಟ್ಟಿತ್ತು. ಎಲ್ಲರೂ ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅಂತಹ ಪೊಲೀಸ್ ಇಲಾಖೆಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅವರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಏನಾಗಿದೆ ಎನ್ನುವುದು ಜನತೆಗೆ ಗೊತ್ತಿದೆ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಮುಂತಾದವರು ಉಪಸ್ಥಿತರಿದ್ದರು.