ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ಭಯೋತ್ಪಾಕರನ್ನು ಪೋಷಿಸುವ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಇಡೀ ದೇಶಾದ್ಯಂತ ಕೂಗು ಹೆಚ್ಚಾಗಿತ್ತು. ಇದರ ಪರಿಣಾಮವಾಗಿಯೇ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಇದರಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಉಗ್ರರನ್ನೇ ಬೆಂಬಲಿಸುವ ಪಾಕಿಸ್ತಾನ ಕಾಲು ಕೆದರಿ ಭಾರತದ ವಿರುದ್ಧ ದಾಳಿಯ ದುಸ್ಸಾಹಸ ಮಾಡಿತ್ತು. ಆದರೆ ಇದೀಗ ಭಾರತೀಯ ಸೇನೆಯ ಹೊಡೆತಕ್ಕೆ ತತ್ತರಿಸಿರುವ ಪಾಕಿಸ್ತಾನವು ಇದೀಗ ಭಾರತದ ಎದುರು ಮಂಡಿಯೂರಿದೆ.
ಟ್ರಂಪ್ ಕಾಲಿಗೆ ಬಿದ್ದಿದ್ದ ಪಾಕಿಸ್ತಾನ..!
ಇನ್ನೂ ಭಾರತದ ಮೇಲೆ ದಾಳಿ ಮಾಡಿ ಕೆಣಕಿದ್ದ ಪಾಕಿಸ್ತಾನಕ್ಕೆ ಸಾಕಷ್ಟು ಹಾನಿಯಾಗಿದೆ. ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದಿರುವ ಭಾರತವು ಪಾಕಿಸ್ತಾನದ ಪ್ರಮುಖ ನಗರಗಳು, ಸೇನಾ ನೆಲೆಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ದಾಳಿ ನಡೆಸಿತ್ತು. ಇದರಿಂದ ಅಕ್ಷರಶಃ ಪಾಕಿಸ್ತಾನ ನಲುಗಿ ಹೋಗಿತ್ತು. ಹೀಗಾಗಿ ಅಂತಿಮವಾಗಿ ಭಾರತದ ಏಟನ್ನು ತಡೆಯಲಾಗದೇ ಕದನ ವಿರಾಮದ ಮಧ್ಯಸ್ಥಿಕೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಲಿಗೆ ಬಿದ್ದು, ಭಾರತವನ್ನು ಕದನ ವಿರಾಮಕ್ಕೆ ಒಪ್ಪಿಸುವಂತೆ ದುಂಬಾಲು ಬಿದ್ದಿತ್ತು.
ನನಗೆ ಸಂತೋಷವಾಗುತ್ತಿದೆ..
ಪಾಕಿಗಳು ಅಂಗಲಾಚಿಕೊಳ್ಳುವುದನ್ನು ನೋಡಿ ಟ್ರಂಪ್ ಎರಡೂ ದೇಶಗಳೊಂದಿಗೆ ನಿರಂತರ ಮಾತುಕತೆ ನಡೆಸಿ ಕದನ ವಿರಾಮಕ್ಕೆ ಭಾರತದ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡಣ್ಣನ ಮನವಿಗೆ ಒಪ್ಪಿದ ಭಾರತ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದೆ. ಇನ್ನೂ ಈ ಕುರಿತು ಖುದ್ದು ಮಾಹಿತಿ ನೀಡಿರುವ ಟ್ರಂಪ್, ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನಗಳು ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿಮತ್ತೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟ ನಿರಂತರ..
ಇನ್ನೂಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆಯ ಸಚಿವ ಎಸ್.ಜೈಶಂಕರ್, ಭಾರತ ಮತ್ತು ಪಾಕಿಸ್ತಾನ ಇಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಭಾರತವು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ದೃಢ ಮತ್ತು ರಾಜಿಯಾಗದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಅದು ಹಾಗೆಯೇ ಮುಂದುವರಿಯುತ್ತದೆ ಎನ್ನುವ ಮೂಲಕ ಭಯೋತ್ಪಾದನೆಯನ್ನು ಬಗ್ಗು ಬಡಿಯುವ ಗುರಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಜತಾಂತ್ರಿಕತೆ ಅಭಿನಂದಿಸುತ್ತೇನೆ..!
ಇನ್ನೂ ಕಳೆದ 48 ಗಂಟೆಗಳಲ್ಲಿ, ನಮ್ಮ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ನಾನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಶೆಹಬಾಜ್ ಷರೀಫ್, ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಮತ್ತು ಅಸಿಮ್ ಮಲಿಕ್ ಸೇರಿದಂತೆ ಹಿರಿಯ ಭಾರತ ಮತ್ತು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ತಟಸ್ಥ ಸ್ಥಳದಲ್ಲಿ ವ್ಯಾಪಕವಾದ ವಿಷಯಗಳ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುವಲ್ಲಿ ಪ್ರಧಾನಿ ಮೋದಿ ಮತ್ತು ಶರೀಫ್ ಅವರ ಬುದ್ಧಿವಂತಿಕೆ, ವಿವೇಕ ಮತ್ತು ರಾಜತಾಂತ್ರಿಕತೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಮ್ಮ ಟ್ವೀಟ್‌ನಲ್ಲಿ ಘೋಷಿಸಿದ್ದಾರೆ.
ಬಾರತದ ಎದುರು ಶರಣಾದ ಪಾಕಿಸ್ತಾನ..
ಅಲ್ಲದೆ ಪಾಕಿಸ್ತಾನವೂ ಕದನ ವಿರಾಮವನ್ನು ಘೋಷಿಸಿದ್ದು, ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸುತ್ತಿದೆ ಎಂಬ ಟ್ರಂಪ್ ಹೇಳಿಕೆಯನ್ನು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ ಕೂಡ ಒಪ್ಪಿಕೊಳ್ಳುವ ಮೂಲಕ ಭಾರತದ ಎದುರು ಪಾಕಿಸ್ತಾನ ಶರಣಾಗಿದೆ ಎಂದು ಘೋಷಿಸಿದ್ದಾರೆ. ಇನ್ನೂ ಭಾರತ ಹಾಗೂ ಪಾಕಿಸ್ತಾನದ ನಡುವೆ ತಟಸ್ಥ ಜಾಗದಲ್ಲಿ ಸಂಧಾನ ಮಾತುಕತೆ ನಡೆಯಲಿದೆ. ಮೇ 12ರಂದು 12 ಗಂಟೆಗೆ ನಡೆಯುವ ಮಾತುಕತೆಯಲ್ಲಿ ಉಭಯ ದೇಶಗಳ ನಾಯಕರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.