Political News: ಕಳೆದ ಫೆಬ್ರವರಿ 9ರಂದು ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಹಿಂದೆ ದೀರ್ಘಕಾಲದಿಂದ ಮುಖ್ಯಮಂತ್ರಿ ಆಗಿದ್ದರೂ ಸಹ ತಮ್ಮ ರಾಜ್ಯದಲ್ಲಿ ತಲೆದೂರಿದ್ದ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವುದರಲ್ಲಿ ಅವರು ವಿಫಲರಾದ್ದರು. ಈ ವಿಚಾರಕ್ಕೆ ನಿರಂತರ ವಿಪಕ್ಷಗಳು ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಮುಖ್ಯಮಂತ್ರಿಯಾಗಿದ್ದ ಬಿರೇನ್ ಸಿಂಗ್ ವಾಗ್ದಾಳಿಯನ್ನೂ ಸಹ ನಡೆಸಿದ್ದವು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಮುಖ್ಯವಾಗಿ ಬಿರೇನ್ ಸಿಂಗ್ ವಿರುದ್ಧ ಫೆಬ್ರವರಿ 10ರಂದು ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಎಲ್ಲ ಸಿದ್ದತೆಯನ್ನು ನಡೆಸಿತ್ತು. ಇದೇ ಕಾರಣಕ್ಕಾಗಿ ಒಂದು ದಿನ ಮೊದಲೇ ಅವರು ತಮ್ಮ ಸ್ಥಾನವನ್ನು ತ್ಯಜಿಸಿದ್ದರು. ಅಲ್ಲದೆ ಮಣಿಪುರದಲ್ಲಿ ಎರಡು ವರ್ಷಗಳಿಂದ ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಮತ್ತು ಕುಕಿ ಈ ಎರಡೂ ಸಮುದಾಯಗಳ ಜನರ ವಿಶ್ವಾಸವನ್ನೂ ಸಹ ಮುಖ್ಯಮಂತ್ರಿಯಾಗಿದ್ದ ಬಿರೇನ್ ಸಿಂಗ್ ಕಳೆದುಕೊಂಡಿದ್ದರು. ಮುಖ್ಯವಾಗಿ ಇಲ್ಲಿನ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದು, ಅಲ್ಪಸಂಖ್ಯಾತ ಕುಕಿ ಸಮುದಾಯವನ್ನು ರೊಚ್ಚಿಗೆಬ್ಬಿಸಿತ್ತು. ಇದು ಜನಾಂಗೀಯ ಹಿಂಸಾಚಾರಗಳಿಗೆ ಕಾರಣವಾಗಿದ್ದಲ್ಲದೆ ಬೆತ್ತಲೆ ಮಹಿಳೆಯ ಮೆರವಣಿಗೆಯಂತಹ ಅಮಾನುಷ ಕೃತ್ಯಗಳಿಗೆ ಕಾರಣವಾಗಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತಾರೂಢ ಬಿಜೆಪಿಯಲ್ಲೇ ಮುಖ್ಯಮಂತ್ರಿ ವಿರುದ್ಧ ಅಸಮಾಧಾನವೂ ಸಹ ಭುಗಿಲೆದ್ದಿತ್ತು. ಅಲ್ಲದೆ ತನ್ನದೇ ಪಕ್ಷದ ಹಲವು ಶಾಸಕರಿಂದ ಅವರು ವಿರೋಧ ಎದುರಿಸುತ್ತಿದ್ದರು. ಒಂದು ಮಾಹಿತಿಯ ಪ್ರಕಾರ, 60 ಸದಸ್ಯಬಲದ ವಿಧಾನಸಭೆಯಲ್ಲಿ 21 ಮಂದಿ ಶಾಸಕರಷ್ಟೇ ಬಿರೇನ್ ಅವರನ್ನು ಬೆಂಬಲಿಸುತ್ತಿದ್ದರು. ಅಲ್ಲದೆ ಇನ್ನುಳಿದ ಶಾಸಕರು ಪಕ್ಷದ ವಿಪ್ ಉಲ್ಲಂಘನೆಯ ಭೀತಿಯು ಬಿಜೆಪಿ ನಾಯಕರಿಗಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿರೇನ್ ಸಿಂಗ್ ಅವರನ್ನ ಕೆಳಗಿಳಿಸಿತ್ತು
ಅಲ್ಲದೆ ಬಿರೇನ್ ಸಿಂಗ್ ಬಳಿಕ ನೂತನ ಮುಖ್ಯಮಂತ್ರಿಯನ್ನು ಮಣಿಪುರಕ್ಕೆ ನಿಯೋಜಿಸಲು ಬಿಜೆಪಿ ನಾಯಕರು ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಕಸರತ್ತನ್ನು ನಡೆಸುತ್ತಿದ್ದರು. ಆದರೆ ಅಂತಿಮವಾಗಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಇದೀಗ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದೆ.